ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರದಂದು 2022-23ನೇ ಸಾಲಿನ ತಮ್ಮ ಚೊಚ್ಚಲ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಣ ವಲಯಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಬಜೆಟ್ ನಲ್ಲಿ ಈ ವರ್ಷ ಶಿಕ್ಷಣ ಕ್ಷೇತ್ರಕ್ಕೆ ಏನೆಲ್ಲಾ ಕೊಡುಗೆಗಳನ್ನು ನೀಡಿದ್ದಾರೆ ಎಂಬುದನ್ನು ಇಲ್ಲಿ ತಿಳಿಯೋಣ.

ಕರ್ನಾಟಕ ಬಜೆಟ್ : ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು :
* ಈ ಭಾರಿ ಶಿಕ್ಷಣ ಕ್ಷೇತ್ರಕ್ಕೆ ಬಂಪರ್ ಕೊಡುಗೆಯನ್ನು ನೀಡಿದ್ದು, ಪ್ರಸಕ್ತ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದಲ್ಲಿ ಅನುಷ್ಠಾನ ಮಡಲು ಅನುದಾನ ಮೀಸಲಿಟ್ಟಿದ್ದಾರೆ. ಇದರ ಬೆನ್ನಲ್ಲೇ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಹಂತದ ಶಿಕ್ಷಣವನ್ನು ಎನ್ಇಪಿ ಅಡಿ ನೀಡಲಿದ್ದು, ಪಠ್ಯಕ್ರಮ ಮುದ್ರಣಕ್ಕಾಗಿ 30 ಕೋಟಿ ರೂ. ಮೀಸಲಿಟ್ಟಿರುವುದನ್ನು ಪ್ರಕಟಿಸಿದ್ದಾರೆ.
* ಬಜೆಟ್ ಮಂಡನೆಯಲ್ಲಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಹೊಸ ಮಾದರಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹೊಸ ವಿಶ್ವವಿದ್ಯಾಲಯಗಳು ಬರಲಿವೆ.
* ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಮಾದರಿಯಲ್ಲಿ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕೆಐಟಿ) ಅನ್ನು ಸರ್ಕಾರ ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು.
* ಬಳ್ಳಾರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹೊಸ ಕೃಷಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುವುದು.
* ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ರೈತರ ಕಲ್ಯಾಣ ಪೀಠ ನಡೆಯಲಿದೆ ಎಂದರು.
* ನೇಕಾರರ ಮಕ್ಕಳಿಗೆ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಯೋಜನೆ ಘೋಷಿಸಿದ್ದಾರೆ.
* ಯೆಲ್ಲೋ ಬೋರ್ಡ್ ಚಾಲಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾನಿಧಿ ಯೋಜನೆಯನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ.
* ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯಲ್ಲಿ ಖಾಲಿಯಿರುವ 15 ಸಾವಿರ ಶೀಕ್ಷಷಕರ ನೇಮಕಕ್ಕೆ ಕ್ರಮ ಜರುಗಿಸಲಾಗುತ್ತಿದೆ. ಇದರ ಜತೆಗೆ ಅತಿಥಿ ಉಪನ್ಯಾಸಕರ ಸೇವೆಯನ್ನು ಸಹ ಮುಂದುವರೆಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಪದವಿ ಪೂರ್ವ ಕಾಲೇಜುಗಳಲ್ಲಿ ಕೆಲಸ ಮಾಡುವ ಅತಿಥಿ ಉಪನ್ಯಾಸಕರ ಮಾಸಿಕ ಗೌರವ ಧನವನ್ನು ಎರಡು ಪಟ್ಟು ಹೆಚ್ಚಳ ಮಾಡವುದಾಗಿ ಪ್ರಕಟಿಸಿದರು.
* ರಾಜ್ಯವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮಾಜಗಳ "ಉದ್ಯೋಗ, ಶಿಕ್ಷಣ ಮತ್ತು ಸಬಲೀಕರಣ" ದತ್ತ ಗಮನಹರಿಸುತ್ತಿದೆ ಎಂದು ಘೋಷಿಸಿದ ಬೊಮ್ಮಾಯಿ, ಮಾಸಿಕ 3,000 ರೂಪಾಯಿ ವೇತನ ಪಡೆಯುವ ಮಧ್ಯಾಹ್ನದ ಊಟದ ಅಡುಗೆಯವರ ಗೌರವಧನವನ್ನು 1,000 ರೂಪಾಯಿ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.
* 'ನೋಡಿ ಕಲಿ ಮಾಡಿ ತಿಳಿ' ಪರಿಕಲ್ಪನೆಯಡಿ ರಾಜ್ಯದ 169 ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳಿಗೆ ಲ್ಯಾಬ್-ಇನ್-ಎ-ಕಿಟ್ ವಿತರಣೆ.
* ಹೋಬಳಿ ಮಟ್ಟದಲ್ಲಿ "ಮಾದರಿ ಶಾಲೆ"ಗಳಾಗಿ ಮೂಲಭೂತ ಸೌಕರ್ಯವಿರುವ ಶಾಲೆಗಳ ಉನ್ನತೀಕರಣ.
* ವಿದ್ಯಾರ್ಥಿ ಮಾರ್ಗದರ್ಶಿನಿ ಯೋಜನೆಯಡಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET), ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಖ್ಯ, ಕೇಂದ್ರ ಲೋಕಸೇವಾ ಆಯೋಗ (UPSC) ಮತ್ತು ಅಂತಹುದೇ ಪರೀಕ್ಷೆಗಳಿಗೆ ಸ್ಪರ್ಧಿಸುವ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ತರಬೇತಿಯನ್ನು ನೀಡುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
* ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯಗಳಿಗೆ ಸರಕಾರ 750 ಕೋಟಿ ರೂ. ಕನಕದಾಸ ಹಾಸ್ಟೆಲ್‌ಗಳಿಗೆ 165 ಕೋಟಿ ರೂ ಮತ್ತು ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ.ಗಳನ್ನು ನೀಡುವುದಾಗಿ ಹೇಳಿದರು.
* ಸರ್ಕಾರಿ ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಬೆಂಚು, ಡೆಸ್ಕ್ ಮತ್ತು ಇತರೆ ಪೀಠೋಪಕರಣಗಳ ಖರೀದಿಗೆ 100 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
* ಕರ್ನಾಟಕ ಸರ್ಕಾರವು ಮಕ್ಕಳ ಬಜೆಟ್‌ಗಾಗಿ 40,944 ಕೋಟಿ ರೂಗಳನ್ನು ಘೋಷಿಸಿದೆ.