2021ನೇ ಸಾಲಿನಲ್ಲಿ ಅಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಫಲಿತಾಂಶವನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಇಂದು ಬೆಳಿಗ್ಗೆ 10:30ಕ್ಕೆ ಪ್ರಕಟಿಸಿದ್ದಾರೆ. ಈ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಇದೀಗ ಫಲಿತಾಂಶವನ್ನು ವೀಕ್ಷಿಸಬಹುದು.

ಈಗಾಗಲೇ ದ್ವಿತೀಯ ಪಿಯುಸಿ ಫಲಿತಾಂಶಗಳು ಪ್ರಕಟವಾಗಿದ್ದು, ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳ ಹಾಗೂ ಪುನರಾವರ್ತಿ ಅಭ್ಯರ್ಥಿಗಳ ಫಲಿತಾಂಶ ಇಂದು ಹೊರಬಿದ್ದಿದೆ. ಫಲಿತಾಂಶದಲ್ಲಿ ಪಾಸ್ ಆದವರಿಗಿಂದ ಫೇಲ್ ಆದವರ ಸಂಖ್ಯೆ ಹೆಚ್ಚಾಗಿ ಕಂಡುಬಂದಿದೆ. ಇದೀಗ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಫಲಿತಾಂಶವನ್ನು ವೀಕ್ಷಿಸಬಹುದು.

ಪರೀಕ್ಷೆಯಲ್ಲಿ ಪಾಸ್ ಆದವರ ಸಂಖ್ಯೆ ಎಷ್ಟು ? :
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 18,414 ವಿದ್ಯಾರ್ಥಿಗಳ ಪೈಕಿ 5,507 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 12,906 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. 556 ಪ್ರೆಶರ್ಸ್, 183 ರಿಪೀಟರ್ಸ್ ಪಾಸ್ ಆಗಿದ್ದಾರೆ. 17,470 ಖಾಸಗಿ ವಿದ್ಯಾರ್ಥಿಗಳ ಪೈಕಿ 4,768 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 600ಕ್ಕೆ 573 ಅತಿ ಹೆಚ್ಚು ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 600 ಅಂಕಕ್ಕೆ 592 ಅತಿ ಹೆಚ್ಚು ಅಂಕ ಮತ್ತು ವಾಣಿಜ್ಯ ವಿಭಾಗದಲ್ಲಿ 600ಕ್ಕೆ 594 ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

ಈ ಮುಂಚೆ ಪರೀಕ್ಷೆಗೆ ಹಾಜರಾದವರ ಸಂಖ್ಯೆ:
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶಗಳನ್ನು ಜುಲೈ 20 ರಂದು ಘೋಷಿಸಲಾಗಿತ್ತು. ಈ ವರ್ಷ 3,35,138 ಹುಡುಗರು ಮತ್ತು 3,31,359 ಹುಡುಗಿಯರು ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 1,95,650 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ , 1,47,055 ದ್ವಿತೀಯ ಸ್ಥಾನ ಪಡೆದರು ಮತ್ತು 68,729 ಮಂದಿ ಯಾವುದೇ ಶ್ರೇಣಿಯಿಲ್ಲದೆ ಉತ್ತೀರ್ಣರಾಗಿದ್ದರು. ಒಟ್ಟಾರೆಯಾಗಿ 4,50,706 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ಈ ಫಲಿತಾಂಶದಿಂದ ಸಮಾಧಾನವಾಗದ ವಿದ್ಯಾರ್ಥಿಗಳಿಗೆ ಆಗಸ್ಟ್-ಸೆಪ್ಟೆಂಬರ್ ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಫಲಿತಾಂಶಗಳು ಇಂದು ಹೊರಬೀಳಲಿದ್ದು, ಒಟ್ಟಾರೆ ಫಲಿತಾಂಶಗಳು ಸುಧಾರಣೆ ಕಾಣುವ ಸಾಧ್ಯತೆ ಇದೆ.

ಮೌಲ್ಯಮಾಪನ ಪ್ರಕ್ರಿಯೆ ಹೇಗಿತ್ತು ?:
ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು, ವಿದ್ಯಾರ್ಥಿಗಳಿಗೆ ಹತ್ತನೇ ತರಗತಿಯಲ್ಲಿ ವಿಷಯವಾರು ಪಡೆದಿದ್ದ ಅಂಕಗಳ ಶೇ. 45 ರಷ್ಟು ಅಂಕ ಗಳಿಗೆ ಹಾಗೂ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಗಳಿಸಿರುವ ಅಂಕದಲ್ಲಿ ಶೇ. 45 ಅಂಕವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಹಾಗೂ ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಚಟುವಟಿಕೆಗೆ ಶೇ. 10 ರಷ್ಟು ಅಂಕಗಳನ್ನು ನೀಡಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಜೊತೆಗೆ ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳಿಗೆ ಶೇ. 5 ಸೇರಿಸಿ ಫಲಿತಾಂಶ ನೀಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ :
ಈ ಮುಂಚೆ ಘೋಷಿಸಿದ್ದ ದ್ವಿತೀಯ ಪಿಯುಸಿ ಫಲಿತಾಂಶವನ್ನು ತಿರಸ್ಕರಿಸಿ ಮತ್ತೆ ಪರೀಕ್ಷೆ ಬರೆಯುವುದಾಗಿ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದರು. ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ನೊಂದಾಯಿಸಿಕೊಳ್ಳಲು ಜುಲೈ ೩೦ರ ವರೆಗೆ ಅವಕಾಶ ನೀಡಲಾಗಿತ್ತು. ಪರೀಕ್ಷೆಗೆ ನೊಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಆಗಸ್ಟ್ 19 ರಿಂದ ಸೆಪ್ಟೆಂಬರ್ 3 ರವರೆಗೆ ಪರೀಕ್ಷೆ ನಡೆಸಲಾಯಿತು. ಇದೀಗ ಈ ಪರೀಕ್ಷೆಯ ಫಲಿತಾಂಶ ಇಂದು ಹೊರಬೀಳಲಿದೆ.

ಮತ್ತೆ ಪರೀಕ್ಷೆ ಬರೆದ ಮಂದಿ ಎಷ್ಟು ?
ಪ್ರಸಕ್ತ ಸಾಲಿನಲ್ಲಿ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶವನ್ನು ತಿರಸ್ಕರಿಸಿ ಒಟ್ಟು 18 ಸಾವಿರದ 414 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. ಇದರಲ್ಲಿ 17,470 ಖಾಸಗಿ ವಿದ್ಯಾರ್ಥಿಗಳು, 351 ಪುನರಾವರ್ತಿತ ಅಭ್ಯರ್ಥಿಗಳು, 592 ಪ್ರೆಶರ್ಸ್ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ರಾಜ್ಯದ 187 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು.

ದ್ವಿತೀಯ ಪಿಯುಸಿ ಫಲಿತಾಂಶ ವೀಕ್ಷಿಸುವುದು ಹೇಗೆ ? :
ಸ್ಟೆಪ್ 1: ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ http://karresults.nic.in./ ಅಥವಾ http://pue.kar.nic.in/ ಗೆ ಭೇಟಿ ನೀಡಿ
ಸ್ಟೆಪ್ 2: ಅಲ್ಲಿ ನಿಮ್ಮ ರಿಜಿಸ್ಟ್ರೇಶನ್ ನಂಬರ್ ಜೊತೆಗೆ ಕೇಳಲಾಗಿರುವ ಮಾಹಿತಿಯನ್ನು ತುಂಬಿ
ಸ್ಟೆಪ್ 3: ಸ್ಕ್ರೀನ್ ಮೇಲೆ ಫಲಿತಾಂಶ ಲಭ್ಯವಾಗುವುದು ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ.