ಜಂಟಿ ಪ್ರವೇಶ ಪರೀಕ್ಷೆ(ಐಐಟಿ-ಜೆಇಇ)ಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆನ್‌ಲೈನ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಚೆನ್ನೈನಲ್ಲಿ ಭಾನುವಾರ ನಡೆದ ಐಐಟಿ ಜಂಟಿ ಪ್ರವೇಶ ಮಂಡಳಿ (ಜೆಎಬಿ) ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ದೇಶದ 23 ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಪ್ರವೇಶ ಪರೀಕ್ಷೆಯಲ್ಲಿ ಪಾರದರ್ಶಕತೆ ಮತ್ತು ಸುಧಾರಣೆ ತರಲು ಆನ್- ಲೈನ್ ಪರೀಕ್ಷೆ ನಡೆಸಲಾಗುತ್ತಿದ್ದು, ಪೆನ್ನು ಮತ್ತು ಪೇಪರ್ ಬಳಕೆಯನ್ನು ಕೈ ಬಿಡಲಾಗುತ್ತಿದೆ.
ಅಭ್ಯರ್ಥಿಗಳು ಇನ್ನು ಮುಂದೆ ಜೆಇಇ-ಅಡ್ವಾನ್ಸ್ಡ್ ಪರೀಕ್ಷೆಯನ್ನು ಅನ್‌ಲೈನ್‌ನಲ್ಲಿಯೇ ಬರೆಯಬೇಕಾಗುತ್ತದೆ. ಈ ವರ್ಷ ಅಭ್ಯರ್ಥಿಗಳಿಗೆ ಪೆನ್ನು ಮತ್ತು ಕಾಗದ ಬಳಕೆ ಹಾಗೂ ಆನ್‌ಲೈನ್ ಆಯ್ಕೆಗೆ ಅವಕಾಶ ನೀಡಲಾಗಿತ್ತು ಆದರೆ ಹೆಚ್ಚಿನ ಅಭ್ಯರ್ಥಿಗಳು ಸಾಂಪ್ರದಾಯಿಕ ಪದ್ಧತಿಯನ್ನೇ ಆಯ್ಕೆ ಮಾಡಿಕೊಂಡಿದ್ದರು.
ಜೆ ಇ ಇ ಪರೀಕ್ಷೆಗಳು
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ ಮತ್ತು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ), ನವದೆಹಲಿ, ಸಹಯೋಗದೊಂದಿಗೆ ಆಯೋಜಿಸುವ ಜಂಟಿ ಪ್ರವೇಶ ಪರೀಕ್ಷೆ. ವೃತ್ತಿಪರ ಕೋರ್ಸುಗಳಿಗೆ ಸೇರುವ ವಿದ್ಯಾರ್ಥಿಗಳಲ್ಲಿ ಒತ್ತಡ ಕಡಿಮೆಮಾಡಲು ಹಾಗು ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಬಯಸುವವರಿಗೆ ಜೆ ಇ ಇ ಪರೀಕ್ಷೆಗಳು ಸಹಕಾರಿಯಾಗಿವೆ.
ಜೆ.ಇ.ಇ. ಪರೀಕ್ಷೆಗಳು ರಾಷ್ಟ್ರ ಮಟ್ಟದ ತಾಂತ್ರಿಕ ವಿದ್ಯಾಸಂಸ್ಥೆಗಳಿಗೆ ಪ್ರವೇಶವನ್ನು ಪಡೆಯಲು ತೆಗೆದುಕೊಳ್ಳಬೇಕಾದಂಥವು. ಐ.ಐ.ಟಿ., ಎನ್.ಐ.ಟಿ., ಐ.ಎಸ್.ಇ.ಆರ್., ಮುಂತಾದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಶುದ್ಧ ವಿಜ್ಞಾನವನ್ನೋ ಅಥವಾ ಅನ್ವಯ ವಿಜ್ಞಾನವನ್ನೋ ಅಧ್ಯಯನ ಮಾಡಲು ಜೆ.ಇ.ಇ. ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯಬೇಕು. ಜೆ.ಇ.ಇ. ಆಯ್ಕೆ ಪರೀಕ್ಷೆಗಳು ತಮ್ಮದೇ ಆದ ಪಠ್ಯವನ್ನು ಆಧರಿಸಿರುತ್ತವೆ.