ರಾಜ್ಯದ ಈ ಮಕ್ಕಳ ಸಾಧನೆಗೆ ಸಿಕ್ಕಿತು ರಾಷ್ಟ್ರಪತಿಗಳಿಂದ ಪುರಸ್ಕಾರ

Posted By:

ಮಕ್ಕಳ ದಿನಾಚರಣೆಯ ಪ್ರಯುಕ್ತ ಮಂಗಳವಾರ ರಾಜಧಾನಿ ನವದೆಹಲಿಯಲ್ಲಿ ನಡೆದ 'ರಾಷ್ಟ್ರೀಯ ಮಕ್ಕಳ ಪ್ರಶಸ್ತಿ' ಪ್ರದಾನ ಕಾರ್ಯಕ್ರಮದಲ್ಲಿ ಕರ್ನಾಟಕದ ಮೂವರು ಮಕ್ಕಳು ಹಾಗೂ ಎರಡು ಸಂಸ್ಥೆಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೆರಿಯರ್ ಇಂಡಿಯಾ 'ಚಿತ್ರಕಲಾ ಸ್ಪರ್ಧೆ-2017' ಬಹುಮಾನ ಪಡೆದ ಚಿತ್ರಗಳು

ಮಕ್ಕಳ ಅದ್ವಿತೀಯ ಸಾಧನೆಗಾಗಿ ಹಾಗೂ ಮಕ್ಕಳಿಗಾಗಿ ಕೆಲಸ ಮಾಡುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗೆ ಈ ಬಾರಿ ವಿವಿಧ ರಾಜ್ಯಗಳ 16 ಮಕ್ಕಳು, ಮೂವರು ವ್ಯಕ್ತಿಗಳು ಪಾತ್ರರಾಗಿದ್ದು, 5 ಸಂಸ್ಥೆಗಳೂ ಈ ಗೌರವ ಪಡೆದವು. ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ವಿತರಿಸಿದರು.

ಮಕ್ಕಳ ದಿನಾಚರಣೆ: ಇತಿಹಾಸ ಮತ್ತು ಆಚರಣೆ

ಮಕ್ಕಳಿಗೆ ರಾಷ್ಟೀಯ ಪ್ರಶಸ್ತಿ

ವಿನೂತನ ಆವಿಷ್ಕಾರ (ಇನೋವೇಶನ್‌)ಕ್ಕಾಗಿ ದಕ್ಷಿಣ ಕನ್ನಡದ ಮಾಸ್ಟರ್‌ ಸ್ವಸ್ತಿಕ್‌ ಪದ್ಮಾ, ಸಮಾಜ ಸೇವೆಗಾಗಿ ಬೆಂಗಳೂರಿನ ಕು.ನಿಖಿಯಾ ಶಂಶೀರ್‌ ರಜತ ಪದಕಗಳನ್ನು ಪಡೆದರು.  ಪ್ರಶಸ್ತಿಯು 10,000 ನಗದು, 3000 ರೂ.ಪುಸ್ತಕ ವೋಚರ್‌, ಪ್ರಮಾಣಪತ್ರ ಹಾಗೂ ರಜತ ಪದಕಗಳನ್ನು ಒಳಗೊಂಡಿದೆ.

ಪುತ್ತೂರಿನ ವಿದ್ಯಾರ್ಥಿ ಸ್ವಸ್ತಿಕ್‌ ಅವರು ಪಾಲಿಥಿನ್‌ ತ್ಯಾಜ್ಯ ಮತ್ತು ಕೈಗಾರಿಕಾ ತ್ಯಾಜ್ಯವನ್ನು ಬಳಸಿ ಕಾಂಕ್ರೀಟ್‌ಗೆ ಪರ್ಯಾಯವಾಗಿ ಬಳಸಬಹುದಾದ ಸಾಧನವನ್ನು ಆವಷ್ಕರಿಸಿದ್ದಾರೆ. ಈ ಸಾಧನವು ಸವೆತ ನಿರೋಧಕ ಗುಣ ಹೊಂದಿರುವುದರಿಂದ ಕಡಲ್ಕೊರೆತವನ್ನು ತಡೆಯುವುದಕ್ಕೆ ಬಳಸಬಹುದಾಗಿದ್ದು, ನಿರ್ಮಾಣ ಕ್ಷೇತ್ರದಲ್ಲೂ ಬಳಕೆಯಾಗಲಿದೆ.

ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ನಿಖಿಯಾ ಶಂಷೇರ್‌ ಸಾಕಷ್ಟು ಶ್ರಮಿಸಿದ್ದು, ಇದುವರೆಗೆ ಒಟ್ಟು 7,700 ಮಕ್ಕಳ ಕಲಿಕೆಗೆ ಉತ್ತೇಜನ ನೀಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಇ-ಕಾಮರ್ಸ್‌ ವೆಬ್‌ಸೈಟ್‌ ಆರಂಭಿಸಿ, ಸಾರ್ವಜನಿಕರಿಂದ ದೇಣಿಗೆ ಪಡೆಯುವ ಮೂಲಕ ಮಕ್ಕಳ ಕಲಿಕೆಗೆ ಸಹಕಾರಿಯಾಗುವ ಸಲಕರಣೆಗಳನ್ನು ವಿತರಿಸಿರುವ ಇವರ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.

ಮಕ್ಕಳ ಕಲ್ಯಾಣಕ್ಕಾಗಿ ವಿಶಿಷ್ಠ ಸೇವೆ ಸಲ್ಲಿಸಿದ ಕಾರಣಕ್ಕಾಗಿ ವೈಯಕ್ತಿಕ ವಿಭಾಗದಲ್ಲಿ ಬೆಳಗಾವಿಯ ಮಹೇಶ್‌ ಜಾಧವ್‌ ರಾಷ್ಟ್ರೀಯ ಮಕ್ಕಳ ಅವಾರ್ಡ್‌-2017ನ್ನು ಮುಡಿಗೇರಿಸಿಕೊಂಡರು. ಪ್ರಶಸ್ತಿ 1 ಲಕ್ಷ ರೂ. ಮೊತ್ತ ಹಾಗೂ ಸನ್ಮಾನ ಪತ್ರವನ್ನು ಒಳಗೊಂಡಿದೆ.

ಮಹೇಶ ಜಾಧವ್‌ ಅವರು, 2010ರಲ್ಲಿ 'ಮಹೇಶ ಪ್ರತಿಷ್ಠಾನ' ಸ್ಥಾಪಿಸುವ ಮೂಲಕ ಎಚ್ಐವಿ ಏಡ್ಸ್‌ ಪೀಡಿತರು ಹಾಗೂ ಬಾಧಿತ ಮಕ್ಕಳ ಪಾಲನೆ, ಸಂರಕ್ಷಣೆಗೆ ಶ್ರಮಿಸಿದ್ದಾರೆ. ಇವರ ಪ್ರತಿಷ್ಠಾನದಿಂದ ಅಂದಾಜು 4,000 ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಅನುಕೂಲವಾಗಿದೆ.

ಬೆಂಗಳೂರಿನ ಅಕ್ಷಯಪಾತ್ರ ಸಂಸ್ಥೆ ಹಾಗೂ ಚಾಮರಾಜನಗರದ ಬುಡಕಟ್ಟು ಮತ್ತು ಗ್ರಾಮೀಣಾಭಿವೃದ್ಧಿ ಸಮಾಜ ಸಂಸ್ಥೆಗಳು ಮಕ್ಕಳ ಕಲ್ಯಾಣ ಹಾಗೂ ಬೆಳವಣಿಗೆಗೆ ನೀಡಿದ ಕೊಡುಗೆಗೆ ತಲಾ 3 ಲಕ್ಷ ರೂ. ಮೊತ್ತದ ಪ್ರಶಸ್ತಿ ಪಡೆದಿವೆ.

English summary
President Ram Nath Kovind on Tuesday gave away the National Child Awards 2017 to 16 children, including one gold medal, on the occasion of Children’s Day.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia