ಎಂಎಚ್​ಆರ್​ಡಿ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಡಿ.ಎಡ್ ಕಡ್ಡಾಯ

Posted By:

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಡಿ.ಎಡ್ (ಡಿಪ್ಲೊಮಾ ಇನ್ ಎಜುಕೇಷನ್) ಕಡ್ಡಾಯ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್​ಆರ್​ಡಿ) ತಿಳಿಸಿದೆ.

ಡಿ.ಎಡ್ (ಡಿಪ್ಲೊಮಾ ಇನ್ ಎಜುಕೇಷನ್) ಪೂರೈಸದ ಶಿಕ್ಷಕರು 2019ರೊಳಗೆ ದೂರಶಿಕ್ಷಣದ ಮೂಲಕ ಕೋರ್ಸ್ ಮುಗಿಸದೇ ಇದ್ದಲ್ಲಿ ಕೆಲಸಕ್ಕೆ ಕುತ್ತು ಬರಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್​ಆರ್​ಡಿ) ಎಲ್ಲ ರಾಜ್ಯಗಳಿಗೂ ಆದೇಶ ನೀಡಿದೆ.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಡಿ.ಎಡ್ ಕಡ್ಡಾಯ

ಡಿ.ಎಡ್ ಪದವಿ ಪೂರೈಸದೆ ಇರುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಶಿಕ್ಷಕರು 2019ರ ಮಾರ್ಚ್ 31ರೊಳಗೆ ಕಡ್ಡಾಯವಾಗಿ ಡಿ.ಎಡ್ ಶಿಕ್ಷಣ ಪಡೆದುಕೊಳ್ಳುವಂತೆ ಸೂಚಿಸಿದೆ. ತಪ್ಪಿದಲ್ಲಿ 2019ರ ಏ.1ರಿಂದ ಅಂತಹ ಶಿಕ್ಷಕರು ತಮ್ಮ ಹುದ್ದೆಯಲ್ಲಿ ಮುಂದುವರೆಯಲು ಅರ್ಹರಾಗಿರುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಆರ್​ಟಿಇ ಕಾಯ್ದೆ -2009ಕ್ಕೆ ತಿದ್ದುಪಡಿ ತಂದು ಇತ್ತೀಚೆಗೆ ಸಂಸತ್ ಅಧಿವೇಶನದಲ್ಲಿ ಅನುಮೋದನೆ ಪಡೆದ ಬಳಿಕ ಕೇಂದ್ರ ಸರ್ಕಾರ ಈ ಹೊಸ ಆದೇಶವನ್ನು ಹೊರಡಿಸಿದೆ.

ಶಿಕ್ಷಕರ ಮಾಹಿತಿ ಸಂಗ್ರಹ

ನ್ಯಾಷನಲ್ ಓಪನ್ ಸ್ಕೂಲಿಂಗ್ ಪ್ರೋಗ್ರಾಮ್ ಅಥವಾ ದೂರ ಶಿಕ್ಷಣ ಮೂಲಕ ಶಿಕ್ಷಕರು ಡಿ.ಎಡ್ ಮಾಡಬಹುದಾಗಿದೆ. ಇದಕ್ಕಾಗಿ ಆಯಾ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿ ಕ್ರಮ ವಹಿಸುವಂತೆ ಸೂಚಿಸಿದೆ.

ರಾಜ್ಯ ಸರ್ಕಾರ ಈಗಾಗಲೇ ಡಿ.ಎಡ್ ವಿದ್ಯಾರ್ಹತೆ ಇಲ್ಲದ ಶಿಕ್ಷಕರ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದು, ಎಲ್ಲ ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ವರದಿ ತರಿಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಶೀಘ್ರ ಡಿಡಿಪಿಐ, ಬಿಇಒಗಳಿಗೆ ಸೂಚಿಸಲಾಗುವುದೆಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಾಥಮಿಕ ಶಿಕ್ಷಣಕ್ಕೆ ಡಿ.ಎಡ್ ಕಡ್ಡಾಯಗೊಳಿಸುವ ಮೊದಲು ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಹತೆ ಹೊಂದಿದ್ದವರನ್ನು ಸೂಕ್ತ ತರಬೇತಿಯೊಂದಿಗೆ ಶಿಕ್ಷಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ರಾಜ್ಯದಲ್ಲಿ ಈ ರೀತಿ ನೇಮಕಗೊಂಡಿದ್ದ ಬಹುತೇಕರು ಈಗಾಗಲೇ ನಿವೃತ್ತರಾಗಿದ್ದಾರೆ. ಇನ್ನು ಉಳಿದಿರಬಹುದಾದ ಕೆಲವರು 2019ರ ವೇಳೆಗೆ ನಿವೃತ್ತರಾಗಲಿದ್ದಾರೆ. ಉತ್ತರ ಭಾರತದ ರಾಜ್ಯಗಳಲ್ಲಿ ಶಿಕ್ಷಕ ಹುದ್ದೆಗೆ ಬಹಳ ತಡವಾಗಿ ಡಿ.ಎಡ್ ಕಡ್ಡಾಯ ಮಾಡಲಾಯಿತು. ಅಂತಹ ರಾಜ್ಯಗಳಿಗೆ ಈ ಆದೇಶ ಹೆಚ್ಚಿನ ಅನುಕೂಲ. ಕರ್ನಾಟಕದಲ್ಲಿ ಇಂತಹ ಶಿಕ್ಷಕರ ಸಂಖ್ಯೆ ಬಹಳ ಕಡಿಮೆ ಎಂದು ಶಿಕ್ಷಕ ವರ್ಗ ಹೇಳುತ್ತದೆ.

English summary
Diploma in education D.Ed is compulsory for all primary school teachers, Ministry of human resource development said.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia