ಮೈಸೂರು ವಿವಿ ಅವಾಂತರ: ಪಿಎಚ್‌.ಡಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ನಕಲು

Posted By:

ಮೈಸೂರು ವಿವಿ ಪಿಎಚ್‌.ಡಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ನಕಲು ಮಾಡಿರುವುದು ಈಗ ಬೆಳಕಿಗೆ ಬಂದಿದೆ.

ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪಿಎಚ್‌.ಡಿ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಖಾಸಗಿ ವೆಬ್‌ಸೈಟ್ ಒಂದರಿಂದ ಯಥಾವತ್ ನಕಲು ಮಾಡಿ ಸಿದ್ಧಪಡಿಸಿರುವುದು ಬಹಿರಂಗವಾಗಿದೆ.

www.currentgk.com ವೆಬ್‌ಸೈಟ್‌ನಿಂದ ನಕಲು ಮಾಡಲಾಗಿದ್ದು, ಒಟ್ಟು 18 ಪ್ರಶ್ನೆಗಳನ್ನು ಬಳಸಿಕೊಳ್ಳಲಾಗಿದೆ.

ಪಿಎಚ್‌.ಡಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ನಕಲು

100 ಅಂಕಗಳ ಪರೀಕ್ಷೆಯಲ್ಲಿ 50 ಅಂಕಗಳಿಗೆ ಬಹುಆಯ್ಕೆ ಪ್ರಶ್ನೆಗಳು, 50 ಅಂಕಗಳಿಗೆ ದೀರ್ಘ ಉತ್ತರದ ಪ್ರಶ್ನೆಗಳು ಇರುತ್ತವೆ. ಬಹುಆಯ್ಕೆ ಪ್ರಶ್ನೆಗಳ ಪೈಕಿ 18 ಪ್ರಶ್ನೆಗಳನ್ನು www.currentgk.com ವೆಬ್‌ಸೈಟ್‌ನಿಂದ ನಕಲು ಮಾಡಲಾಗಿದೆ.

'ಇದು ಗಂಭೀರ ಲೋಪವಾಗಿದ್ದು, ಪ್ರಶ್ನೆಪತ್ರಿಕೆ ರೂಪಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ನೋಟಿಸ್‌ ನೀಡಲು ತೀರ್ಮಾನಿಸಲಾಗಿದೆ ಎಂದು ಮೈಸೂರು ವಿ.ವಿ ಪ್ರಭಾರಿ ಕುಲಪತಿ ಪ್ರೊ.ದಯಾನಂದ ಮಾನೆ ತಿಳಿಸಿದ್ದಾರೆ.

ಬಹುಆಯ್ಕೆ ಪ್ರಶ್ನೆಗಳನ್ನು ರೂಪಿಸಲು 10 ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ. ಅವರಿಗೆ 1 ಪ್ರಶ್ನೆಗೆ 3 ಸಾವಿರ ರೂ.ಗಳನ್ನು ಪಾವತಿಸಲಾಗುವುದು. ಅಲ್ಲದೆ ಇದು ತರಾತುರಿಯಲ್ಲಿ ಪ್ರಶ್ನೆಪತ್ರಿಕೆ ರೂಪಿಸಿರುವುದಕ್ಕೆ ಉದಾಹರಣೆ. ಒಂದೆರಡು ಪ್ರಶ್ನೆಗಳನ್ನು ವೆಬ್‌ಸೈಟ್‌ನಿಂದ ತೆಗೆದುಕೊಂಡಿದ್ದರೆ ದೊಡ್ಡ ತಪ್ಪಲ್ಲ. 18 ಪ್ರಶ್ನೆಗಳನ್ನು ಯಥಾವತ್‌ ಪಡೆದಿರುವುದು ಲೋಪ. ಇದನ್ನು ಗಮನಿಸಿದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಅನುಮಾನವೂ ಬರುತ್ತದೆ. ಹೀಗಾಗಿ, ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಭ್ಯರ್ಥಿಗಳಿಗೆ ಬದಲಿ ಪರೀಕ್ಷೆ

ಪ್ರಶ್ನೆ ಪತ್ರಿಕೆಯ ಎಡವಟ್ಟಿನಿಂದ ಬಹುತೇಕ ಪ್ರತಿಭಾವಂತ ಅಭ್ಯರ್ಥಿಗಳಿಗೆ ತೊಂದರೆಯಾಗಿದೆ. ಇದು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದ್ದು, ಬದಲಿ ಪರೀಕ್ಷೆಗೆ ಚಿಂತನೆ ನಡೆಸಿದ್ದೇವೆ. ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್‌ ಜತೆ ಚರ್ಚಿಸಲಾಗಿದೆ ಎಂದು ಪ್ರಭಾರಿ ಕುಲಪತಿಗಳು ತಿಳಿಸಿದ್ದಾರೆ.

ಇನ್ನು ಈ ಕುರಿತಂತೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಮುಂಚೆಯೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಸಾಧ್ಯತೆಗಳ ಬಗ್ಗೆ ವಿದ್ಯಾರ್ಥಿಗಳು ಅನುಮಾನ ವ್ಯಕ್ತ‍ಪಡಿಸಿದ್ದಾರೆ ಅಲ್ಲದೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದರಿಂದ ನಮ್ಮ ಶ್ರಮ ವ್ಯರ್ಥವಾಗಿದೆ. ಭವಿಷ್ಯದ ಮೇಲೆ ಬರೆ ಎಳೆದಂತಾಗಿದೆ. ಇದರ ಹಿಂದೆ ಏನೋ ಸಂಚು ನಡೆದಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಯುಜಿಸಿ ನಿಯಮಾವಳಿ ಪ್ರಕಾರ ವಿದ್ಯಾರ್ಥಿಗಳು ಪಿಎಚ್‌.ಡಿ ಕೋರ್ಸಿಗೆ ನೋಂದಣಿಯಾಗಲು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ವರ್ಷದೊಳಗೆ ಸಂಶೋಧನೆ ಆರಂಭಿಸಬಹುದು.

English summary
University of Mysore Ph.D entrance examination of the Department of Political Science question paper has copied from website.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia