ಓಪನ್ ಗ್ರೇಸ್ ಮಾರ್ಕ್ಸ್ ಗೆ ಶಿಕ್ಷಣ ಇಲಾಖೆ ನಿರ್ಧಾರ

Posted By:

ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕೃಪಾಂಕ (ಗ್ರೇಸ್‌ ಮಾರ್ಕ್ಸ್‌) ನೀಡುವ ಸಂಬಂಧ ಇನ್ನುಮುಂದೆ ಶಿಕ್ಷಣ ಇಲಾಖೆ ನೂತನ ಮಾರ್ಗಸೂಚಿ ಅನುಸರಿಸಲಿದೆ.

ಪ್ರಶ್ನೆಪತ್ರಿಕೆ ದೋಷ ಮತ್ತು ಫಲಿತಾಂಶದ ಹೆಚ್ಚಳಕ್ಕಾಗಿ ಗುಟ್ಟಾಗಿ ನೀಡುತ್ತಿದ್ದ ಕೃಪಾಂಕವನ್ನು ಬಹಿರಂಗ ಪಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ನೂತನ ಮಾರ್ಗಸೂಚಿ ಪ್ರಕಾರ ಪರೀಕ್ಷಾ ಮಂಡಳಿಯು ಬಹಿರಂಗವಾಗಿ ನೀಡಲಿದ್ದು, ಕೃಪಾಂಕವನ್ನು ವಿದ್ಯಾರ್ಥಿಯ ಅಂಕಪಟ್ಟಿಯಲ್ಲಿ ಮುದ್ರಿಸಲಾಗುತ್ತದೆ.

ಗ್ರೇಸ್ ಮಾರ್ಕ್ಸ್ ಗೆ ಶಿಕ್ಷಣ ಇಲಾಖೆ ನಿರ್ಧಾರ

ನೂತನ ಕ್ರಮಕ್ಕೆ ಕಾರಣ

ಕಳೆದ ವರ್ಷ ದ್ವಿತೀಯ ಪಿಯು ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾಗಿ ಪ್ರಶ್ನೆಗಳನ್ನು ಕೇಳಿದ್ದರಿಂದ 21 ಕೃಪಾಂಕ ನೀಡಲಾಗಿತ್ತು. ಇದಕ್ಕೆ ಕೆಲವು ಆಕ್ಷೇಪಣೆಗಳೂ ಕೇಳಿಬಂದಿದ್ದವು. ಅಲ್ಲದೇ ಕೃಪಾಂಕ ನೀಡುವುದರ ಕುರಿತು ನಿರ್ದಿಷ್ಟ ನಿಯಮಗಳು ಕೂಡ ಇರಲಿಲ್ಲ, ಅಲ್ಲದೇ ಕೃಪಾಂಕವನ್ನು ರಹಸ್ಯವಾಗಿಡಲಾಗುತ್ತಿತ್ತು. ಇದನ್ನು ಬಗೆಹರಿಸಲು ಹೈಕೋರ್ಟ್ ಪಿಯುಸಿ ಶಿಕ್ಷಣ ಇಲಾಖೆಗೆ ಆದೇಶ ಹೊರಡಿಸಿತ್ತು.

ನೂತನ ಮಾರ್ಗಸೂಚಿ

ಪ್ರತಿಬಾರಿ ಕೃಪಾಂಕದ ವಿಚಾರವಾಗಿ ಗೊಂದಲಗಳು ಸಾಮಾನ್ಯವಾಗಿ ಉಂಟಾಗುತ್ತಲೆ ಇತ್ತು. ಇದಕ್ಕೆಲ್ಲ ಕಡಿವಾಣ ಹಾಕಲು ರಾಜ್ಯ ಸರ್ಕಾರದಿಂದ ಕೃಪಾಂಕ ಸಮಿತಿಯನ್ನು ರಚಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರನ್ನು ಒಳಗೊಂಡ ಸಮಿತಿಯು ಕೃಪಾಂಕ ನಿಗದಿ ಮಾಡಲಿದೆ.

ಪ್ರತಿ ವಿಷಯಕ್ಕೂ ಮೂವರು ವಿಷಯ ತಜ್ಞರ ಸಮಿತಿಯನ್ನು ರಚಿಸಲಾಗುತ್ತದೆ. ಅಗತ್ಯವಿದ್ದರೆ ಅದರಲ್ಲಿ ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ವಿಷಯ ತಜ್ಞರನ್ನು ಸಮಿತಿ ಸದಸ್ಯರಾಗಿ ನೇಮಿಸಲು ಅವಕಾಶ ಕಲ್ಪಿಸಲಾಗಿದೆ.

ಮೌಲ್ಯಮಾಪನದ ಹಂತದಲ್ಲೇ ಕೃಪಾಂಕ ನಿಗದಿಪಡಿಸಿ ಒಟ್ಟು ಅಂಕಗಳ ಜೊತೆ ಸೇರಿಸುವುದು ಹಾಗೂ ಫಲಿತಾಂಶದ ಸಂದರ್ಭದಲ್ಲಿ ಅಂಕ ಕೊಡುವಂಥ ಎರಡು ಮಾದರಿಗಳನ್ನು ರೂಪಿಸಲಾಗಿದೆ. ಈ ಎರಡೂ ಮಾದರಿಯ ಕೃಪಾಂಕ ನೀಡಿದಾಗ ಅಂಕಪಟ್ಟಿಯಲ್ಲಿ ಅದನ್ನು ಪ್ರತ್ಯೇಕವಾಗಿ ನಮೂದಿಸಲಾಗುತ್ತದೆ.

ಮೌಲ್ಯಮಾಪನ ಹಂತ

ಪಠ್ಯಗಳಿಗೆ ಹೊರತಾಗಿ ಅಥವಾ ಅಸ್ಪಷ್ಟ ಇಲ್ಲವೆ ಅಸಮಂಜಸ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಕೇಳಿದಾಗ ಎಷ್ಟು ಕೃಪಾಂಕ ನೀಡಬೇಕು ಎಂಬುದನ್ನು ಆಯಾ ವಿಷಯಕ್ಕೆ ತಕ್ಕಂತೆ ಸಮಿತಿ ನಿರ್ಧರಿಸಬೇಕು. ಅಗತ್ಯ ಇದ್ದರೆ ವಿಷಯ ತಜ್ಞರ ಅಭಿಪ್ರಾಯವನ್ನೂ ಪಡೆಯಬಹುದು ಎಂದು ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕೃಪಾಂಕ ನೀಡಲು ನಿರ್ಧರಿಸಿದ ಪ್ರಶ್ನೆಗೆ ವಿದ್ಯಾರ್ಥಿ ಉತ್ತರಿಸಲಿ ಅಥವಾ ಬಿಡಲಿ ಪೂರ್ಣ ಕೃಪಾಂಕ ನೀಡಬೇಕು. ಒಂದು ವೇಳೆ ಆ ಪ್ರಶ್ನೆ ಐಚ್ಛಿಕ ಆಗಿದ್ದಾಗ, ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾನೆಯೇ ಎಂದು ಗಮನಿಸಬೇಕು. ಅದಕ್ಕೂ ಉತ್ತರಿಸದಿದ್ದರೆ ಅಂತಹ ಸಂದರ್ಭದಲ್ಲಿ ಪೂರ್ಣ ಅಂಕ ನೀಡಬೇಕಾಗುತ್ತದೆ.

ಮೌಲ್ಯಮಾಪನದಲ್ಲಿ ಕೃಪಾಂಕ

ವಿದ್ಯಾರ್ಥಿಯು ಉತ್ತೀರ್ಣನಾಗಲು ಎಲ್ಲ ವಿಷಯಗಳಲ್ಲಿ ಅಗತ್ಯ ಅಂಕ ಗಳಿಸಿ ಎರಡು ವಿಷಯಗಳಲ್ಲಿ ಅನುತ್ತೀರ್ಣ ಆಗಿದ್ದರೆ ಕೃಪಾಂಕ ನೀಡಬಹುದು. ಆದರೆ, ಇದು ಆಯಾ ಪ್ರಶ್ನೆಪತ್ರಿಕೆಯ ಒಟ್ಟು ಅಂಕಗಳ ಶೇ 5ರಷ್ಟು ಮೀರಬಾರದು ಎಂಬ ಷರತ್ತು ವಿಧಿಸಲಾಗಿದೆ.

English summary
new committee formed to solve the grace marks issues, newly formed committee decided to print the grace marks separately in marks card

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia