ಚುನಾವಣೆ ಹಿನ್ನೆಲೆ ಏಪ್ರಿಲ್ ತಿಂಗಳಿನಲ್ಲಿ ಸಿಇಟಿ 2018

Posted By:

2018 ರ ಸಿಇಟಿ ಪರೀಕ್ಷೆಗಳು ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆಗಳು ಕಂಡುಬಂದಿವೆ. ಈ ಬಾರಿ ರಾಜ್ಯ ವಿಧಾನಸಭೆ ಚುನಾವಣೆ ಮೇ ತಿಂಗಳಿನಲ್ಲಿ ನಡೆಯುವ ಹಿನ್ನಲೆಯಲ್ಲಿ ಸಿಇಟಿ ಪರೀಕ್ಷೆಗಳು ಪೂರ್ವ ನಿಗದಿಗೊಳ್ಳುವ ಮಾಹಿತಿ ಲಭ್ಯವಾಗಿದೆ.

ಪ್ರತಿ ವರ್ಷ ಮೇ ಮೊದಲ ವಾರ ಸಿಇಟಿ ಪರೀಕ್ಷೆಗಳು ನಡೆಯುತ್ತಿದ್ದವು, ಮೇ 2 ರಂದು ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಏಪ್ರಿಲ್ ಮೂರನೇ ವಾರ ಸಿಇಟಿ ನಡೆಸಲು ಪರೀಕ್ಷಾ ಪ್ರಾಧಿಕಾರ ಚಿಂತನೆ ನಡೆಸಿದೆ.

 ಏಪ್ರಿಲ್ ತಿಂಗಳಿನಲ್ಲಿ ಸಿಇಟಿ 2018

ಈ ವಿಚಾರವಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಉನ್ನತ ಶಿಕ್ಷಣ, ಆಯುಷ್ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರತಿನಿಧಿಗಳೊಂದಿಗೆ ಪ್ರಾಧಿಕಾರ ಮೊದಲ ಸುತ್ತಿನ ಮಾತುಕತೆ ನಡೆಸಿದ್ದು, ಅ.30ರಂದು ಮತ್ತೊಂದು ಸಭೆ ಕರೆದಿದೆ.

ಮೇ ಮೊದಲ ವಾರ ವಿಧಾನಸಭೆಗೆ ಚುನಾವಣೆ ನಿಗದಿಯಾದಲ್ಲಿ ಕನಿಷ್ಠ ಒಂದು ವಾರ ಮೊದಲು ಸಿಇಟಿ ನಡೆಸಬೇಕಾಗುತ್ತದೆ. ಈ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳುವ ಮುನ್ನ ರಾಜ್ಯ ಸರಕಾರಕ್ಕೆ ಪತ್ರ ಬರೆದು ಅನುಮತಿ ಪಡೆಯಲಾಗುತ್ತದೆ. ಸರ್ಕಾರದಿಂದ ಅನುಮತಿ ಸಿಕ್ಕ ತಕ್ಷಣ ಪರೀಕ್ಷಾ ದಿನಾಂಕದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಮಾರ್ಚ್ 16 ರೊಳಗೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಲು ಉದ್ದೇಶಿಸಲಾಗಿದೆ. ಅನಂತರ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲಾಗುವುದು. ನಿಗದಿತ ಅವಧಿಯೊಳಗೆ ಪರೀಕ್ಷೆಗಳನ್ನು ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.

ಅಲ್ಲದೇ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳ ಕರಡು ವೇಳಾಪಟ್ಟಿ ಬಹುತೇಕ ಸಿದ್ಧಗೊಂಡಿದ್ದು, ನವೆಂಬರ್ 15 ರೊಳಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

'ದ್ವಿತೀಯ ಪಿಯು ಪರೀಕ್ಷೆ ಮತ್ತು ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕಾಗಿ ನಡೆಯುವ ನೀಟ್‌ ದಿನಾಂಕಗಳು ಅಂತಿಮಗೊಂಡ ಬಳಿಕವಷ್ಟೇ ಸಿಇಟಿ ದಿನಾಂಕ ನಿರ್ಧಾರ ಆಗುತ್ತದೆ. ಪಿಯು ಪರೀಕ್ಷೆಯ ಕೊನೆಯ ‍ಪತ್ರಿಕೆ ಮುಗಿದ ದಿನಾಂಕಕ್ಕೂ ಸಿಇಟಿಗೂ ಒಂದು ತಿಂಗಳ ಅಂತರ ಇರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಆತಂಕ ಪಡಬೇಕಿಲ್ಲ' ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
Because of the state assembly elections in May CET exams in 2018 are likely to be held in April 3rd week.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia