ಆನ್-ಲೈನ್ ಬಿಡ್ ಮೂಲಕ ತಜ್ಞ ವೈದ್ಯರುಗಳ ನೇಮಕಾತಿಗೆ ಸರ್ಕಾರ ನಿರ್ಧಾರ

Posted By:

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರುಗಳ ಕೊರತೆ ನೀಗಿಸಲು ಅನ್-ಲೈನ್ ಬಿಡ್ ಮಾಡುವುದಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳು ಸಾಕಷ್ಟಿವೆ ಆದರೆ ಅಲ್ಲಿ ಕಾರ್ಯ ನಿರ್ವಹಿಸುವ ತಜ್ಞ ವೈದ್ಯರುಗಳ ಸಂಖ್ಯೆ ಮಾತ್ರ ದಿನೇ ದಿನೇ ಕಡಿಮೆಯಾಗುತ್ತಿದೆ. ಹೆಚ್ಚಿನ ಸಂಬಳ ನೀಡಿದರೂ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಲು ತಜ್ಞರು ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ಲಕ್ಷ ಕೊಟ್ಟರು ಸಿಗದ ವೈದ್ಯರು

'ರಾಜ್ಯದಲ್ಲಿ 1,200ಕ್ಕೂ ಹೆಚ್ಚು ತಜ್ಞ ವೈದ್ಯ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ, ಕರ್ತವ್ಯ ನಿರ್ವಹಿಸಲು ವೈದ್ಯರು ಮುಂದೆ ಬರುತ್ತಿಲ್ಲ. ತಿಂಗಳಿಗೆ ₹ 1.25 ಲಕ್ಷ ವೇತನ ನೀಡಿದರೂ ವೈದ್ಯರು ಸಿಗುತ್ತಿಲ್ಲ. ಕರೆ ಆಧಾರದಲ್ಲಿ ಬರುವಂತೆ ಹೇಳಿದರೂ ಆಸಕ್ತಿ ತೋರುವುದಿಲ್ಲ. ಹೀಗಾಗಿ, ಆನ್-ಲೈನ್ ಬಿಡ್ ಮೂಲಕ ಹೊಸ ವಿಧಾನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ವೈದ್ಯರ ಅಪೇಕ್ಷೆಗಳನ್ನು ಮೊದಲೇ ಅರಿತುಕೊಂಡು ಈ ನಿಟ್ಟಿನಲ್ಲಿ ಮುಂದುವರಿಯಲು ತೀರ್ಮಾನಿಸಲಾಗಿದೆ. ಈ ಕುರಿತು ಮಂಗಳವಾರ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ' ಎಂದು ಅವರು ವಿವರಿಸಿದರು.

ವೈದ್ಯರ ನೇಮಕಾತಿಗೆ ಆನ್-ಲೈನ್ ಬಿಡ್

ಆನ್-ಲೈನ್ ಬಿಡ್

ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ಸಲ್ಲಿಸಲು ಬಯಸುವ ತಜ್ಞ ವೈದ್ಯರುಗಳು ಮೊದಲಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಈ ಸಂದರ್ಭದಲ್ಲಿ ವೇತನದ ಜೊತೆಗೆ ಕೆಲಸ ಮಾಡಲು ಬಯಸುವ ಸ್ಥಳವನ್ನೂ ನಮೂದಿಸಬೇಕು. ಅದನ್ನು ಪರಿಗಣಿಸಿ, ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ.

ವೈದ್ಯರೇ ಸಂಬಳ ನಿಗದಿಪಡಿಸಲಿ

ಸರ್ಕಾರ ನಿಗದಿಪಡಿಸಿದ ಮಾಸಿಕ ವೇತನ ಪಡೆದು ಕೆಲಸ ಮಾಡಲು ತಜ್ಞ ವೈದ್ಯರು ಮುಂದಾಗುತ್ತಿಲ್ಲ. ಈ ಕಾರಣಕ್ಕೆ, ವೈದ್ಯರು ತಮಗೆ ಎಷ್ಟು ವೇತನ ಬೇಕು ಎಂದು ಮುಂಚಿತವಾಗಿ ತಿಳಿಸಿದರೆ ಮತ್ತು ಆ ವೇತನ ಸರ್ಕಾರಕ್ಕೆ ಒಪ್ಪಿಗೆಯಾದರೆ ಅಂಥವರನ್ನು ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದೂ ಆರೋಗ್ಯ ಇಲಾಖೆ ಆಯುಕ್ತ ಸುಬೋಧ್‌ ಯಾದವ್‌ ತಿಳಿಸಿದರು.

English summary
Karnataka government is planning to implement new system of online bid to recruit the doctors in government hospitals.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia