ಲಿಮ್ಕಾ ದಾಖಲೆ ಪುಸ್ತಕ ಸೇರಿದ ಜೆಇಇ ಟಾಪರ್ ಕಲ್ಪಿತ್

Posted By:

ಪ್ರತಿಷ್ಠಿತ ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ-ಮುಖ್ಯ) ಶೇ 100 ಅಂಕ ಗಳಿಸಿದ ದೇಶದ ಮೊದಲ ವಿದ್ಯಾರ್ಥಿ, ಉದಯಪುರದ ಕಲ್ಪಿತ್‌ ವೀರ್‌ವಾಲ್‌ ಹೆಸರು ಈಗ ಲಿಮ್ಕಾ ದಾಖಲೆ ಪುಸ್ತಕದಲ್ಲಿ ದಾಖಲಾಗಿದೆ.

ಜಿಇಇ ಪರೀಕ್ಷೆ ಇತಿಹಾಸದಲ್ಲೇ ಇದು ಮೊದಲ ಸಾಧನೆಯಾಗಿದ್ದು, ಈ ಸಾಧನೆಯನ್ನು ಗುರುತಿಸಿದ ಲಿಮ್ಕಾ ಸಂಸ್ಥೆಯು ಲಿಮ್ಕಾ ದಾಖಲೆ ಪುಸ್ತಕದ 2018ನೇ ವರ್ಷದ ಆವೃತ್ತಿಯ 'ಶೈಕ್ಷಣಿಕ ಸಾಧನೆಗಳು' ವಿಭಾಗದಲ್ಲಿ ಕಲ್ಪಿತ್‌ ಹೆಸರನ್ನು ಸೇರಿಸಿಕೊಂಡಿದೆ.

360 ಕ್ಕೆ 360

ಜೆಇಇ ಪರೀಕ್ಷೆಯಲ್ಲಿ 360 ಕ್ಕೆ 360 ಅಂಕಗಳಿಸುವ ಮೂಲಕ ಶೇ.100 ಅಂಕಗಳನ್ನು ಪಡೆದು ಸಾಮಾನ್ಯ ಮತ್ತು ಪರಿಶಿಷ್ಟ ಜಾತಿ ಎರಡೂ ವರ್ಗದಲ್ಲಿ ಮೊದಲ ಸ್ಥಾನ ಪಡೆದಿದ್ದರು. ಜೆಇಇ-ಅಡ್ವಾನ್ಸ್ಡ್‌ನಲ್ಲಿ ಅವರು 109ನೇ ರ‍್ಯಾಂಕ್‌ ಪಡೆದಿದ್ದರು. ಈಗ ಅವರು ಬಾಂಬೆ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ) ಕಂಪ್ಯೂಟರ್‌ ಸೈನ್ಸ್‌ ಅಧ್ಯಯನ ನಡೆಸುತ್ತಿದ್ದಾರೆ.

ಲಿಮ್ಕಾ ದಾಖಲೆ ಪುಸ್ತಕದಲ್ಲಿ  ಕಲ್ಪಿತ್

'ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ವಿಶ್ವಾಸ ಇತ್ತು. ಆದರೆ, ಶೇ 100 ಅಂಕಗಳನ್ನು ನಿರೀಕ್ಷಿಸಿರಲಿಲ್ಲ. ಲಿಮ್ಕಾ ದಾಖಲೆ ಪುಸ್ತಕದಲ್ಲಿ ಹೆಸರು ದಾಖಲಾಗುತ್ತದೆ ಎಂಬ ಕನಸನ್ನು ಕಂಡೇ ಇರಲಿಲ್ಲ .ನಾನು ದಿನಕ್ಕೆ 15 ಗಂಟೆಗಳ ಕಾಲ ಓದುತ್ತಿರಲಿಲ್ಲ. ಐಐಟಿ ಸಿದ್ಧತೆಗಾಗಿ ಕೋಟಾಕ್ಕೂ ಹೋಗಿರಲಿಲ್ಲ. ಆದರೆ, ನಿರಂತರ ಅಧ್ಯಯನ ನನಗೆ ತುಂಬಾ ಸಹಾಯ ಮಾಡಿದೆ' ಎಂದು ಕಲ್ಪಿತ್‌ ಹೇಳಿದ್ದಾರೆ.

ತಂದೆ ಸರ್ಕಾರಿ ಆಸ್ಪತ್ರೆ ಕಾಂಪೌಂಡರ್ ಕಲ್ಪಿತ್ ತಂದೆ ಪುಷ್ಕರ್ ಲಾಲ್ ವೀರ್ವಾಲ್ ಉದಯ್ ಪುರದ ಮಹಾರಾಣ ಭೂಪಾಲ್ ಸರ್ಕಾರಿ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ತಾಯಿ ಪುಷ್ಪ ವೀರ್ವಾಲ್ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದಾರೆ. ಕಲ್ಪಿತ್ ಹಿರಿಯ ಸಹೋದರ ಎಐಐಎಂಎಸ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.

ವಿವಿಧ ಐಐಟಿ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶಕ್ಕಾಗಿ ನಡೆಯುವ ಜೆಇಇಗೆ (ಮುಖ್ಯ ಪರೀಕ್ಷೆಗೆ) ಈ ಬಾರಿ 11.8 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ, 2.2 ಲಕ್ಷ ವಿದ್ಯಾರ್ಥಿಗಳು ಎರಡನೇ ಮತ್ತು ಅಂತಿಮ ಹಂತದ ಜೆಇಇ-ಅಡ್ವಾನ್ಸ್ಡ್‌ಬರೆಯಲು ಅರ್ಹತೆ ಪಡೆದಿದ್ದರು.

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮಾನವ ಮತ್ತು ನೈಸರ್ಗಿಕ ವಿಶ್ವ ದಾಖಲೆಗಳನ್ನು ದಾಖಲಿಸುವ ಒಂದು ವಾರ್ಷಿಕ ಉಲ್ಲೇಖ ಪುಸ್ತಕವಾಗಿದೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಲಿಮ್ಕಾ ಬ್ರಾಂಡ್ನ ವಿಸ್ತರಣೆಯಾಗಿದೆ. 1990 ರಲ್ಲಿ ಭಾರತದಲ್ಲಿ ಬಿಡುಗಡೆಯಾಯಿತು, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಂತರ ಇದು ವಿಶ್ವದ ಎರಡನೇ ಪುಸ್ತಕವಾಗಿದೆ.

ಶಿಕ್ಷಣ, ಸಾಹಿತ್ಯ, ಕೃಷಿ, ವೈದ್ಯಕೀಯ ವಿಜ್ಞಾನ, ವ್ಯವಹಾರ, ಕ್ರೀಡೆ, ಪ್ರಕೃತಿ, ಸಾಹಸ, ರೇಡಿಯೋ, ಮತ್ತು ಚಲನಚಿತ್ರ ಸೇರಿದಂತೆ ಇನ್ನು ಹಲವಾರು ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಲಿಮ್ಕಾ ತನ್ನಲ್ಲಿ ದಾಖಲಿಸಿಕೊಳ್ಳುತ್ತದೆ.

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ವಾರ್ಷಿಕವಾಗಿ ಮೂರು ಭಾಷೆಗಳಲ್ಲಿ (ಇಂಗ್ಲಿಷ್, ಹಿಂದಿ ಮತ್ತು ಮಲಯಾಳಂ) ಪ್ರಕಟಗೊಳ್ಳುತ್ತದೆ.

English summary
The first-ever student to have scored 100 percent in the prestigious Joint Entrance Examination- Mains, Udaipur boy Kalpit Veerwal has made it to the Limca Book of Records for his feat.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia