ಕೆಪಿಎಸ್ಸಿ 2014: ಬಡತನ ಗೆದ್ದ ಶರಣಪ್ಪ ವರ್ನ್‌ಖೇಡ ಸಾಧನೆ

Posted By:

ಇತ್ತೀಚಿಗಷ್ಟೇ ಕೆಪಿಎಸ್ಸಿ ಫಲಿತಾಂಶ ಹೊರಬಿದ್ದಿದ್ದು ಕಠಿಣ ಪರಿಶ್ರಮದ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡವರ ಪಟ್ಟಿ ದೊಡ್ಡದಿದೆ. ನಿರಂತರ ಅಭ್ಯಾಸ ಮತ್ತು ಆತ್ಮವಿಶ್ವಾಸವಿದ್ದರೆ ಏನನ್ನು ಬೇಕಾದರು ಸಾಧಿಸಬಹುದು ಎನ್ನುವುದಕ್ಕೆ ಇವರುಗಳೆ ಸಾಕ್ಷಿ. ಕೆಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇವರ ಪರಿಶ್ರಮ ಎಲ್ಲರಿಗೂ ಮಾದರಿಯಾಗುವಂತದ್ದು.

ಶರಣಪ್ಪರ ಸಾಧನೆಗೆ ಅಡ್ಡಿಯಾಗದ ಬಡತನ

ಬಡ ಕುಟುಂಬದಿಂದ ಬಂದ ಶರಣಪ್ಪ ವರ್ನ್‌ಖೇಡ ಅವರು ಕರ್ನಾಟಕ ರಾಜ್ಯ ಪೊಲೀಸ್ ಸೇವೆಯಲ್ಲಿ ಡಿವೈಎಸ್‌ಪಿಯಾಗಿ ಆಯ್ಕೆ ಯಾಗಿದ್ದಾರೆ. ಸತತ ಅಧ್ಯಯನ, ಕಠಿಣ ಶ್ರಮ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಿ ಕರ್ನಾಟಕ ಲೋಕ ಸೇವಾ ಆಯೋಗ ನಡೆಸಿದ ಗೆಜೆಟೆಡ್‌ ಪ್ರೊಬೇಷನರಿ-2014ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಶರಣಪ್ಪ ವರ್ನ್‌ಖೇಡ ಸಾಧನೆ

ರಾಯಚೂರಿನ ಗೌರಿಪುರ ಗ್ರಾಮದ ಶರಣಪ್ಪ ಕಡುಬಡತನದಿಂದ ಬಂದವರು. ತಂದೆ ಕುಂಟೆಪ್ಪ, ತಾಯಿ ದುರಗಮ್ಮ ಇಬ್ಬರೂ ಅನಕ್ಷರಸ್ಥರು. ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳ ಪೈಕಿ ಶರಣಪ್ಪ ಹಿರಿಯರು.

ಟಿಸಿಎಚ್ ನಿಂದ ಡಿವೈಎಸ್‌ಪಿ ವರೆಗೆ

ಶರಣಪ್ಪರ ಮನೆಯಲ್ಲಿ ಬಡತನ, ಶಿಕ್ಷಣ ಕೊಡಿಸಲು ಹಣಕಾಸಿನ ಸಮಸ್ಯೆ, ಮಗನ ಓದಿನ ಆಸಕ್ತಿ ಅರಿತ ತಂದೆ- ತಾಯಿಗಳಿಬ್ಬರೂ ನೀರಾವರಿ ಪ್ರದೇಶದಲ್ಲಿ ಭತ್ತದ ಸಸಿ ನಾಟಿ ಮಾಡಿ ಪಿಯುಸಿ, ಟಿಸಿಎಚ್‌ ವರೆಗೆ ಶಿಕ್ಷಣ ಕೊಡಿಸಿದ್ದಾರೆ. ಪ್ರಾಥಮಿಕ ಶಿಕ್ಷಣದಿಂದ ಪ್ರೌಢಶಾಲೆ ವರೆಗೆ ಗೌರಿಪುರ ಕನಕಗಿರಿ, ಯಲಬುರ್ಗಾ ತಾಲ್ಲೂಕಿನ ಗಾಣದಾಳ ಮತ್ತು ಗಂಗಾವತಿಯಲ್ಲಿ ಅವರು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದಾರೆ.

ಬರಿಗಾಲಲ್ಲೇ ಹತ್ತಾರು ಕಿ.ಮೀ ಸಾಗಿ ಶಾಲೆಕಲಿತ ಶರಣಪ್ಪ, ಪಿಯುಸಿ ಶಿಕ್ಷಣವನ್ನು ವಸತಿ ನಿಲಯದಲ್ಲಿದ್ದುಕೊಂಡು ಮುಂಡರಗಿಯಲ್ಲಿ, ಟಿಸಿಎಚ್‌ ಶಿಕ್ಷಣ ಬಳ್ಳಾರಿಯಲ್ಲಿ ಅಧ್ಯಯನ ಮಾಡಿ 1999ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡರು.

ಕಾರಟಗಿಯ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಆರಂಭಿಸಿದ ಅವರು, ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಬಿ.ಎ ಮತ್ತು ಎಂ.ಎ ಹಾಗೂ ಬಿಇಡಿಯನ್ನು ಮೈಸೂರು ಮುಕ್ತ ವಿಶ್ವ ವಿದ್ಯಾಲಯದಲ್ಲಿ ಪೂರೈಸಿದ್ದಾರೆ.

2010ರಲ್ಲಿ ಕರ್ನಾಟಕ ಶಿಕ್ಷಣ ಸೇವೆ (ಕೆಇಎಸ್‌)ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾರಟಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

2014ರಲ್ಲಿ ಕೊಪ್ಪಳ ಕ್ಷೇತ್ರ ಸಮನ್ವಯಾಧಿಕಾರಿ ಹುದ್ದೆಗೆ ನೇಮಕಗೊಂಡಿದ್ದು, ಈಗ ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಲೋಕ ಸೇವಾ ಆಯೋಗ ಶನಿವಾರ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯ ಆಯ್ಕೆಯಾದವರ ತಾತ್ಕಾಲಿಕ ಪಟ್ಟಿಯನ್ನು ಕಳೆದ ಶನಿವಾರ ಪ್ರಕಟಿಸಿದ್ದು, ಶರಣಪ್ಪ ಅವರು ಒಟ್ಟು 1,950 ಅಂಕಗಳಿಗೆ 1105. 5 ಅಂಕಗಳನ್ನು ಪಡೆದು ಡಿವೈಎಸ್‌ಪಿ ಹುದ್ದೆ ಪಡೆದಿದ್ದಾರೆ.

English summary
KPSC 2014 sharanappa varnakheda achieved his dream by constant efforts and practice

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia