ಕೆಎಸ್ಒಯು ಮುಚ್ಚುವ ಭೀತಿ: ದಯಾಮರಣ ಕೋರಿದ ಮಂಡ್ಯ ಯುವಕ

Posted By:

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು) ಮಾನ್ಯತೆಯನ್ನು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ತಿರಸ್ಕರಿಸಿರುವುದಕ್ಕೆ ನೊಂದ ಯುವಕ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕೆ.ಅಣ್ಣಹಳ್ಳಿ ಗ್ರಾಮದ ಕೃಷಿಕ ಕುಟುಂಬದ ಎ.ಎಸ್‌.ನಂದೀಶ ಎಂಬ ಯುವಕ ಶಿಕ್ಷಕನಾಗಬೇಕೆಂಬ ಆಸೆ ಹೊಂದಿರುವವರು. ಕೆಎಸ್ಒಯುಗೆ ಮಾನ್ಯತೆ ಸಿಗದ ಕಾರಣ ತನ್ನ ಭವಿಷ್ಯ ಅತಂತ್ರವಾಗಲಿದೆ ಎಂದು ದಯಾಮರಣದ ನಿರ್ಧಾರಕ್ಕೆ ಮುಂದಾಗಿದ್ದಾರೆ.

ದಯಾಮರಣ ಕೋರಿದ ಮಂಡ್ಯ ಯುವಕ

ನಂದೀಶ 2014- 15ರಲ್ಲಿ ಕೆಎಸ್‌ಒಯುವಿನಲ್ಲಿ ಅರ್ಥಶಾಸ್ತ್ರ ಸ್ನಾತಕೊತ್ತರ ಪದವಿಗೆ ಸೇರಿದ್ದು, ಪ್ರಥಮ ವರ್ಷದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಂಕಪಟ್ಟಿಯನ್ನೂ ಪಡೆದುಕೊಂಡಿದ್ದಾರೆ. ಈ ಅಂಕಪಟ್ಟಿಯ ಆಧಾರದ ಮೇಲೆ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲೂ (ಕೆ-ಸೆಟ್‌) ತೇರ್ಗಡೆಯಾಗಿದ್ದಾರೆ.

ನಂದೀಶ್ ಸಮಸ್ಯೆ
ನಂದೀಶ್ 2015-16ರಲ್ಲಿ 2ನೇ ವರ್ಷ ವ್ಯಾಸಂಗ ಮಾಡುತ್ತಿದ್ದಾಗ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವಿ.ವಿ ಮಾನ್ಯತೆಯನ್ನು ರದ್ದುಪಡಿಸಿತು. ಮಾನ್ಯತೆ ರದ್ದಾದ ನಂತರವೂ ವಿ.ವಿ ಪರೀಕ್ಷೆಯನ್ನೂ ನಡೆಸಿದೆ. ಆದರೆ, ಅಂಕಪಟ್ಟಿಯನ್ನು ನೀಡಿಲ್ಲ. ಇದರಿಂದಾಗಿ ಕೆ-ಸೆಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ, 2ನೇ ವರ್ಷದ ಎಂ.ಎ ಅಂಕಪಟ್ಟಿ ಅಥವಾ ಸ್ನಾತಕೋತ್ತರ ಪದವಿ ಪ್ರಮಾಣಪತ್ರವನ್ನು ನೀಡಲು ಸಾಧ್ಯವಾಗದೆ ನಂದೀಶ್ ಗೆ ಕೆ-ಸೆಟ್‌ ಪ್ರಮಾಣಪತ್ರ ದೊರೆತಿಲ್ಲ.

ಕೆಎಸ್ಒಯು ಜಾಗಕ್ಕೆ ನೂತನ ಮುಕ್ತ ವಿಶ್ವವಿದ್ಯಾಲಯ?

ದಯಾಮರಣ ಪತ್ರ

'ಬಡ ರೈತ ಕುಟುಂಬದಿಂದ ಬಂದಿರುವ ನನಗೆ ಇದರಿಂದ ಅತೀವ ನಷ್ಟವಾಗಿದೆ. ಶಿಕ್ಷಣದಿಂದ ಮಾತ್ರ ಜೀವನ ನಡೆಸಲು ಸಾಧ್ಯ ಎಂಬ ನಂಬಿಕೆಗೆ ಕೊಡಲಿ ಪೆಟ್ಟು ಬಿದ್ದಿದೆ. ಇದರಿಂದ ಕುಟುಂಬ ನಿರ್ವಹಣೆ ಕನಸಿನ ವಿಚಾರವಾಗಿದ್ದು, ನನಗೆ ಹಾಗೂ ನನ್ನ ಕುಟುಂಬಕ್ಕೆ ದಯಾಮರಣಕ್ಕೆ ಅವಕಾಶ ನೀಡಿ' ಎಂದು ರಾಷ್ಟ್ರಪತಿಗೆ ಬರೆದಿರುವ ಪತ್ರದಲ್ಲಿ ನಂದೀಶ್ ಮನವಿ ಮಾಡಿದ್ದಾರೆ.
ಅಲ್ಲದೆ ಪತ್ರದ ಪ್ರತಿಯನ್ನು ಪ್ರಧಾನ ಮಂತ್ರಿಗೂ ಕಳುಹಿಸಿದ್ದಾರೆ.

ಮುಚ್ಚುವ ಹಂತದಲ್ಲಿ ಕೆಎಸ್ಒಯು: ಮೂರು ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

'ಭಾರತದ ಸಂವಿಧಾನದ ಅನುಚ್ಛೇದ 21ರ ಪ್ರಕಾರ ಉನ್ನತವಾದ ಜೀವನವನ್ನು ಅನುಭವಿಸುವ ಅವಕಾಶದಿಂದ ಯುಜಿಸಿ ಮತ್ತು ಕೆಎಸ್ಒಯು ನನ್ನನ್ನು ವಂಚಿಸಿವೆ. ಆದರೆ, ಈ ಸಂಸ್ಥೆಗಳ ವಿರುದ್ಧ ಹೋರಾಡಲು ಆರ್ಥಿಕ ಶಕ್ತಿಯಿಲ್ಲ. ಬಡತನದ ವಿರುದ್ಧ ಹೋರಾಡಲೂ ಅಶಕ್ತನಾಗಿದ್ದೇನೆ. ಕೆಎಸ್‌ಒಯುಗೆ ಮಾನ್ಯತೆ ಇಲ್ಲದೇ ಇರುವ ಕಾರಣ ನನ್ನ ಜೀವನ ಕಮರಿ ಹೋಯಿತು. ನನಗೆ ನ್ಯಾಯ ದೊರಕಿಸಿಕೊಡಬೇಕು; ಇಲ್ಲವಾದರೆ ದಯಾಮರಣಕ್ಕೆ ಅವಕಾಶ ಮಾಡಿಕೊಡಬೇಕು' ಎಂದು ಅವರು ಕೋರಿದ್ದಾರೆ.

'ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುವ ಆರ್ಥಿಕ ಚೈತನ್ಯ ನನಗಿರಲಿಲ್ಲ. ಆದರೂ, ವೃತ್ತಿ ಗಳಿಸಬೇಕಾದರೆ ಪದವಿ ಅನಿವಾರ್ಯ ಎಂಬ ಕಾರಣಕ್ಕೆ ಕೆಎಸ್‌ಒಯುನಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದೆ. ಯುಜಿಸಿ ಹಾಗೂ ಕೆಎಸ್‌ಒಯು ಅಧಿಕಾರಿಗಳ ವಿದ್ಯಾರ್ಥಿ ವಿರೋಧಿ ನೀತಿಯಿಂದ ನನ್ನಂತ ಅನೇಕ ಯುವಕರಿಗೆ ಎಲ್ಲೂ ಉದ್ಯೋಗ ಸಿಗದಂತಾಗಿದೆ. ನನ್ನ ಕನಸು ನುಚ್ಚು ನೂರಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ತಲೆಕೆಳಗಾಗಿದೆ' ಎನ್ನುವುದು ನಂದೀಶ್ ಮಾತು.

English summary
UGC's decision on KSOU made Nandisha to take euthanasia. Nandisha from Mandya wrote letter to President of India seeking euthanasia.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia