ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಪರೀಕ್ಷೆಗೆ ಹಾಜರಾಗಲು ಸಹಾಯ ಮಾಡಿದ ವಿದ್ಯಾರ್ಥಿನಿ ತನುಜಾ ಕರ್ರೆಗೌಡ ನೀಟ್ ಪರೀಕ್ಷೆಯಲ್ಲಿ 720 ಕ್ಕೆ 586 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.
ಶಿವಮೊಗ್ಗದ ನವೋದಯ ಶಾಲೆಯ ವಿದ್ಯಾರ್ಥಿನಿಯಾಗಿರುವ ತನುಜಾ ಕೃಷಿಕ ನಾಗರಾಜ್ ಅವರ ಪುತ್ರಿ. ಮೊದಲ ಭಾರಿ ನೀಟ್ ಪರೀಕ್ಷೆ ನಡೆದಾಗ ತನುಜಾ ರವರಿಗೆ ಕೊರೋನಾ ಲಕ್ಷಣಗಳಿದ್ದರಿಂದ ಹಾಗೂ ಕಂಟೈನ್ಮೆಂಟ್ ವಲಯದಲ್ಲಿದ್ದರಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ.
ಸಾಂಕ್ರಾಮಿಕ ರೋಗದಿಂದಾಗಿ ಮೊದಲ ಬಾರಿಗೆ ಪರೀಕ್ಷೆ ಬರೆಯಲು ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವಂತೆ ಎನ್‌ಟಿಎಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದಾಗ, ಪರೀಕ್ಷೆಗೆ ಹಾಜರಾಗಲು ಇಚ್ಚಿಸುವ ವಿದ್ಯಾರ್ಥಿಗಳಲ್ಲಿ ತನುಜಾ ಕೂಡ ಒಬ್ಬರಾಗಿದ್ದರು. ಆದರೆ ಕೆಲವು ಕಾರಣಗಳಿಂದಾಗಿ ಅವರು ಮರುಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಈ ಕುರಿತು ತನುಜಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು ಇದನ್ನು ಗಮನಿಸಿದ ಮುಖ್ಯಮಂತ್ರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ವಿದ್ಯಾರ್ಥಿಗೆ ಪರೀಕ್ಷೆಗೆ ಹಾಜರಾಗಲು ಸಹಾಯ ಮಾಡಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಕಾಣುತ್ತಿರುವ ತನುಜಾ, ಪರೀಕ್ಷೆಯಲ್ಲಿ ಒಟ್ಟು 720ಕ್ಕೆ 586 ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.