
ಕೊರೋನಾ ಸೋಂಕು ಕಡಿಮೆಯಾಗುತ್ತಿರುವ ನಡುವೆಯೇ ಶಾಲೆಗಳ ಆರಂಭದ ಬಗ್ಗೆ ಚಿಂತನೆ ನಡೆಯುತ್ತಿದ್ದು, ರಾಜ್ಯದಲ್ಲಿ ಶಾಲೆಗಳನ್ನ ಮತ್ತೆ ಆರಂಭಿಸುವ ಬಗ್ಗೆ ಸೋಮವಾರ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಎಸ್. ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಶಾಲಾ ಆರಂಭದ ಬಗ್ಗೆ ಚರ್ಚೆಯನ್ನು ನಡೆಸಿದ್ದಾರೆ. ವಿದ್ಯಾರ್ಥಿಗಳು ಕಳೆದ 15 ತಿಂಗಳಿನಿಂದ ಶಾಲೆಯ ಮುಖ ನೋಡಿಲ್ಲ, ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಬಾಲ ಕಾರ್ಮಿಕ ಪದ್ಧತಿಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಶಾಲೆ ಆರಂಭಿಸಲು ಯೋಜನೆಗಳನ್ನು ರೂಪಿಸುವಂತೆ ಜಿಲ್ಲಾ ನಿರ್ದೇಶಕರುಗಳು ಸಚಿವರಿಗೆ ಮನವಿ ಮಾಡಿದ್ದಾರೆ.
ಸಭೆ ಮುಗಿದ ಬಳಿದ ಮಾತನಾಡಿದ ಅವರು, ಆರೋಗ್ಯ ಇಲಾಖೆ ಜೊತೆ ಚರ್ಚೆ ನಡೆಸಿದ ಬಳಿಕ ಸೋಮವಾರ ಶಾಲೆಗಳ ಆರಂಭದ ಬಗ್ಗೆ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಸದ್ಯ ರಾಜ್ಯದಲ್ಲಿ ವಿದ್ಯಾಗಮ ಆರಂಭಿಸಿದ್ದೇವೆ. ಕಲಿಕಾ ದಿನಚರಿ ಬಗ್ಗೆ ಯೋಜನೆ ಮಾಡಿದ್ದೇವೆ. ಶಾಲಾ ಆರಂಭದ ಬಗ್ಗೆ ತಜ್ಞರು ಅಭಿಪ್ರಾಯ ನೀಡಿದ್ದಾರೆ ಎಂದು ತಿಳಿಸಿದ್ದಾರೆ.