ಕೆಪಿಎಸ್‌ಸಿ ನೇಮಕಾತಿ: ಅರ್ಜಿ ಸಲ್ಲಿಸಿದವರಿಗೆಲ್ಲ ಉದ್ಯೋಗ ಸಿಗುವ ಸಾಧ್ಯತೆ!

Posted By:

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ)ಯು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 1,072 ತಜ್ಞ ವೈದ್ಯರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು.

ಆಗಸ್ಟ್ ತಿಂಗಳಲ್ಲಿ ಹೊರಡಿಸಿದ್ದ ಅಧಿಸೂಚನೆಗೆ ಕೇವಲ 707 ಮಂದಿ ಸ್ಪಂದಿಸಿದ್ದು, ಅರ್ಜಿ ಸಲ್ಲಿಸಿದವರಿಗೆಲ್ಲ ಉದ್ಯೋಗ ಸಿಗುವ ಅವಕಾಶವಿದೆ ಎಂದು ಹೇಳಲಾಗುತ್ತಿದೆ.

ಕೆಪಿಎಸ್‌ಸಿ 1,072 ಹುದ್ದೆಗಳಿಗೆ 707 ಅರ್ಜಿ ಸಲ್ಲಿಕೆ

476 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು (ಜಿಡಿಎಂ) ಮತ್ತು 1,072 ತಜ್ಞ ವೈದ್ಯರ ಭರ್ತಿಗೆ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು. ಅರ್ಜಿ ಸಲ್ಲಿಸಲು ಸೆ. 25ರವರೆಗೆ ಕಾಲಾವಕಾಶ ನೀಡಿತ್ತು.

ಅನಸ್ತೇಸಿಯ (ಅರಿವಳಿಕೆ), ಆರ್ಥೋಪೆಡಿಕ್‌ (ಕೀಲುಮೂಳೆ) ಹಾಗೂ ಇಎನ್‌ಟಿ (ಕಿವಿ, ಮೂಗು, ಗಂಟಲು) - ಈ ಮೂರು ವಿಷಯಗಳ ತಜ್ಞ ವೈದ್ಯ ಹುದ್ದೆಗಳನ್ನು ಹೊರತುಪಡಿಸಿ, ಉಳಿದ ವಿಷಯಗಳಲ್ಲಿ ಒಟ್ಟು ಹುದ್ದೆಗಳಿಗಿಂತ ತೀರಾ ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಬಂದಿರುವುದಾಗಿ ಕೆಪಿಎಸ್‌ಸಿ ಕಾರ್ಯದರ್ಶಿ ಪ್ರಸನ್ನ ಕುಮಾರ್‌ ತಿಳಿಸಿದ್ದಾರೆ.

'ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಆ. 5ರಂದು ಮೊದಲ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಆ ಅಧಿಸೂಚನೆಯಲ್ಲಿ 265 ಜಿಡಿಎಂ ಹುದ್ದೆಗಳು ಮತ್ತು ತಜ್ಞ ವೈದ್ಯರ ಹುದ್ದೆಗಳನ್ನು ಮಾತ್ರ ಪ್ರಸ್ತಾವಿಸಲಾಗಿತ್ತು. ಬಳಿಕ ಹೈದರಾಬಾದ್‌- ಕರ್ನಾಟಕ ಭಾಗಕ್ಕೆ 111 ಜಿಡಿಎಂ ಹುದ್ದೆಗಳನ್ನು ಸೇರಿಸಿ ಮತ್ತೆ ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗಿತ್ತು. ಅಲ್ಲದೆ, ಅರ್ಜಿ ಸಲ್ಲಿಸಲು ಹೆಚ್ಚುವರಿಯಾಗಿ 15 ದಿನಗಳ ಕಾಲಾವಕಾಶವನ್ನೂ ನೀಡಲಾಗಿತ್ತು. ಜಿಡಿಎಂ ಹುದ್ದೆಗಳಿಗೆ 1,824 ಅರ್ಜಿಗಳು ಬಂದಿವೆ' ಎಂದು ಅವರು ತಿಳಿಸಿದ್ದಾರೆ.

10 ವಿವಿಧ ವಿಭಾಗಗಳ ತಜ್ಞ ವೈದ್ಯರ ಹುದ್ದೆಗಳ ಪೈಕಿ ಬಹುತೇಕ ಹುದ್ದೆಗಳಿಗೆ ಒಟ್ಟು ಹುದ್ದೆಗಳಿಗಿಂತಲೂ ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ. ಅರ್ಜಿ ಸಲ್ಲಿಸಿದವರಲ್ಲಿ ಅಗತ್ಯ ಅರ್ಹತೆ ಹೊಂದಿದವರು ಹಾಜರುಪಡಿಸಿದ ದಾಖಲೆಗಳು ಯೋಗ್ಯವಾಗಿದ್ದರೆ ಎಲ್ಲರೂ ಆಯ್ಕೆಯಾಗಲಿದ್ದಾರೆ.

ಅರ್ಜಿ ಸಲ್ಲಿಕೆ ವಿವರ

ಸಾಮಾನ್ಯ ವೈದ್ಯ ವಿಜ್ಞಾನ (ಜನರಲ್‌ ಮೆಡಿಸಿನ್‌) ವಿಷಯದ ಹುದ್ದೆಗಳಿಗೆ 257ಕ್ಕೆ 68 ಅರ್ಜಿಗಳು, ಜನರಲ್‌ ಸರ್ಜನ್‌ 101 ಕ್ಕೆ 79, ಪ್ರಸೂತಿ ತಜ್ಞರು 167 ಕ್ಕೆ 94, ಅರಿವಳಿಕೆ ತಜ್ಞರು 99 ಕ್ಕೆ 124, ಮಕ್ಕಳ ತಜ್ಞರು 158 ಕ್ಕೆ 105, ಕಣ್ಣು ತಜ್ಞರು 80 ಕ್ಕೆ 60, ಕೀಲುಮೂಳೆ ತಜ್ಞರು 38 ಕ್ಕೆ 75, ಕಿವಿ, ಮೂಗು, ಗಂಟಲು (ಇಎನ್‌ಟಿ) ತಜ್ಞರು 59 ಕ್ಕೆ 62, ಚರ್ಮರೋಗ ತಜ್ಞರು 79 ಕ್ಕೆ 21, ರೇಡಿಯಾಲಜಿ ತಜ್ಞರು 34 ಕ್ಕೆ 19 ಸೇರಿ ಒಟ್ಟು 1,072 ಹುದ್ದೆಗಳಿಗೆ 707 ಅರ್ಜಿ ಸಲ್ಲಿಕೆಯಾಗಿದೆ.

ಎಲ್ಲ ಹುದ್ದೆಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳು ಮತ್ತು ದಾಖಲೆಗಳ ಪರಿಶೀಲನೆ ಕಳೆದ ತಿಂಗಳು ಪೂರ್ಣಗೊಂಡಿದ್ದು, ನೇಮಕಾತಿ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಇನ್ನು ಹದಿನೈದು ದಿನಗಳ ಒಳಗೆ ಆಯ್ಕೆಗೊಂಡವರ ಪಟ್ಟಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

English summary
The Karnataka Public Service Commission (KPSC) issued a notification for the recruitment of 1,072 specialist doctors in government hospitals on August, but only 707 Application are submitted.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia