ಇವರೇ ಈ ಬಾರಿಯ ಕೆಪಿಎಸ್ಸಿ ಸಾಧಕರು

Posted By:

ಕರ್ನಾಟಕ ಲೋಕಸೇವಾ ಆಯೋಗವು 464 ಗೆಜೆಟೆಡ್ ಪ್ರೊಬೇಷನರಿ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಮೈಸೂರಿನ ಐಶ್ವರ್ಯಾ ಆರ್. ಮೊದಲ ಸ್ಥಾನ ಪಡೆದಿದ್ದು, ಬಾಗಲಕೋಟೆಯ ರಮೇಶ್ ಕೋಲಾರ್ 2ನೇ ಸ್ಥಾನ ಹಾಗೂ ಬೆಳಗಾವಿಯ ಸಂತೋಷ್ ಕಾಮಗೌಡ 3ನೇ ರ್ಯಾಂಕ್ ಗಳಿಸಿದ್ದಾರೆ.

ವಿವಿಧ ಇಲಾಖೆಗಳ 14 ಸ್ಥರದ 464 ಹುದ್ದೆಗಳಿಗೆ 2014ರಲ್ಲಿ ಅರ್ಜಿ ಆಹ್ವಾನಿ ಸಲಾಗಿತ್ತು. 2015ರಲ್ಲಿ ಮುಖ್ಯ ಪರೀಕ್ಷೆ ನಡೆಸಿ, 2016ರ ಮೇನಲ್ಲಿ ಸಂದರ್ಶನಕ್ಕೆ ಅರ್ಹರಾದ ಪಟ್ಟಿಯನ್ನು 1:3 ಅನುಪಾತದಲ್ಲಿ ಅಂತಿಮಗೊಳಿಸಿ ದಾಖಲಾತಿ ಪರಿಶೀಲನೆ ನಡೆಸಲಾಗಿತ್ತು. ಸುಮಾರು 9 ತಿಂಗಳ ವಿಳಂಬದ ಬಳಿಕ ಫೆಬ್ರವರಿಯಲ್ಲಿ ಸಂದರ್ಶನ ನಡೆಸಿ, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.

ಐಶ್ವರ್ಯಾಗೆ ಮೊದಲ ಸ್ಥಾನ

ಬೆಂಗಳೂರಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಸಿಸೆಂಸ್ಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಐಶ್ವರ್ಯಾ ಆರ್. ಅವರಿಗೆ ಕೆಎಎಸ್ ಮಾಡಿ ಜನರ ಸೇವೆ ಮಾಡಬೇಕೆಂದು ದೊಡ್ಡ ಕನಸಾಗಿತ್ತು.

ಸಿದ್ಧಾರ್ಥನಗರ ನಿವಾಸಿ ರಾಮಾರಾಧ್ಯ ಮತ್ತು ವಾಣಿ ದಂಪತಿ ಪುತ್ರಿ ಐಶ್ವರ್ಯಾ, ಬೆಂಗಳೂರಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಲೇ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು.

ಗೃಹಿಣಿಯಾಗಿ ಪರೀಕ್ಷೆಗೆ ಸಿದ್ಧತೆ

ಗೃಹಿಣಿಯಾಗಿ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಕಷ್ಟು ಶ್ರಮ ಪಡಬೇಕಾಯಿತು. ಬೆಳಿಗ್ಗೆ, ಸಂಜೆ ಮನೆಗೆಲಸ, ನಡುವೆ ಕಚೇರಿ ಕೆಲಸ ಮಾಡಬೇಕು. ರಾತ್ರಿ 10ರಿಂದ ಮಧ್ಯರಾತ್ರಿ 1 ಗಂಟೆವರೆಗೆ ಅಭ್ಯಾಸ ನಡೆಸುತ್ತಿದ್ದೆ. 2 ತಿಂಗಳ ಮಗುವನ್ನು ಸಂಬಾಳಿಸಿಕೊಂಡು ಸಂದರ್ಶನಕ್ಕೆ ತಯಾರಿ ನಡೆಸಿದೆ.' ಎನ್ನುವುದು ಐಶ್ವರ್ಯ ಮಾತು

ವಿಶೇಷವೆಂದರೆ ಐಶ್ವರ್ಯಾ ತಮ್ಮ ಬಾಣಂತನದಲ್ಲೇ ಸಂದರ್ಶನವನ್ನು ಎದುರಿಸಿದ್ದಾರೆ. ಬಾಣಂತಿ ಪೋಷಣೆಗಾಗಿ ನಾನೀಗ ಪೋಷಕರ ಮನೆಯಲ್ಲಿರುವ ಐಶ್ವರ್ಯಾಗೆ ಎರಡು ತಿಂಗಳ ಮಗುವಿದೆ. ಸದಾ ಅಳುವ ಮಗುವನ್ನು ನೋಡಿಕೊಳ್ಳುತ್ತ  ಅದು ನಿದ್ದೆ ಮಾಡುವಾಗ ಓದಿಕೊಂಡು ಸಂದರ್ಶನದ ತಯಾರಿ ಮಾಡಿದ್ದಾರೆ. 

ಕೆಪಿಎಸ್ಸಿ ಸಾಧಕರು

ಯುಪಿಎಸ್ಸಿ ಕನಸು

ಕೆಪಿಎಸ್ಸಿಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಐಶ್ವರ್ಯಾ  'ನನ್ನ ಈ ಸಾಧನೆಯ ಹಿಂದೆ ಪೋಷಕರು, ಪತಿ, ಅತ್ತೆ, ಮಾವನ ಶ್ರಮವಿದೆ. ಹೀಗಾಗಿ, ನನ್ನ ಯಶಸ್ಸು ಕುಟುಂಬಕ್ಕೆ ಸಮರ್ಪಣೆ' ಎನ್ನುತ್ತಾರೆ. ಅಲ್ಲದೇಮುಂದೆ ಯುಪಿಎಸ್ಸಿ ಪರೀಕ್ಷೆಯನ್ನು ಪೂರೈಸುವ ಗುರಿ ಹೊಂದಿದ್ದಾರೆ.

ಮೊದಲಿನಿಂದಲು ಓದಿನಲ್ಲಿ ಮುಂದು

ಐಶ್ವರ್ಯಾ ಈ ಸಾಧನೆಗೆ ಅವರ ಬಾಲ್ಯವೇ ಭದ್ರ ಬುನಾದಿ. ಮೈಸೂರಿನ ಟೆರೇಷಿಯನ್‌ ಹಾಗೂ ಮರಿಮಲ್ಲಪ್ಪ ವಿದ್ಯಾಸಂಸ್ಥೆಯಲ್ಲಿ ಓದಿರುವ ಐಶ್ವರ್ಯಾ ಎಸ್ಸೆಸ್ಸೆಲ್ಸಿಯಲ್ಲಿ 4ನೇ ರ‍್ಯಾಂಕ್‌, ಪಿಯುನಲ್ಲಿ 6ನೇ ರ‍್ಯಾಂಕ್‌ ಗಳಿಸಿದ್ದರು. ಆನಂತರ ಬಿಇ ಸೇರಿದ ಅವರು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರಿಂಗ್‌ನಲ್ಲಿ (ಎನ್‌ಐಇ) ಅಗ್ರಸ್ಥಾನದೊಂದಿಗೆ ಕಂಪ್ಯೂಟರ್‌ ವಿಜ್ಞಾನದಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿದ್ದಾರೆ.

ಎರಡನೇ ಸ್ಥಾನದಲ್ಲಿ ಬಾಗಲಕೋಟೆಯ ರಮೇಶ್

ಬಾಗಲಕೋಟೆಯ ಜಮಖಂಡಿಯ ಹುನ್ನೂರಿನ ನೇಕಾರ ಬಡ ಕುಟುಂಬದ ಯುವಕ ರಮೇಶ್ ಕೋಲಾರ 2014ನೇ ಸಾಲಿನ ಕೆಪಿಎಸ್ಸಿ ಪರೀಕ್ಷೆಯಲ್ಲಿ ಎರಡನೇ ಸ್ಥಾನಗಳಿಸಿದ್ದಾರೆ.

ಮನೆ ಮನೆಗೆ ಹಾಲು ಮಾರಿ, ಜಾತ್ರೆಗಳಲ್ಲಿ ತೆಂಗಿನ ಕಾಯಿ ಮಾರಿ ಇಂಜಿನಿಯರಿಂಗ್ ಪದವಿ ಶಿಕ್ಷಣ ಪಡೆದಿರುವ ರಮೇಶ್ ಎರಡನೇ ರ್ಯಾಂಕ್ ಗಳಿಸಿ ಉಪವಿಭಾಗಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

ಮೂರನೇ ಸ್ಥಾನದಲ್ಲಿ ಸಂತೋಷ್ ಶಂಕರ ಕಾಮಗೌಡ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸಂತೋಷ್ ಶಂಕರ ಕಾಮಗೌಡ ಬಡತನದ ನಡುವೆಯು ಮೂರನೇ ಸ್ಥಾನ ಪಡೆದಿದ್ದಾರೆ. ಕನ್ನಡ ಮಾಧ್ಯಮದಲ್ಲಿಯೇ ಪರೀಕ್ಷೆ ಬರೆದು 1258 ಅಂಕ ಪಡೆದಿರುವ ಅವರು, ಉಪ ವಿಭಾಗಾಧಿಕಾರಿ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದಾರೆ.

ಸಾಧನೆಗೆ ಅಡ್ಡಿಯಾಗದ ಬಡತನ

ಕೃಷಿ ಕುಟುಂಬದವರಾದ ಅವರು, ಬಡತನದಲ್ಲೇ ಬೆಳೆದವರು. ತಂದೆ ಶಂಕರ ಅನಕ್ಷರಸ್ಥರಾದರೆ, ತಾಯಿ ಪಾರ್ವತಿ ನಾಲ್ಕನೇ ತರಗತಿವರೆಗೆ ಓದಿದ್ದಾರೆ.

2008ರಲ್ಲಿ ಅಂಚೆ ಸಹಾಯಕ ಹುದ್ದೆಗೆ ನೇಮಕಾತಿ ಹೊಂದಿದ್ದ ಸಂತೋಷ್‌, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಪಡೆಯುವ ಜೊತೆಗೆ ಕೆಪಿಎಸ್‌ಸಿ ಪರೀಕ್ಷೆಗೂ ಓದ ತೊಡಗಿದರು.

2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆ ಪಟ್ಟಿಯಲ್ಲಿ ರಾಜ್ಯಕ್ಕೆ 19ನೇ ರ್‍ಯಾಂಕ್ ಪಡೆದು ತಹಶೀಲ್ದಾರ್ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ, ಆ ಆಯ್ಕೆ ಪಟ್ಟಿ ತಿರಸ್ಕೃತವಾಯಿತು. ಆದರೂ, ಛಲಬಿಡದೇ 2014ನೇ ಸಾಲಿನ ಪರೀಕ್ಷೆಯನ್ನೂ ಎದುರಿಸಿ ಯಶಸ್ಸು ಗಳಿಸಿದ್ದಾರೆ.

English summary
KPSC 2014 batch rank list announced. Mysore's Aishwarya got first rank, Bagalakote ramesh kolara and Chikkodi's santosh got second and third

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia