ಬರಲಿದೆ ಡಿಜಿಟಲ್ ಮಾರ್ಕ್ಸ್ ಕಾರ್ಡ್: ಇನ್ನು ಮುಂದೆ ಅಂಕಪಟ್ಟಿ ಕಳೆದುಹೋಗುವುದಿಲ್ಲ!

Posted By:

ಅಂಕಪಟ್ಟಿಗಳ ದೋಷ, ಕಳವು, ದೃಢೀಕರಣ ಹೀಗೆ ಹಲವು ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

National Academic Depository (NAD) 'ರಾಷ್ಟ್ರೀಯ ಶೈಕ್ಷಣಿಕ ಕಣಜ' ದ ಮೂಲಕ ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿವರೆಗೂ ವೃತ್ತಿಪರ ಕೋರ್ಸ್‌ ಸೇರಿ ವಿವಿಧ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಅಂಕಪಟ್ಟಿ ಹಾಗೂ ಹಲವು ಬಗೆಯ ಪ್ರಮಾಣಪತ್ರಗಳನ್ನು ಆನ್ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಲು ಸಿದ್ಧತೆ ನಡೆಸಿದೆ.

ಡಿಜಿಟಲ್ ಮಾರ್ಕ್ಸ್ ಕಾರ್ಡ್

'ನ್ಯಾಡ್' (NAD) ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ದೇಶದ ಎಲ್ಲ ಕಾಲೇಜುಗಳ ಹಾಗು ವಿದ್ಯಾರ್ಥಿಗಳ ಮಾಹಿತಿಗಳನ್ನು ಅಪ್ಲೋಡ್ ಮಾಡುವ ಕ್ರಿಯೆ ನಡೆಯುತ್ತಿದೆ. https://nad.ndml.in ನಲ್ಲಿ ವಿದ್ಯಾರ್ಥಿಗಳು ತಮ್ಮ ಆಧಾರ್‌' ಕಾರ್ಡ್‌ ಸಂಖ್ಯೆಯನ್ನು ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

'ನ್ಯಾಡ್‌' ಯೋಜನೆ

ಕೇಂದ್ರ ಸರ್ಕಾರವು ಮಾನವ ಸಂಪನ್ಮೂಲ ಇಲಾಖೆಯ ಮೂಲಕ ಜಾರಿಗೆ ತಂದಿರುವ ಈ ಯೋಜನೆಯು ಪ್ರಧಾನಿ ನರೇಂದ್ರ ಮೋದಿ ಅವರ 'ಡಿಜಿಟಲ್‌ ಇಂಡಿಯಾ'ದ ಭಾಗವಾಗಿ 2016ರ ನವೆಂಬರ್‌ನಲ್ಲಿ ವಿಶ್ವವಿದ್ಯಾಲಯ ಹಣಕಾಸು ಆಯೋಗದಡಿ (ಯುಜಿಸಿ) ಅಸ್ತಿತ್ವಕ್ಕೆ ಬಂತು.

ವಿದ್ಯಾರ್ಥಿಗಳ ಅಂಕಪಟ್ಟಿ, ಪದವಿ ಪ್ರಮಾಣಪತ್ರ, ವಿವಿಧ ಕೋರ್ಸ್‌ಗಳ ಪ್ರಮಾಣಪತ್ರ ಸೇರಿ ಎಲ್ಲ ಬಗೆಯ ಶೈಕ್ಷಣಿಕ ಚಟುವಟಿಕೆಗಳ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. 'ನ್ಯಾಡ್‌'ನಲ್ಲಿ ದಿನದ 24 ಗಂಟೆಯೂ ಡಿಜಿಟಲ್‌ ಪ್ರಮಾಣಪತ್ರಗಳು ಲಭ್ಯವಿರಲಿವೆ. ನೋಂದಾಯಿಸಿಕೊಂಡ ವಿದ್ಯಾರ್ಥಿಗಳು ಮೊಬೈಲ್‌ನಲ್ಲೇ ಅಂಕಪಟ್ಟಿಗಳನ್ನು ನೋಡಬಹುದಾಗಿದೆ.

ಎನ್‌ಎಸ್‌ಡಿಎಲ್‌ ಡೇಟಾಬೇಸ್‌ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌ (ಎನ್‌ಡಿಎಂಎಲ್‌) ಹಾಗೂ ಸಿಡಿಎಸ್‌ಎಲ್‌ ವೆಂಚರ್ಸ್‌ ಲಿಮಿಟೆಡ್‌ (ಸಿವಿಎಲ್‌) ಕಂಪನಿಗಳು ಶಿಕ್ಷಣ ಸಂಸ್ಥೆಗಳ ಪ್ರಮಾಣಪತ್ರಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯಕ್ಕೆ ನೆರವಾಗುತ್ತಿವೆ.

ನ್ಯಾಡ್ ಗೆ ಆಧಾರ್ ಲಿಂಕ್

2017ನೇ ಸಾಲಿನಲ್ಲಿ ಪ್ರವೇಶ ಪಡೆದ ಪದವಿ ವಿದ್ಯಾರ್ಥಿಗಳ ಆಧಾರ್‌ ಸಂಖ್ಯೆಗಳನ್ನು 'ನ್ಯಾಡ್‌'ಗೆ ಲಿಂಕ್‌ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದರ ಬಗ್ಗೆ ಮೌಲ್ಯಮಾಪನ ವಿಭಾಗದ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಬಳಿಕ ಮೊದಲನೇ ಹಂತದಲ್ಲಿ ಮುಂದಿನ ವರ್ಷದ ಘಟಿಕೋತ್ಸವದ ವೇಳೆಗೆ ಪಿಎಚ್‌.ಡಿ. ಪದವಿ ಪ್ರಮಾಣಪತ್ರಗಳು 'ನ್ಯಾಡ್‌'ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ನ್ಯಾಡ್ ಉಪಯೋಗಗಳು

ಅಂಕಪಟ್ಟಿಗಳ ಡಿಜಿಟಲೀಕರದಿಂದಾಗಿ ವಿದ್ಯಾರ್ಥಿಗಳ ಎಲ್ಲ ಶೈಕ್ಷಣಿಕ ಪ್ರಮಾಣಪತ್ರಗಳು ಒಂದೇ ಕಡೆ ಸುರಕ್ಷಿತವಾಗಿರುತ್ತವೆ. ಅಂಕಪಟ್ಟಿ ಕಳೆದರೆ ಅದರ ಇನ್ನೊಂದು ನಕಲು ಪ್ರತಿ ಪಡೆಯಲು ವಿಶ್ವವಿದ್ಯಾಲಯಕ್ಕೆ ಅಲೆಯಬೇಕಾಗಿಲ್ಲ. ವೆಬ್‌ಸೈಟ್‌ನಿಂದ ಸುಲಭವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ನಕಲಿಗೆ ಕಡಿವಾಣ

ನಕಲಿ ವಿವಿಗಳು ಹಾಗು ನಕಲಿ ಪ್ರಮಾಣಪತ್ರದ ದಂಡೆಗೆ ನ್ಯಾಡ್ ಮೂಲಕ ಕಡಿವಾಣ ಬೀಳಲಿದೆ. ಸುಳ್ಳು ಪ್ರಮಾಣ ಪತ್ರ ನೀಡಿ ಕೆಲಸ ಗಿಟ್ಟಿಸಿಕೊಳ್ಳಲು ಯತ್ನಿಸುವವರು ಈ ವ್ಯವಸ್ಥೆಯಿಂದಾಗಿ ಸಿಕ್ಕಿ ಬೀಳುತ್ತಾರೆ. ವಿದೇಶಗಳಲ್ಲಿರುವ ಉದ್ಯೋಗದಾತ ಕಂಪನಿಗಳೂ ಅಭ್ಯರ್ಥಿಯ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಕ್ಷಣಮಾತ್ರದಲ್ಲಿ ದೃಢೀಕರಿಸಿಕೊಳ್ಳಬಹುದು.

ಡಿಜಿಟಲ್ ಅಂಕಪಟ್ಟಿ ಐಡಿಯಾ ಕೊಟ್ಟಿದ್ದು ಕನ್ನಡಿಗ

ಈ ಡಿಜಿಟಲ್ ಯೋಜನೆಗೆ ಮೂಲ ಕಾರಣ ಕರ್ನಾಟಕದ ಹರಿಹರದ ಹರಿಹರ ತಾಲ್ಲೂಕಿನ ನಂದಿತಾವರೆಯ ಡಾ.ವಿ.ಟಿ.ಬಸವರಾಜ್‌.

ನಕಲಿ ಪದವಿ ಪ್ರಮಾಣಪತ್ರಗಳ ಹಾವಳಿ ತಡೆಯಲು ಡಿಜಿಟಲ್‌ ವ್ಯವಸ್ಥೆಯನ್ನು ಜಾರಿಗೆ ತಂದು, 'ಸ್ಮಾರ್ಟ್‌ ಕಾರ್ಡ್‌' ವಿತರಿಸುವಂತೆ ಬಸವರಾಜ್‌ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇ-ಮೇಲ್‌ ಮಾಡಿದ್ದರು. ಅದಕ್ಕುತ್ತರವಾಗಿ 'ಒಳ್ಳೆಯ ಪ್ರಸ್ತಾವ ನೀಡಿದ್ದೀರಿ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು' ಎಂದು 2015ರಲ್ಲಿ ಪ್ರಧಾನಿ ಕಚೇರಿಯಿಂದ ಬಸವರಾಜ್‌ ಅವರಿಗೆ ಪ್ರತಿಕ್ರಿಯೆ ಬಂದಿತ್ತು. ನಂತರ ಮಾನವಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್‌ ಅವರು ಈ ಕುರಿತು ರಾಷ್ಟ್ರೀಯ ಶಿಕ್ಷಣ ನೀತಿ ವಿಭಾಗಕ್ಕೆ ಸಲಹೆ ನೀಡುವಂತೆಯೂ ಇ-ಮೇಲ್‌ ಮಾಡಿದ್ದರು.

ಹೆಚ್ಚಿನ ಮಾಹಿತಿಗೆ ನ್ಯಾಡ್‌ನ ವೆಬ್‌ಸೈಟ್‌ www.nad.gov.in ನೋಡಬಹುದು.

English summary
National Academic Depository (NAD) is a 24X7 online store house of all academic awards viz.certificates, diplomas, degrees, mark-sheets etc. duly digitised and lodged by academic institutions / boards / eligibility assessment bodies.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia