ರಾಷ್ಟ್ರಪತಿ ಕೋವಿಂದ್ ಜೊತೆಗೆ ತುಮಕೂರಿನ ವಿದ್ಯಾರ್ಥಿನಿ ಲಾವಣ್ಯ ಸಂವಾದ

Posted By:

ರಾಜ್ಯದ ವಿದ್ಯಾರ್ಥಿನಿ ಲಾವಣ್ಯಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಜೊತೆ ಸಂವಾದ ನಡೆಸುವ ಅವಕಾಶ ಒದಗಿ ಬಂದಿದೆ.

ಉತ್ತರ ಪ್ರದೇಶದ ಲಖನೌದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆ ಸಂಕಲ್ಪ ಸಿದ್ದಿ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ ಹಾಗೂ ತುಮಕೂರು ಜಿಲ್ಲೆಯ ಸ್ವಚ್ಛ ಭಾರತ್ ಯೋಜನೆ ಯೂನಿಸೆಫ್ ರಾಯಭಾರಿಯಾಗಿ ಜಿಲ್ಲೆಯ ವಿದ್ಯಾರ್ಥಿನಿ ಲಾವಣ್ಯ ಭಾಗವಹಿಸಲಿದ್ದಾರೆ. ಈ ತಿಂಗಳ 15 ರಂದು ನಡೆಯುವ ಲಖನೌ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಜೊತೆ ಸಂವಾದ ನಡೆಸಲಿದ್ದಾರೆ.

ಲಾವಣ್ಯ, ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದ ಸರ್ಕಾರಿ ಎಸ್.ಕೆ.ವಿ.ಡಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಕೆಲ ತಿಂಗಳ ಹಿಂದೆ ಲಾವಣ್ಯ, ಎರಡು ದಿನ ಊಟ ಬಿಟ್ಟು ತನ್ನ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಡುವಂತೆ ಪಟ್ಟು ಹಿಡಿದು ಅಧಿಕಾರಿಗಳ ಗಮನ ಸೆಳೆದಿದ್ದರು.

ಸ್ವಚ್ಛ ಭಾರತ್ ರಾಯಭಾರಿಯಾಗಿ ತುಮಕೂರಿನ ಲಾವಣ್ಯ

ಅಮಿತಾಬ್ ರಿಂದಲೂ ಭೇಷ್ ಎನಿಸಿಕೊಂಡಿದ್ದ ಲಾವಣ್ಯ

ಬಾಲಿವುಡ್​​ನ ಬಿಗ್‍ಬಿ ಅಮಿತಾಬ್ ಬಚ್ಚನ್​​ ಈಕೆಯ ಸಾಧನೆಯನ್ನ ರಿಯಾಲಿಟಿ ಶೋ ಒಂದರಲ್ಲಿ ಹಾಡಿಹೊಗಳಿದ್ದಾರೆ. ಅಂದಹಾಗೇ ಆಕೆ ಮಾಡಿದ ಸಾಧನೆ "ಶೌಚಾಲಯ ಕ್ರಾಂತಿ"

ಶೌಚಾಯಲ ವ್ಯವಸ್ಥೆಯೇ ಇಲ್ಲದ ಕುಗ್ರಾಮದಲ್ಲಿ ಅನ್ನ ನೀರು ಬಿಟ್ಟು, ಶೌಚಾಲಯ ಕಟ್ಟಿಸಿಕೊಂಡಿದ್ದಾಳೆ. ಆ ಮೂಲಕ ತನ್ನೂರಿನ ಸುಮಾರು ನೂರಕ್ಕೂ ಹೆಚ್ಚು ಮನೆಗಳಲ್ಲಿ ಶೌಚಾಲಯವನ್ನ ನಿರ್ಮಾಣಕ್ಕೆ ಪ್ರೇರೇಪಣೆಯಾಗಿದ್ದಾಳೆ.

ಉಪವಾಸ ಸತ್ಯಾಗ್ರಹ

ಲಾವಣ್ಯ ಒಮ್ಮೆ ತನ್ನೂರಿನ್ಲಲಿ ನಡೆದ ಸ್ವಚ್ಛ ಭಾರತ ಆಂದೋಲನದಲ್ಲಿ ಪಾಲ್ಗೊಂಡಿದ್ದಳು. ಈ ಆಂದೋಲನದಲ್ಲಿ ಬಯಲು ಶೌಚದಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಗಿತ್ತು. ಶೌಚಾಲಯ ನಿರ್ಮಾಣಕ್ಕಾಗಿ ಜಾಗೃತಿ ಮೂಡಿಸಲಾಗಿತ್ತು. ಇದ್ರಿಂದ ಪ್ರೇರೇಪಿತಗೊಂಡ ಲಾವಣ್ಯ ಅಂದೇ ಮನೆಗೆ ಬಂದು ಶೌಚಾಲಯ ಕಟ್ಟಿಸುವಂತೆ ಕೇಳಿಕೊಂಡಿದ್ದಳು.

ಬಡಕೂಲೀ ಕಾರ್ಮಿದ ಪೋಷಕರು ಶೌಚಾಲಯ ನಿರ್ಮಾಣಕ್ಕೆ ಹಣವಿಲ್ಲ ಅಂತಾ ಮಗಳಿಗೆ ಬುದ್ದಿ ಹೇಳಿ ಸುಮ್ಮನಾದಾಗ ಲಾವಣ್ಯ ಶೌಚಾಲಯ ಕಟ್ಟಿಸಲೇ ಬೇಕು ಅಂತಾ ಹಠ ಹಿಡಿದು ಉಪವಾಸ ಶುರು ಮಾಡಿದ್ದಳು.

ನಲವತ್ತೆಂಟು ಗಂಟೆಗಳ ಕಾಲ ಅನ್ನ ನೀರನ್ನ ತ್ಯಜಿಸಿದ್ದ ಲಾವಣ್ಯ ಗ್ರಾಮ ಪಂಚಾಯ್ತಿ ಮುಂದೆಯೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಳು. ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರೇ ಹಣ ಹಾಕಿ ಲಾವಣ್ಯ ಮನೆಯಲ್ಲಿ ಶೌಚಾಯಲ ನಿರ್ಮಾಣ ಮಾಡಿಕೊಟ್ಟರು.

"ನನ್ನ ಮಗಳು ಒಂದು ದಿನ ಬಂದು ನಮ್ಮ ಮನೆಯಲ್ಲಿ ಶೌಚಾಲಯ ಕಟ್ಟಿಸಿ ಅಂದಳು. ಆದ್ರೆ ಅಷ್ಟು ಹಣ ನಮ್ಮ ಬಳಿ ಇಲ್ಲ ಅಂತಾ ಹೇಳಿ ಸುಮ್ಮನಾದೆ. ಪ್ರತಿನಿತ್ಯ ಶಾಲೆಗೆ ಹೋಗುವಾಗ ನನಗೆ ಹೇಳಿ ಹೋಗ್ತಿದ್ದ ಲಾವಣ್ಯ ಅಂದು ನನ್ನ ಕಡೆ ತಿರುಗಿಯೂ ನೋಡದೆ ಹೋದಳು. ನಂತ್ರ ಊಟ ತಿಂಡಿ ಮಾಡುವುದನ್ನೂ ಬಿಟ್ಟುಬಿಟ್ಟಳು. ಹಾಗಾಗಿ ಗ್ರಾಮ ಪಂಚಾಯ್ತಿ ಸಹಾಯದಿಂದ ಮನೆಯಲ್ಲಿ ಒಂದು ಶೌಚಾಲಯವನ್ನು ಕಟ್ಟಿಸಿದೆವು"  ಎನ್ನುತ್ತಾರೆ ಲಾವಣ್ಯಳ ತಂದೆ.

ಗ್ರಾಮಕ್ಕೆ ಸ್ಪೂರ್ತಿ

ಲಾವಣ್ಯ ಈ ಪ್ರಯತ್ನದಿಂದ ಇಂದು ಹಾಲೇನಹಳ್ಳಿಯಲ್ಲಿ ನೂರಕ್ಕೂ ಹೆಚ್ಚು ಶೌಚಾಲಯಗಳಿವೆ. ಗ್ರಾಮದ ಯಾರೊಬ್ಬರು ಈಗ ಬಯಲು ಶೌಚ ಮಾಡುತ್ತಿಲ್ಲ. ಬದಲಾಗಿ ತಮ್ಮ ತಮ್ಮ ಮನೆಗಳಲ್ಲಿ ನಿರ್ಮಾಣವಾಗಿರುವ ಶೌಚಾಲಯಗಳನ್ನೇ ಬಳಸುತ್ತಿದ್ದಾರೆ. ಇದ್ರಿಂದ, ಗ್ರಾಮ ಸ್ವಚ್ಛ ಗ್ರಾಮವಾಗಿ ಮಾರ್ಪಟ್ಟಿದೆ. ಗ್ರಾಮದ ಸ್ವಚ್ಛತೆ ವಿಚಾರ ಇತರೆ ಹಳ್ಳಿಗಳಿಗೂ ಹರಡಿ, ಅಕ್ಕಪಕ್ಕದ ಗ್ರಾಮಗಳಲ್ಲೂ ಶೌಚಾಲಯ ಕ್ರಾಂತಿ ಆರಂಭವಾಗಿದೆ.

"ನನಗೆ ಬಯಲು ಶೌಚಕ್ಕೆ ಹೋಗುವುದು ಇಷ್ಟವಿರಲಿಲ್ಲ. ಶೌಚಾಲಯ ನಿರ್ಮಾಣ ಮಾಡಿದ್ರೆ ಏನೆಲ್ಲಾ ಪ್ರಯೋಜನೆಗಳಾಗುತ್ತವೆ ಅನ್ನೋದ್ರ ಬಗ್ಗೆ ಶಾಲೆಯಲ್ಲಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೆ. ನಮ್ಮ ಮೇಷ್ಟ್ರು ಇದರ ಬಗ್ಗೆ ತಿಳಿಸಿ ಹೇಳಿದ್ರು. ಹಾಗಾಗಿ ಶೌಚಾಲಯವನ್ನ ನಿರ್ಮಾಣ ಮಾಡಿಸಲೇಬೇಕು ಅಂತಾ ಹಠ ಹಿಡಿದೆ. ನಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣವಾದ ನಂತ್ರ ನಮ್ಮ ಸ್ನೇಹಿತರಿಗೂ ತಿಳಿಸಿದೆ. ಆಗ ಅವರೂ ತಮ್ಮ ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನ ಕಟ್ಟಿಸುವಂತೆ ಅವರ ತಂದೆ ತಾಯಿಗೆ ಹೇಳಿದ್ರು. ಇದ್ರಿಂದ, ನಮ್ಮ ಊರಿನಲ್ಲಿ ಈಗ ಎಲ್ಲಾ ಮನೆಗಳಲ್ಲೂ ಶೌಚಾಲಯಗಳು ನಿರ್ಮಾಣವಾಗಿವೆ. ಇದ್ರಿಂದ ನನಗೆ ತುಂಬಾ ಖುಷಿಯಾಗಿದೆ " ಎನ್ನುವುದು ಲಾವಣ್ಯ ಮಾತು.

English summary
Lavanya from Tumakuru district participating as UNICEF ambassador in Swachh Bharat Mission Plan on 15th of this month in Lucknow, Uttar Pradesh.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia