ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಶಿಕ್ಷಣ ಮಂಡಳಿ ಮಾಸ್ಟರ್ ಪ್ಲಾನ್

Posted By:

ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗುವುದಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿದ್ದು ಪ್ರೌಢ ಶಿಕ್ಷಣ ಮಂಡಳಿ ಈ ಬಾರಿಯ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ.

ಇದೇ ತಿಂಗಳ 30 ರಿಂದ ಪರೀಕ್ಷೆಗಳು ಆರಂಭವಾಗಲಿದ್ದು ಮಂಡಳಿಯು ಪರೀಕ್ಷಾ ಅಕ್ರಮ ತಡೆಯಲು ಹೊಸ ಯೋಜನೆ ರೂಪಿಸಿದೆ.

ಕಡಿಮೆ ಪರೀಕ್ಷಾ ಕೇಂದ್ರಗಳು

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಬಾರಿ 1,032 ಪರೀಕ್ಷಾ ಕೇಂದ್ರಗಳನ್ನು ಕಡಿಮೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸಂಖ್ಯೆ ಕಡಿಮೆ ಇದ್ದರೆ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಕೇಂದ್ರಕ್ಕೆ ತಲುಪಿಸುವುದು ಸುಲಭ ಆಗುತ್ತದೆ. ಅಲ್ಲದೆ, ಪ್ರಶ್ನೆಪತ್ರಿಕೆ ಸೋರಿಕೆಯಂತಹ ಅಕ್ರಮಗಳನ್ನು ತಡೆಗಟ್ಟಲು ಸಹಾಯ ಆಗಲಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಶಿಕ್ಷಣ ಮಂಡಳಿ ಮಾಸ್ಟರ್ ಪ್ಲಾನ್

ಹಿಂದೆಲ್ಲಾ 700 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಹ ಸೌಕರ್ಯ ಇರುವ ಕೇಂದ್ರದಲ್ಲಿ 350 ವಿದ್ಯಾರ್ಥಿಗಳು ಮಾತ್ರ ಇರುತ್ತಿದ್ದರು. ಇಂತಹ ಕೇಂದ್ರಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಒಟ್ಟಾರೆ ಪರೀಕ್ಷಾ ಕೇಂದ್ರಗಳ ಸಂಖ್ಯೆ ಕಡಿಮೆ ಮಾಡಲಾಗಿದೆ' ಎಂಬ ಮಾಹಿತಿಯನ್ನು ಮಂಡಳಿಯ ನಿರ್ದೇಶಕಿ ಯಶೋಧಾ ಬೋಪಣ್ಣ ತಿಳಿಸಿದ್ದಾರೆ.

ಸಿಸಿಟಿವಿ ಕಡ್ಡಾಯ ಇಲ್ಲ

ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿಸಿಟಿವಿ ಕಡ್ಡಾಯಗೊಳಿಸಲಾಗಿತ್ತು ಆದರೆ ಎಸ್ ಎಸ್ ಎಲ್ ಸಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯವಲ್ಲ ಎಂದು ಯಶೋಧಾ ಬೋಪಣ್ಣ ತಿಳಿಸಿದ್ದಾರೆ. ಈ ಹಿಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಪ್ರಸಂಗ ನಡೆದಿಲ್ಲ. ಅಧಿಕಾರಿಗಳು ಬಹಳ ಜಾಗರೂಕತೆಯಿಂದ ಪ್ರಶ್ನೆಪತ್ರಿಕೆಗಳನ್ನು ನೋಡಿಕೊಳ್ಳುತ್ತಾರೆ. ಸಿ.ಸಿ ಟಿ.ವಿ ಕ್ಯಾಮೆರಾ ಕಡ್ಡಾಯ ಮಾಡಿ ಆದೇಶ ಹೊರಡಿಸಿಲ್ಲ' ಎಂದೂ ಹೇಳಿದ್ದಾರೆ.

ಪರೀಕ್ಷಾ ಕೆಂದ್ರಗಳ ಅಂಕಿಸಂಖ್ಯೆ

20162017
3,8022,770

ಸಹಾಯವಾಣಿ ಸೇವೆ

ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ, ಸಹಾಯವಾಗುವ ನಿಟ್ಟಿನಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರತಿ ವರ್ಷದಂತೆ ಸಹಾಯವಾಣಿ ಆರಂಭಿಸಿದೆ.

ಸಹಾಯವಾಣಿ ಸಂಖ್ಯೆ 080-23310075, 23310076 ಆಗಿದ್ದು, ಮಾರ್ಚ್ 1 ರಿಂದ 28 ರ ವರೆಗೆ ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿದೆ. ಸರ್ಕಾರಿ ರಜಾ ದಿನಗಳ ಹೊರತಾಗಿ ಉಳಿದ ದಿನಗಳಲ್ಲಿ ಸಹಾಯವಾಣಿಗೆ ಕರೆ ಮಾಡಿ, ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.

ಪರೀಕ್ಷೆಯ ಮಾಹಿತಿ, ಸಿದ್ಧತೆ, ಪ್ರಶ್ನೆ ಪತ್ರಿಕೆ ಮಾದರಿ ಮೊದಲಾದ ಶೈಕ್ಷಣಿಕ ವಿಷಯಗಳು, ಪರೀಕ್ಷೆಯ ಭಯ, ಸಮಯ, ಮರೆವು, ಒತ್ತಡ ನಿರ್ವಹಣೆ ಮೊದಲಾದ ಪರೀಕ್ಷಾ ವಿಷಯಗಳ ಕುರಿತಾಗಿ ಪ್ರಶ್ನೆ ಕೇಳಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ಯಶೋದಾ ಬೋಪಣ್ಣ ಅವರು ಈ ಕುರಿತು ಮಾಹಿತಿ ನೀಡಿದ್ದು, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ, ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ

ಉಚಿತ ಬಸ್ ವ್ಯವಸ್ಥೆ

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಸಾರಿಗೆ ಇಲಾಖೆ ಅವಕಾಶ ಕಲ್ಪಿಸಿದೆ. ಪಾಸ್ ಅವಧಿ ಮುಗಿದಿದ್ದರೂ, ಪರೀಕ್ಷೆ ಮುಗಿಯುವವರೆಗೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ತೋರಿಸಿ ಕೆ.ಎಸ್.ಆರ್.ಟಿ.ಸಿ. ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಇದನ್ನು ಗಮನಿಸಿ: ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳಾಪಟ್ಟಿ

English summary
The number of examination centres for this year’s SSLC examinations have been reduced to make the process of conducting the exams smoother and more efficient

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia