ಕೆವಿಪಿವೈ ಫೆಲೋಶಿಪ್ ಗೆ ಪಿಯು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

Posted By:

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅನುದಾನದಲ್ಲಿ ನೀಡುವ 'ಕಿಶೋರ್‌ ವೈಜ್ಞಾನಿಕ್‌ ಪ್ರೋತ್ಸಾಹನ್‌ ಯೋಜನಾ (ಕೆವಿಪಿವೈ) ಫೆಲೋಶಿಪ್‌'ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2017 ನೇ ಸಾಲಿನ ಕೆವಿಪಿವೈ ಫೆಲೋಶಿಪ್ ಗಾಗಿ ಪಿಯುಸಿಯಲ್ಲಿ ಕಲಿಯುತ್ತಿರುವ ಮತ್ತು ಪಿಯುಸಿ ಪಾಸ್ ಆಗಿ ಪದವಿಗಳಿಗೆ ನೋಂದಾಯಿಸಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿ ವೇತನ

ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಿಂಗಳಿಗೆ ರೂ.5000/- ರಿಂದ ರೂ.7000/- ವರೆಗೂ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಮೂಲ ವಿಜ್ಞಾನ, ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸಲು ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ನೀಡಲಾಗುತ್ತದೆ.

ಪಿಯುಸಿ ವಿದ್ಯಾರ್ಥಿಗಳಿಗೆ ಕೆವಿಪಿವೈ ಫೆಲೋಶಿಪ್

ಕಿಶೋರ ವೈಜ್ಞಾನಿಕ ಪ್ರೋತ್ಸಾಹನ ಯೋಜನೆ (ಕೆವಿಪಿವೈ)

ಶಾಲಾ- ಕಾಲೇಜು ಮಟ್ಟದಿಂದಲೇ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮೂಲವಿಜ್ಞಾನದ ಸಂಶೋಧನಾ ಕ್ಷೇತ್ರದೆಡೆಗೆ ಸೆಳೆಯಲು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 1999ರಿಂದ ರಾಷ್ಟ್ರಮಟ್ಟದಲ್ಲಿ ಕಿಶೋರ ವೈಜ್ಞಾನಿಕ ಪ್ರೋತ್ಸಾಹನ ಯೋಜನೆ (ಕೆವಿಪಿವೈ) ಎಂಬ ಫೆಲೋಶಿಪ್ ನೀಡುತ್ತಿದೆ. ಫೆಲೋಷಿಪ್ ನೀಡುವುದರ ಜೊತೆಗೆ ದೇಶದ ಅತ್ಯುನ್ನತ ವಿಜ್ಞಾನ ಸಂಸ್ಥೆಗಳಲ್ಲಿ ಬೇಸಿಗೆ ಶಿಬಿರಗಳನ್ನು ಆಯೋಜಿಸಿ ಆ ಮೂಲಕ ಅವರ ಸಾಮರ್ಥ್ಯಗಳನ್ನು ಅರಿಯಲು ಸಹಾಯ ಮಾಡಲಾಗುತ್ತದೆ.

ಕೆವಿಪಿವೈ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಪದವಿಯಿಂದ ಪಿಎಚ್‌ಡಿ ಹಂತದವರೆಗೆ ಹಣಕಾಸಿನ ಅನುದಾನವನ್ನು ನೀಡಲಾಗುತ್ತದೆ. ಮೂಲವಿಜ್ಞಾನದಲ್ಲಿ ಸಾಧನೆ ಮಾಡುವ ಉತ್ಕಟ ಇಚ್ಛೆಯುಳ್ಳ ವಿದ್ಯಾರ್ಥಿಗಳಿಗೆ ಕೆವಿಪಿವೈ ಉತ್ತಮ ವೇದಿಕೆ. ಬೇಸಿಗೆ ಶಿಬಿರಗಳಲ್ಲಿ ದೇಶದ ಅತ್ಯುನ್ನತ ವಿಜ್ಞಾನ ಸಂಸ್ಥೆಗಳಲ್ಲಿ ಉತ್ಕೃಷ್ಟ ತರಬೇತುದಾರರಿಂದ ತರಬೇತಿ ಪಡೆಯುವ ಅವಕಾಶ ಇರುತ್ತದೆ. ಸಂಶೋಧನಾರ್ಥಿಗಳಿಗೆ ದೇಶದ ಪ್ರಖ್ಯಾತ ವಿಜ್ಞಾನಿಗಳಿಂದ ಮಾರ್ಗದರ್ಶನವೂ ಲಭಿಸುತ್ತದೆ.

ಭಾರತೀಯ ವಿಜ್ಞಾನ ಸಂಸ್ಥೆಗಳಲ್ಲಿ (ಐಐಎಸ್‌ಸಿ) ಪದವಿ ಹಾಗೂ ಇಂಟೆಗ್ರೇಟೆಡ್ ಎಂಎಸ್ಸಿ ಕೋರ್ಸ್‌ಗಳಿಗೆ ಕೆವಿಪಿವೈನಲ್ಲಿ ಪಡೆದ ಅಂಕಗಳನ್ನೇ ಆಯ್ಕೆಯ ಮಾನದಂಡವಾಗಿ ಪರಿಗಣಿಸಲಾಗುತ್ತದೆ.

ಅರ್ಹತೆ

ಪಿಯುಸಿ ಹಂತದಲ್ಲಿ ಕಲಿಯುತ್ತಿರುವ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪಾಸಾಗಿ ವಿವಿಧ ಪದವಿಗಳಿಗೆ ನೋಂದಾಯಿಸಿದ (ಬಿಎಸ್ಸಿ, ಬಿಎಸ್, ಇಂಟೆಗ್ರೇಟೆಡ್ ಎಂಎಸ್ಸಿ, ಎಂಎಸ್) ವಿದ್ಯಾರ್ಥಿಗಳು ಆಯಾ ಸ್ಟ್ರೀಮ್‌ನಡಿ ಅರ್ಜಿ ಸಲ್ಲಿಸಬಹುದು.

ಸ್ಟ್ರೀಮ್ ಎಸ್‌ಎ: ಹತ್ತನೇ ತರಗತಿ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಸರಾಸರಿ ಶೇ 80 (ಪರಿಶಿಷ್ಟರಿಗೆ ಶೇ 70) ಅಂಕ ಪಡೆದು ಪ್ರಥಮ ಪಿಯುಸಿ ವಿಜ್ಞಾನ ಓದುತ್ತಿರುವವರು.

ಎಸ್‌ಎಕ್ಸ್: ಹತ್ತನೇ ತರಗತಿ ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಸರಾಸರಿ ಶೇ 80 (ಪರಿಶಿಷ್ಟರಿಗೆ ಶೇ 70) ಅಂಕ ಪಡೆದು ದ್ವಿತೀಯ ಪಿಯು ಓದುತ್ತಿರುವ ಮತ್ತು ಮುಂದೆ ಮೂಲವಿಜ್ಞಾನದ ಪದವಿಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು. ಎಸ್‌ಬಿ: ಬಿಎಸ್ಸಿ, ಬಿಎಸ್, ಇಂಟೆಗ್ರೇಟೆಡ್ ಎಂಎಸ್ಸಿ ಪದವಿ ಓದುತ್ತಿರುವ ವಿದ್ಯಾರ್ಥಿಗಳು. ಆದರೆ ಇವರು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 60 (ಪರಿಶಿಷ್ಟರಿಗೆ ಶೇ 50) ಅಂಕ ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ

ಕೆವಿಪಿವೈ ಪರೀಕ್ಷೆಗಳು ದೇಶದಾದ್ಯಂತ ಅತ್ಯಂತ ಹೆಸರುವಾಸಿಯಾಗಿದ್ದು ದೇಶದ 54 ನಗರಗಳಲ್ಲಿ ಪರೀಕ್ಷೆಯು ನಡೆಯುತ್ತದೆ. ಮೂರೂ ಸ್ಟ್ರೀಮ್‌ಗಳಿಗೆ ಲಿಖಿತ ಅರ್ಹತಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ.ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಹಿಂದಿನ ಬೋರ್ಡ್ ಪರೀಕ್ಷೆಯಲ್ಲಿ ಪಡೆದ ಅಂಕ ಹಾಗೂ ಲಿಖಿತ ಅರ್ಹತಾ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುತ್ತದೆ.

ಅರ್ಹತಾ ಪರೀಕ್ಷೆಯು ಸಿಬಿಎಸ್‌ಸಿ 10+2 ಮಟ್ಟದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವವಿಜ್ಞಾನದ ಪಠ್ಯಕ್ರಮದ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರಶ್ನೆಪತ್ರಿಕೆಯಲ್ಲಿ ಪ್ರತಿಯೊಂದು ವಿಷಯಕ್ಕೂ ಸಮಾನವಾದ ಆದ್ಯತೆ ನೀಡಲಾಗಿರುತ್ತದೆ.

ಎಸ್‌ಎ ಸ್ಟ್ರೀಮ್‌ನ ಪ್ರಶ್ನೆಪತ್ರಿಕೆಯಲ್ಲಿ ಬಹು ಆಯ್ಕೆ ವಿಧ ಮತ್ತು ವಿವರಣಾತ್ಮಕ ಉತ್ತರದ ಪ್ರಶ್ನೆಗಳು ಎಂಬ ಎರಡು ವಿಧ. ಎಸ್‌ಎಕ್ಸ್ ಮತ್ತು ಎಸ್‌ಬಿ ಸ್ಟ್ರೀಮ್‌ಗಳಿಗೆ ಬಹು ಆಯ್ಕೆಯ ಒಂದೇ ಪ್ರಶ್ನೆಪತ್ರಿಕೆ ಬರೆದರೆ ಸಾಕು.

ಪ್ರತಿ ವರ್ಷ ವಿದ್ಯಾರ್ಥಿ ವೇತನವನ್ನು ಮುಂದುವರಿಸಲು ವಿದ್ಯಾರ್ಥಿಗಳ ಕಳೆದ ಸಾಲಿನ ಶೈಕ್ಷಣಿಕ ಸಾಧನೆಗಳನ್ನು ಹಾಗೂ ಬೇಸಿಗೆ ಶಿಬಿರಗಳಲ್ಲಿನ ಕಾರ್ಯನಿರ್ವಹಣೆಯನ್ನು ಪರಿಗಣಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-08-2017
ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ: 05-11-2017

ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ www.kvpy.iisc.ernet.in ಗಮನಿಸಿ

English summary
The Kishore Vaigyanik Protsahan Yojana (KVPY) is an on-going National Program of Fellowship in Basic Sciences, initiated and funded by the Department of Science and Technology, Government of India, to attract exceptionally highly motivated students for pursuing basic science courses and research career in science.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia