ಕುತೂಹಲ ಹುಟ್ಟಿಸುವ ಜೀವಶಾಸ್ತ್ರ ಕನ್ನಡ ನಿಘಂಟು

Posted By:

ಜೀವಶಾಸ್ತ್ರದ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಹಾಗೂ ಸಂಶೋಧಕರಿಗೆ ಸಹಾಯವಾಗಲೆಂದೇ ಪ್ರೊ.ಎಸ್.ಎನ್.ಹೆಗಡೆ ಜೀವಶಾಸ್ತ್ರದ ನಿಘಂಟನ್ನು ಒಂದು ವರ್ಷ ಅವಧಿಯಲ್ಲಿ ಸಿದ್ಧಪಡಿಸಿದ್ದಾರೆ.

ಪ್ರೊ.ಎಸ್‌.ಎನ್‌.ಹೆಗಡೆ ರಚಿಸಿರುವ ನಿಘಂಟು (ಇಂಗ್ಲಿಷ್‌- ಇಂಗ್ಲಿಷ್‌- ಕನ್ನಡ) ಜೀವಶಾಸ್ತ್ರಕ್ಕಷ್ಟೇ ಸೀಮಿತವಾಗಿದ್ದು ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪ್ರಾಣಿವಿಜ್ಞಾನ ಮತ್ತು ಸಸ್ಯವಿಜ್ಞಾನದ ಪದಗಳನ್ನು ಒಳಗೊಂಡಿದೆ.

ಜೀವಶಾಸ್ತ್ರದ ನಿಘಂಟಿನಲ್ಲಿ 361 ಪುಟಗಳಿದ್ದು, 5,870 ಪದಗಳು ಇವೆ. 360 ಚಿತ್ರಗಳಿವೆ. ಧಾರವಾಡದ ರಾಮಾಶ್ರಯ ಪುಸ್ತಕಾಲಯದ ಚೈತನ್ಯ ಪ್ರಕಾಶನ ಈ ಪದಕೋಶವನ್ನು ಪ್ರಕಟಿಸಿದೆ.

ಕನ್ನಡ ಜೀವಶಾಸ್ತ್ರ ಪದಕೋಶ

ನಿಘಂಟಿನ ವಿಶೇಷ

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಆಕ್ಸ್‌ಫರ್ಡ್‌ ಡಿಕ್ಷನರಿ ಆಫ್‌ ಬಯಾಲಜಿ, ಮೈಸೂರು ವಿಶ್ವವಿದ್ಯಾನಿಲಯದ ನಿಘಂಟನ್ನು ಆಧಾರವಾಗಿಟ್ಟುಕೊಂಡು ಪದ­ಗಳನ್ನು ಆಯ್ಕೆ ಮಾಡಲಾಗಿದೆ. ಪದ, ಪದದ ಉಚ್ಚಾರಣೆ, ಒಂದು ವ್ಯಾಖ್ಯೆ, ಕನ್ನಡ ಅರ್ಥ ಇವೆ. ಅಗತ್ಯ ಇರುವ ಕಡೆಗಳಲ್ಲಿ ಏಕವಚನ ಮತ್ತು ಬಹುವಚನ ರೂಪಗಳು ಇವೆ. ಒಂದು ಪದಕ್ಕೆ ಹಲವಾರು ಅರ್ಥಗಳಿದ್ದರೆ, ಅವುಗಳನ್ನು ನೀಡಲಾಗಿದೆ.

ಸಾಮಾನ್ಯ ನಿಘಂಟುಗಳಿಗಿಂತ ಇದು ಭಿನ್ನವಾಗಿದೆ. ಜೀವವಿಜ್ಞಾನ ವಿಷಯ ಕೇಂದ್ರೀಕರಿಸಿ ಸಿದ್ಧಪಡಿಸಿರುವುದು ಇದರ ವೈಶಿಷ್ಟ್ಯವಾಗಿದೆ. ಲೇಖಕರಿಗೆ, ಕೃತಿ ರಚಿಸುವವರಿಗೆ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಬೋಧಕರಿಗೆ ಇದು ಉಪಯುಕ್ತವಾಗಲಿದೆ. ಜೀವಶಾಸ್ತ್ರದ ನಿಘಂಟಿನಲ್ಲಿ 361 ಪುಟಗಳಿದ್ದು, 5,870 ಪದಗಳು ಇವೆ. 360 ಚಿತ್ರಗಳಿವೆ.

ತೀರಾ ಸಾಮಾನ್ಯವಾದ ಪದಗಳನ್ನು (ಹಸು, ಕತ್ತೆ, ಕುದುರೆ, ಕುರಿ...) ಕೈಬಿಡಲಾಗಿದೆ. Genetic engineering= ಅನುವಂಶಿಕ ತಂತ್ರಜ್ಞಾನ, dna blotting= 'ಡಿಎನ್‌ಎ ತುಣುಕುಗಳನ್ನು ಪ್ರತ್ಯೇಕಿಸಿ ಗುರುತಿಸುವ ತಂತ್ರ' ಈ ರೀತಿಯ ಹೊಸ ಪದಗಳನ್ನು ಸೇರಿಸಲಾಗಿದೆ. ಅಗತ್ಯ ಇರುವ ಕಡೆಗಳಲ್ಲಿ ಪ್ರಾಣಿ, ಪಕ್ಷಿ, ಸಸ್ಯ, ಹೂವುಗಳ ಚಿತ್ರಗಳು ಇವೆ.

ನಿಘಂಟು ಸಿದ್ಧಪಡಿಸಲು ಪ್ರೇರಣೆ

ಮೈಸೂರು ವಿಶ್ವವಿದ್ಯಾನಿಲಯದ ಪ್ರಾಣಿವಿಜ್ಞಾನ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್‌.ಎನ್‌.ಹೆಗಡೆ ಅವರು ಪದಕೋಶವನ್ನು ಸಿದ್ಧಪಡಿಸಿದ್ದಾರೆ. 41 ವರ್ಷಗಳ ಬೋಧನಾ ಅನುಭವ ಹೊಂದಿದ್ದಾರೆ. ಮೈಸೂರು ವಿ.ವಿ ಪ್ರಕಟಿಸಿರುವ ಪ್ರಾಣಿವಿಜ್ಞಾನ ಕನ್ನಡ ವಿಷಯ ವಿಶ್ವಕೋಶದ ಗೌರವ ಸಂಪಾದಕ ಜವಾಬ್ದಾರಿ ನಿರ್ವಹಿಸುವಾಗ ಎದುರಿಸಿದ ಸಮಸ್ಯೆಗಳು ಈ ಪದಕೋಶ ರಚನೆಗೆ ಅವರನ್ನು ಕೈಹಾಕುವಂತೆ ಮಾಡಿತು ಎನ್ನುವುದು ಲೇಖಕರ ಮಾತು.

ಪ್ರೊ.ಎಸ್.ಎನ್.ಹೆಗಡೆ ಅವರು ವಿಶ್ವಕೋಶಕ್ಕೆ ಲೇಖನಗಳನ್ನು ಬರೆಯಲು ಶುರುಮಾಡಿದಾಗ ಕನ್ನಡದಲ್ಲಿ ವೈಜ್ಞಾನಿಕ ಪದಗಳು ದೊರೆಯದೆ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಜೀವವಿಜ್ಞಾನ ವಿಷಯದ ಕನ್ನಡ ಪದಗಳನ್ನು ಒಂದೆಡೆ ಸಂಗ್ರಹಿಸುವ ಅಗತ್ಯವಿದೆ ಎಂಬುದನ್ನು ಮನಗಂಡು, ಪದಕೋಶದ ರಚನೆಯಲ್ಲಿ  ಕಾರ್ಯೋನ್ಮುಖರಾಗಿ ಒಂದು ವರ್ಷದಲ್ಲಿ ಜೀವಶಾಸ್ತ್ರದ ನಿಘಂಟನ್ನು ಸಿದ್ಧಪಡಿಸಿದ್ದಾರೆ.

ನೀಟ್ ಪರೀಕ್ಷೆಗೆ ಸಹಾಯವಾಗಲಿರುವ ನಿಘಂಟು

'ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್‌) ಕನ್ನಡದಲ್ಲಿಯೂ ಬರೆಯಲು ಅವಕಾಶ ದೊರೆಯುವುದರಿಂದ ಕನ್ನಡದ ವಿದ್ಯಾರ್ಥಿಗಳಿಗೆ ಈ ನಿಘಂಟು ಹೆಚ್ಚು ಉಪಯುಕ್ತವಾಗಲಿದೆ.

ಜೀವಶಾಸ್ತ್ರದ ಹಲವು ಕ್ಲಿಷ್ಟ ಪದಗಳನ್ನು ಸರಳವಾಗಿ ಕನ್ನಡದಲ್ಲಿ ಅರ್ಥಮಾಡಿಕೊಳ್ಳಲು ಸಾಕಷ್ಟು ಸಹಾಯಕಾರಿಯಾಗಿದೆ ಎನ್ನುವುದು ಲೇಖಕರ ಮಾತು.

English summary
Professor S.N.Hegde's kannada dictionary of biology is ready to release.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia