ದ್ವಿತೀಯ ಪಿಯು ಪೂರಕ ಪರೀಕ್ಷೆಯ ಫಲಿತಾಂಶ ಮಂಗಳವಾರ ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್ಸೈಟ್ ನಲ್ಲಿ ಪ್ರಕಟವಾಗಿದ್ದು, ಇಂದು ಎಲ್ಲಾ ಪಿಯು ಕಾಲೇಜುಗಳಲ್ಲಿ ಲಭ್ಯವಿದೆ.
ಈ ಬಾರಿಯ ಪೂರಕ ಪರೀಕ್ಷೆಯಲ್ಲಿ ಕೇವಲ ಶೇ 26.34ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 2016 ನೇ ಸಾಲಿನ ಪೂರಕ ಪರೀಕ್ಷೆಗೆ ಹೋಲಿಸಿದರೆ ಈ ಬಾರಿಯ ಫಲಿತಾಂಶದಲ್ಲಿ ಶೇ.6 ರಷ್ಟು ಏರಿಕೆ ಕಂಡಿದೆ.
ಫಲಿತಾಂಶ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಜೂನ್ 28ರಿಂದ ಜುಲೈ 8 ರವರೆಗೆ ಪೂರಕ ಪರೀಕ್ಷೆ ನಡೆದ ಪರೀಕ್ಷೆಯಲ್ಲಿ ಒಟ್ಟು 2,51,781 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 66,320 ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ವಾರ್ಷಿಕ ಪರೀಕ್ಷೆಯಲ್ಲಿ 6,79,061 ಹಾಜರಾಗಿದ್ದರು, ಅವರಲ್ಲಿ 3,23,364 ವಿದ್ಯಾರ್ಥಿಗಳು ಅನುತ್ತೀರ್ಣ ಆಗಿದ್ದರು.
ಬಾಲಕಿಯರೇ ಮೇಲುಗೈ
ಮುಖ್ಯ ಪರೀಕ್ಷೆಯಂತೆ ಪೂರಕ ಪರೀಕ್ಷೆಯಲ್ಲೂ ಬಾಲಕಿಯರೇ ಮೇಲುಗೈ ಪಡೆದಿದ್ದರೆ, ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರದ ವಿದ್ಯಾರ್ಥಿಗಳು ಈ ಬಾರಿಯ ಫಲಿತಾಂಶದಲ್ಲಿ ಮುಂದಿದ್ದಾರೆ.
ವಿಷಯವಾರು ಫಲಿತಾಂಶ
ವಿಜ್ಞಾನದ ವಿದ್ಯಾರ್ಥಿಗಳು ಪ್ರಥಮ, ವಾಣಿಜ್ಯ ದ್ವಿತೀಯ ಹಾಗೂ ಕಲಾ ವಿದ್ಯಾರ್ಥಿಗಳು ಕೊನೆಯ ಸ್ಥಾನದಲ್ಲಿದ್ದಾರೆ. ಕನ್ನಡದ ವಿದ್ಯಾರ್ಥಿಗಳಿಗಿಂತ ಇಂಗ್ಲಿಷ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದಾರೆ.
ಉತ್ತೀರ್ಣರಾದವರ ಪ್ರಮಾಣ ಪತ್ರಗಳನ್ನು ಮರು ಎಣಿಕೆ, ಮರು ಮೌಲ್ಯಮಾಪನದ ಬಳಿಕ ಆಯಾ ಕಾಲೇಜುಗಳಿಗೆ ಕಳುಹಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ನಕಲು ಪ್ರತಿ, ಮರು ಎಣಿಕೆಗೆ ಅರ್ಜಿ
ಫಲಿತಾಂಶದ ಬಗ್ಗೆ ಯಾವುದೇ ಗೊಂದಲವಿದ್ದರೆ ನಕಲು ಪ್ರತಿ ಪಡೆಯಲು, ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅವಕಾಶ ಕಲ್ಪಿಸಲಾಗಿದೆ.
- ಉತ್ತರ ಪತ್ರಿಕೆಯ ನಕಲು ಪ್ರತಿಗಾಗಿ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ. ಪ್ರತಿ ವಿಷಯಕ್ಕೆ ರೂ.400/- ನಿಗದಿ ಪಡಿಸಲಾಗಿದೆ.
- ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಆಗಸ್ಟ್ 3 ಅಂತಿಮ ದಿನ. ಪ್ರತಿ ವಿಷಯಕ್ಕೆ ರೂ.1,260/- ನಿಗದಿ ಪಡಿಸಲಾಗಿದೆ.
- ಅಂಕಗಳ ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 3 ಕೊನೆಯ ದಿನ.( ಅಂಕಗಳ ಮರುಎಣಿಕೆಗೆ ಯಾವುದೇ ಶುಲ್ಕವಿಲ್ಲ)
ಮರು ಎಣಿಕೆ ಫಲಿತಾಂಶವನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ