ಅಮೆರಿಕಾದಲ್ಲಿ ಹೆಚ್ಚಿದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ

Posted By:

ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಭಾರತೀಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ.

ಇನ್‌ಸ್ಟಿಟ್ಯೂಟ್‌ ಆಫ್‌ ಇಂಟರ್‌ನ್ಯಾಷನಲ್‌ ಎಜುಕೇಶನ್‌ (ಐಐಇ) ಸಂಸ್ಥೆ ಬಿಡುಗಡೆ ಮಾಡಿದ ವಾರ್ಷಿಕ 'ಓಪನ್‌ ಡೋರ್ಸ್‌' ವರದಿಯಲ್ಲಿ ಈ ವಿಚಾರ ತಿಳಿದುಬಂದಿದೆ.

ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.12.3 ರಷ್ಟು ಏರಿಕೆಯಾಗಿದ್ದು, ಚೀನಾ ನಂತರ ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರತ 2ನೇ ಸ್ಥಾನ ಪಡೆದಿದೆ.

ಅಮೆರಿಕಾದಲ್ಲಿ 1.86 ಲಕ್ಷ ಭಾರತೀಯ ವಿದ್ಯಾರ್ಥಿಗಳು

2016-17ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅಮೆರಿಕದಲ್ಲಿ 1,86,267 ಭಾರತದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದರು, 2016ರಲ್ಲಿ ಅಮೆರಿಕದ ಆರ್ಥಿಕತೆಯಲ್ಲಿ ಭಾರತದ ದೇಣಿಗೆ 42556 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಎಂದು 'ಓಪನ್‌ ಡೋರ್ಸ್‌' ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಪೈಕಿ ಪದವಿ ಹಂತದ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದು ಎಂದು ವರದಿ ಹೇಳುತ್ತದೆ. ಐಐಇ ಪ್ರಕಾರ 2016-17ನೇ ಶೈಕ್ಷಣಿಕ ಸಾಲಿನ ವಿವರ ಹೀಗಿದೆ: ಪದವಿಪೂರ್ವ ಹಂತ-ಶೇಕಡ 11.8, ಪದವಿ ಹಂತ-ಶೇ.56.3, ಇತರ-1.2, ಒಪಿಟಿ (ಆಪ್ಶನಲ್‌ ಪ್ರ್ಯಾಕ್ಟಿಕಲ್‌ ಟ್ರೈನಿಂಗ್‌)-ಶೇ.30.7. ಇದೆ.

2016-17ರಲ್ಲಿ, ಸತತ 2ನೇ ವರ್ಷ, ಅಮೆರಿಕದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ದಾಖಲೆಗೈದಿವೆ. ಒಟ್ಟು 10 ಲಕ್ಷದ 80 ಸಾವಿರ ವಿದೇಶಿ ವಿದ್ಯಾರ್ಥಿಗಳು ಅಮೆರಿಕಕ್ಕೆ ತೆರಳಿದ್ದಾರೆ ಎನ್ನಲಾಗಿದೆ

2017ರ ಓಪನ್‌ ಡೋರ್ಸ್‌ ವರದಿಯನ್ವಯ, ಇದೀಗ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಹಿಂದಿನ ವರ್ಷಗಳಿಗಿಂತ ಶೇ.3ರಷ್ಟು ವೃದ್ಧಿಸಿದೆ.

ಇದೇ ವೇಳೆ, ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡುವ ಅಮೆರಿಕ ವಿದ್ಯಾರ್ಥಿಗಳ ಸಂಖ್ಯೆ ಶೇ.4ರಷ್ಟು ಹೆಚ್ಚಳಗೊಂಡಿದೆ. ಆದರೆ ಈ ನಡುವೆ ಭಾರತದಲ್ಲಿ ವಿದ್ಯಾಭ್ಯಾಸ ಮಾಡುವ ಅಮೆರಿಕದ ವಿದ್ಯಾರ್ಥಿಗಳ ಸಂಖ್ಯೆ 4,438ರಿಂದ 4,181ಕ್ಕೆ ಕುಸಿತ ಕಂಡಿದೆ. ಅಂತೆಯೇ ಭಾರತದ ರ್ಯಾಂಕಿಂಗ್ ಕೂಡ 15ಕ್ಕೆ ಕುಸಿದಿದೆ.

ಸಾಮಾನ್ಯವಾಗಿ ಚೀನಾ, ಭಾರತ, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಕೆನಡಾ, ವಿಯೆಟ್ನಾಂ, ತೈವಾನ್‌, ಜಪಾನ್‌, ಮೆಕ್ಸಿಕೊ ಹಾಗೂ ಬ್ರೆಜಿಲ್‌ ದೇಶಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳುತ್ತಾರೆ. ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಅಮೆರಿಕದ ರಾಜ್ಯಗಳ ಪೈಕಿ ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್‌, ಟೆಕ್ಸಾಸ್‌, ಮಸ್ಸಾಚುಸೆಟ್ಸ್‌, ಇಲಿನೊಯಿಸ್‌, ಪೆನ್ಸಿಲ್ವೇನಿಯಾ, ಫೋರಿಡಾ, ಒಹಿಯೊ, ಮಿಶಿಗನ್‌ ಹಾಗೂ ಇಂಡಿಯಾನಾ ಮುಖ್ಯವಾದವು.

English summary
Indians registered an impressive double-digit growth of 12.3 per cent in the last one year to become the second largest group of international students in the US after China.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia