ಮೊದಲು ಎಸ್ ಎಸ್ ಎಲ್ ಸಿ ಪರೀಕ್ಷೆ ನಂತರ ಕರ್ನಾಟಕ ಪ್ರವಾಸ

Posted By:

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಾರ್ಚ್‌ನಲ್ಲಿಯೇ 'ಕರ್ನಾಟಕ ಪ್ರವಾಸ' ಪೂರ್ಣಗೊಳಿಸಬೇಕೆಂಬ ಆದೇಶ ವಾಪಸ್‌ ಪಡೆಯಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ತಿಳಿಸಿದ್ದಾರೆ.

ಪ್ರೌಢಶಾಲಾ ಪ್ರವಾಸಕ್ಕೆ ಸಂಬಂಧಿಸಿದಂತೆ ಈಗ ಹೊರಡಿಸಿರುವ ಆದೇಶ ವಾಪಸ್‌ ಪಡೆದು ಪರೀಕ್ಷೆಗಳು ಮುಗಿದ ನಂತರ ಪ್ರವಾಸ ಏರ್ಪಡಿಸುವಂತೆ ಮತ್ತೊಂದು ಸುತ್ತೋಲೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

ಆದೇಶಕ್ಕೆ ವಿರೋಧ

'ವಿದ್ಯಾರ್ಥಿಗಳ ಪ್ರವಾಸಕ್ಕಾಗಿ ಸರ್ಕಾರ ಡಿಸೆಂಬರ್‌ ಬದಲು ಮಾರ್ಚ್‌ನಲ್ಲಿ ಹಣ ಬಿಡುಗಡೆ ಮಾಡಿದೆ. ಅಲ್ಲದೆ, ಈ ತಿಂಗಳೊಳಗೆ ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಹತ್ತಿರ ಬಂದಿದ್ದರಿಂದ ವಿದ್ಯಾರ್ಥಿಗಳು ಓದಿನತ್ತ ಗಮನಹರಿಸಿದ್ದಾರೆ. ಈಗ ಪ್ರವಾಸ ಕೈಗೊಳ್ಳಲೇಬೇಕು ಎಂದು ಶಾಲೆಗಳಲ್ಲಿ ಒತ್ತಡ ಹಾಕಲಾಗುತ್ತಿದೆ' ಎನ್ನುವ ಆರೋಪಗಳು ವಿರೋದ ಪಕ್ಷಗಳಿಂದ ಮತ್ತು ಸಾರ್ವಜನಿಕರಿಂದ ಕೇಳಿ ಬಂದಿದ್ದವು.

 ಪರೀಕ್ಷೆ ನಂತರ ಕರ್ನಾಟಕ ಪ್ರವಾಸ

ಶಿಕ್ಷಕರ ಮೇಲೆ ಒತ್ತಡ

'ಕರ್ನಾಟಕ ಪ್ರವಾಸ'ವನ್ನು ತಪ್ಪಿಸಿದರೆ ಶಿಕ್ಷಕರನ್ನು ಹೊಣೆಗಾರರನ್ನಾಗಿಸಿ ಕ್ರಮ ಜರುಗಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶಿಸಿದ್ದರಿಂದ ಶಾಲಾ ಶಿಕ್ಷಕರು ಕೂಡ ಚಿಂತೆಗೀಡಾಗಿದ್ದರು. ಆದೇಶ ಹಿಂಪಡೆದಿರುವುದರಿಂದ ಶಿಕ್ಷಕರು ನಿರಾತಂಕವಾಗಿ ಮಕ್ಕಳ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

'ಕರ್ನಾಟಕ ಪ್ರವಾಸ' ಯೋಜನೆ

'ಕರ್ನಾಟಕ ಪ್ರವಾಸ' ಯೋಜನೆಗೆ ಶೇ 90ರಷ್ಟು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಲಾಗುತ್ತದೆ. 'ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ದೃಢೀಕರಿಸಲಾಗುತ್ತದೆ. ಹಾಗಾಗಿ, ಆಯ್ಕೆಗೊಂಡ ವಿದ್ಯಾರ್ಥಿಗಳು ಕಡ್ಡಾಯ ಪ್ರವಾಸ ಮಾಡಬೇಕಾಗುತ್ತದೆ.

ಆತಂಕಗೊಂಡಿದ್ದ ವಿದ್ಯಾರ್ಥಿಗಳು

ಕರ್ನಾಟಕ ಪ್ರವಾಸಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳು ಗೈರು ಹಾಜರಾದರೆ ಇತರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲು ಬರುವುದಿಲ್ಲ ಎಂಬಂತ ನಿಯಮವಿದ್ದು, ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗುವುದೊ ಬೇಡವೊ ಎಂಬ ಗೊಂದಲಕ್ಕೆ ಸಿಲುಕಿದ್ದರು. ಈಗ ಪರೀಕ್ಷೆ ನಂತರ ಪ್ರವಾಸ ಎಂಬ ಸುದ್ದಿ ಕೇಳಿ ಸಂಭ್ರಮ ಪಟ್ಟಿದ್ದಾರೆ. 

ಅನುದಾನ ವಿಳಂಬವೇ ಕಾರಣ

ಪ್ರವಾಸೋದ್ಯಮ ಇಲಾಖೆ ವಿದ್ಯಾರ್ಥಿಗಳ ಕರ್ನಾಟಕ ಪ್ರವಾಸಕ್ಕೆ ಅನುದಾನವನ್ನು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳಿಗೆ ಬಿಡುಗಡೆ ಮಾಡುತ್ತದೆ. ಈ ಬಾರಿ ಜನವರಿ ತಿಂಗಳ ಅಂತ್ಯದಲ್ಲಿ ಅನುದಾನ ಜಿಲ್ಲಾ ಪಂಚಾಯಿಗಳಿಗೆ ಬಂದಿದೆ. ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾ ಪಂಚಾಯಿತಿಯಿಂದ ಶಿಕ್ಷಣ ಇಲಾಖೆ ಆಡಳಿತಾತ್ಮಕ ಅನುಮೋದನೆ ಪಡೆದು ಖಜಾನೆಯಿಂದ ಹಣ ಶಿಕ್ಷಣ ಇಲಾಖೆ ಕೈಸೇರಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ.

ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಅನುದಾನವನ್ನು ಆಯಾ ಆರ್ಥಿಕ ವರ್ಷದಲ್ಲಿ ಖರ್ಚು ಮಾಡಬೇಕೆಂಬ ನಿಯಮ ಇದೆ. ಹಳೆಯ ಅನುದಾನವನ್ನು ಮುಂದಿನ ಆರ್ಥಿಕ ವರ್ಷಕ್ಕೆ ಮುಂದುವರಿಸಲು ಬರುವುದಿಲ್ಲ. ಹಾಗಾಗಿ, ಪ್ರವಾಸದ ಆದೇಶ ಅನಿವಾರ್ಯವಾಗಿತ್ತು.

ಪೋಷಕರು ನಿರಾತಂಕ

ಕರ್ನಾಟಕ ಪ್ರವಾಸ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ಕೂಡ ಆತಂಕಕ್ಕೊಳಗಾಗಿದ್ದರು. ಪರೀಕ್ಷೆಯ ಅಂತಿಮ ತಯಾರಿಯಲ್ಲಿರುವ ಮಕ್ಕಳ ಭವಿಷ್ಯಕ್ಕೆ ಇದು ಮಾರಕವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮಕ್ಕಳು ಓದಿನಲ್ಲಿ ಮಗ್ನರಾಗಿರುತ್ತಾರೆ ಪ್ರವಾಸಕ್ಕೆ ಹೋದರೆ ಅವರ ಏಕಾಗ್ರತೆಗೆ ತೊಂದರೆಯಾಗಲಿದ್ದು, ಇದು ಅವರ ಫಲಿತಾಂಶದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಗೊಂದಲಕ್ಕೀಡಾಗಿದ್ದ ಪೋಷಕರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನು ಗಮನಿಸಿ: ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳಾಪಟ್ಟಿ

English summary
karnataka pravasa to be conduct after sslc exams

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia