ವಿದ್ಯಾರ್ಥಿಗಳ ಕುರಿತು ಮೋದಿ ಹೇಳಿದ್ದೇನು?

Posted By:

ಸ್ವಾಮಿ ವಿವೇಕಾನಂದರ 1893ರ ಷಿಕಾಗೊ ಭಾಷಣದ 125 ವರ್ಷಾಚರಣೆ ಮತ್ತು ಪಂಡಿತ್ ದೀನದಯಾಳ್ ಉಪದ್ಯಾಯ ಅವರ ಜನ್ಮ ಶತಮಾನೋತ್ಸವ ಪ್ರಯುಕ್ತ ನಡೆದ ಯುವ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶಪ್ರೇಮ ಮತ್ತು 9/11 ಕ್ಕೆ ವಿಶಿಷ್ಟ ವ್ಯಾಖ್ಯಾನ ನೀಡಿದರು.

ದೇಶಪ್ರೇಮವೆಂದರೆ ಸ್ವಚ್ಛತೆ, 9/11 ಎಂದರೆ ಉಗ್ರರ ದಾಳಿಯಲ್ಲ ಅದು ಷಿಕಾಗೊ ಭಾಷಣ ಎಂದು ಪ್ರಧಾನಿ ಮೋದಿ ಯುವ ಸಮೂಹವನ್ನು ಕುರಿತು ಹೇಳಿದರು.

ವಿವೇಕಾನಂದರ ಭಾಷಣ

ವಿದ್ಯಾರ್ಥಿಗಳಿಗೆ ಮೋದಿ ಪಾಠ

ವಂದೇ ಮಾತರಂ ಮತ್ತು ಸ್ವಚ್ಛತೆಯ ಸಂದೇಶ

ಪ್ರಧಾನಿಯವರ ಭಾಷಣಕ್ಕೂ ಮೊದಲು ಅವರಿಗೆ 'ವಂದೇ ಮಾತರಂ' ಮೂಲಕ ಸ್ವಾಗತ ಕೋರಲಾಯಿತು. ಅದರಿಂದಲೇ ಭಾಷಣ ಆರಂಭಿಸಿದ ಮೋದಿಯವರು ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಪಾಠ ಮಾಡಿದರು. 'ವಂದೇ ಮಾತರಂ' ಕೇಳುವಾಗ ನನ್ನ ಮೈನವಿರೇಳುತ್ತದೆ. ನಮಗೆ 'ವಂದೇ ಮಾತರಂ' ಹಾಡುವ ಹಕ್ಕು ಇದೆಯೇ ಎಂದು ನಾನು ಭಾರತೀಯರನ್ನು‌ ಪ್ರಶ್ನಿಸುತ್ತಿದ್ದೇನೆ. ನನ್ನ ಮಾತುಗಳಿಂದ ಹಲವು ಜನರಿಗೆ ನೋವಾಗಬಹುದು. ಆದರೆ ಈ ಬಗ್ಗೆ 50 ಬಾರಿ ಯೋಚಿಸಿ- ಭಾರತ ಮಾತೆಯ ಮೇಲೆ ಬೀಡಾ ಜಗಿದು ಉಗುಳುವವರಿಗೆ ವಂದೇ ಮಾತರಂ ಹಾಡುವ ಹಕ್ಕಿದೆಯೇ? ಗಂಗಾ ನದಿಗೆ ಕೊಳಕು ಚೆಲ್ಲಿ ಮತ್ತೆ ಆ ನದಿಗೆ ಹೋಗಿ ಪುಣ್ಯಸ್ನಾನ ಮಾಡುವ ಹಕ್ಕು ನಮಗೆ ಇದೆಯೇ' ಎಂದು ಪ್ರಧಾನಿ ಪ್ರಶ್ನಿಸಿದರು.

ಅಭಿವೃದ್ಧಿ ಕಡೆಗೆ ಚಿಂತನೆ

ವಿವೇಕಾನಂದರ ದೂರದೃಷ್ಟಿ, ಅಭಿವೃದ್ಧಿ ಬಗೆಗಿನ ಚಿಂತನೆಯನ್ನು ಹೇಳಿದ ಅವರು ಯುವಜನತೆ ಆವಿಷ್ಕಾರ ಮತ್ತು ಕೌಶಲ ಅಭಿವೃದ್ಧಿಯಲ್ಲಿ ಹೆಚ್ಚಾಗಿ ತೊಡಗಬೇಕು ಎಂದು ಸಲಹೆ ನೀಡಿದರು. ಆವಿಷ್ಕಾರ ಮತ್ತು ಸೃಜನಶೀಲತೆಗೆ ವಿಶ್ವವಿದ್ಯಾಲಯದಷ್ಟು ಸೂಕ್ತವಾದ ಬೇರೊಂದು ಸ್ಥಳ ಇಲ್ಲ. ಕ್ರಿಯಾಶೀಲತೆ ಇಲ್ಲದೆ ಜೀವನವೇ ಇಲ್ಲ. ಈ ಕ್ರಿಯಾಶೀಲತೆ ನಮ್ಮ ದೇಶವನ್ನು ಬಲಪಡಿಸಲಿ ಮತ್ತು ಜನರ ಆಕಾಂಕ್ಷೆಗಳನ್ನು ಈಡೇರಿಸಲಿ ಎಂದು ಹಾರೈಸಿದರು.

ಭಾತೃತ್ವದ ವಿಚಾರ

ವಿವೇಕಾನಂದರ ನುಡಿಗಳ ಬಗ್ಗೆ ಗೌರವ ಇದ್ದರೆ ಸಾಲದು, ಅವರು ಆಡಿದ ಮಾತುಗಳನ್ನು ಪಾಲಿಸಬೇಕು. ವಿಶೇಷವಾಗಿ ಮಹಿಳೆಯರ ಬಗ್ಗೆ ಅವರಿಗೆ ಅಪಾರ ಗೌರವ ಇತ್ತು. ಅಂತಲೇ ಅವರು ಅಂದು ಅಮೆರಿಕದಲ್ಲಿ 'ಬ್ರದರ್ಸ್‌ ಅಂಡ್‌ ಸಿಸ್ಟರ್ಸ್‌ ಆಫ್‌ ಅಮೆರಿಕ' ಎನ್ನುವ ನುಡಿಗಳ ಮೂಲಕ ಭಾಷಣ ಶುರು ಮಾಡಿದ್ದರು. ವಿವೇಕಾನಂದರ ಈ ಸಂದೇಶ ಅರಿತವರು ಮಾತ್ರ ಅವರ ಆದರ್ಶದ ಹಾದಿಯಲ್ಲಿ ನಡೆಯಲು ಸಾಧ್ಯ ಎಂದು ಪ್ರಧಾನಿ ಮೋದಿ ಹೇಳಿದರು.

ಕಾಲೇಜ್ ಡೇ

ಕಾಲೇಜುಗಳಲ್ಲಿ ಆಚರಿಸುವ ವಿವಿಧ ಡೇಗಳ ಬಗ್ಗೆ ಪ್ರಸ್ತಾಪಿಸಿದ ಮೋದಿಯವರು "ಕಾಲೇಜುಗಳಲ್ಲಿ ನಾನಾ ದಿನಾಚರಣೆಗಳನ್ನು ಮಾಡಲಾಗುತ್ತದೆ. ಕೆಲವರು 'ರೋಸ್‌ ಡೇ' ಆಚರಿಸುತ್ತಾರೆ. ಕೆಲವರು ಇದನ್ನು ವಿರೋಧಿಸಬಹುದು. ಆದರೆ ನಾನು ವಿರೋಧಿಸುವುದಿಲ್ಲ. ಆದರೆ ಹರಿಯಾಣದ ಯಾವುದಾದರೂ ಕಾಲೇಜು ತಮಿಳು ಡೇ ಆಚರಿಸಿದೆಯಾ? ಪಂಜಾಬಿನ ಯಾವುದಾದರೂ ಕಾಲೇಜು ಕೇರಳ ಡೇ ಆಚರಿಸಿದ್ದು ಇದೆಯಾ? ಸೃಜನಶೀಲತೆ ಹಾಗೂ ಸಂಶೋಧನಾತ್ಮಕತೆಯನ್ನು ಬೆಳೆಸಲು ಯೂನಿವರ್ಸಿಟಿ ಕ್ಯಾಂಪಸ್‌ಗಳಿಗಿಂತ ಉತ್ತಮ ಜಾಗ ಇನ್ನೊಂದಿಲ್ಲ. ಇಂಥ ದಿನಗಳನ್ನು ಆಚರಿಸುವುದರಿಂದ ಭಾರತದ ಒಕ್ಕೂಟವನ್ನು ಗಟ್ಟಿಗೊಳಿಸಿದಂತಾಗುತ್ತದೆ. ಎಂದು ಹೇಳಿದರು.

English summary
PM Narendra Modi is addressing a students' convention to mark the 125th anniversary of Swami Vivekananda's Chicago address and BJP ideologue Deendayal Upadhyaya's centenary celebrations.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia