ಕರ್ನಾಟದಲ್ಲಿ ಮೂರು ವರ್ಷ ಮೇಲ್ಪಟ್ಟ ಮಕ್ಕಳ 'ಆರಂಭಿಕ ಬಾಲ್ಯಾವಸ್ಥೆ ಆರೈಕೆ ಮತ್ತು ಶಿಕ್ಷಣ'ದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ನವೆಂಬರ್‌ನೊಳಗೆ ಜಾರಿಗೆ ತರಲು ಕರ್ನಾಟಕ ಸಿದ್ಧತೆ ನಡೆಸುತ್ತಿದೆ. ಮೊದಲ ಹಂತದಲ್ಲಿ 20,000 ಅಂಗನವಾಡಿಗಳು ಮತ್ತು ಶಾಲೆಗಳಲ್ಲಿ NEP ಅನ್ನು ಜಾರಿಗೆ ತರಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ ಸಿ ನಾಗೇಶ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವಾಲಯದಿಂದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು (ಎನ್‌ಸಿಎಫ್) ಸೆಪ್ಟೆಂಬರ್‌ನಲ್ಲಿ ನಿರೀಕ್ಷಿಸಲಾಗಿದೆ. ನಂತರ ಅಕ್ಟೋಬರ್‌ನಲ್ಲಿ ರಾಜ್ಯ ಪಠ್ಯಕ್ರಮದ ಚೌಕಟ್ಟನ್ನು ಅಂತಿಮಗೊಳಿಸಲಾಗುವುದು ಮತ್ತು ತಜ್ಞರ ತಂಡಗಳು ಈಗಾಗಲೇ ಈ ಕುರಿತು ಕೆಲಸ ಮಾಡುತ್ತಿವೆ. ನವೆಂಬರ್ ವೇಳೆಗೆ ಸುಮಾರು 20,000 ಅಂಗನವಾಡಿಗಳು ಮತ್ತು ಶಾಲೆಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ಯೋಜಿಸಲಾಗಿದೆ ಎಂದು ಬಿ.ಸಿ ನಾಗೇಶ್ ಹೇಳಿದ್ದಾರೆ.

ರಾಜ್ಯ ಪಠ್ಯಕ್ರಮದ ಚೌಕಟ್ಟನ್ನು ಅಂತಿಮಗೊಳಿಸಿದ ನಂತರ, ಅದರ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು. NEP ಅನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (DWCD) ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಿದೆ.
ಶಿಶು ಅಭಿವೃದ್ಧಿ ಸಚಿವ ಆಚಾರ್ ಮಾತನಾಡಿ, ರಾಜ್ಯದಲ್ಲಿ 66,361 ಅಂಗನವಾಡಿ ಕೇಂದ್ರಗಳಿವೆ. ಅಂಗನವಾಡಿ ಕಾರ್ಯಕರ್ತೆಯರಲ್ಲಿ 732 ಸ್ನಾತಕೋತ್ತರ ಪದವೀಧರರು, 6,017 ಪದವೀಧರರು, 14,303 ಪದವಿ ಪೂರ್ವ ಶಿಕ್ಷಣ ಮತ್ತು 40,786 ಎಸ್‌ಎಸ್‌ಎಲ್‌ಸಿ (10 ನೇ ತರಗತಿ) ಪೂರ್ಣಗೊಳಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕೆಲವು ನಿರ್ಬಂಧಗಳಿರಬಹುದು, ಆದರೆ ಅವರಿಗೆ ತರಬೇತಿ ನೀಡಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.
ಮೊದಲ ಹಂತದಲ್ಲಿ ಪಿಜಿ, ಪದವಿ ಅಥವಾ ಪಿಯುಸಿ ವಿದ್ಯಾರ್ಹತೆ ಹೊಂದಿರುವ 20 ಸಾವಿರ ಅಂಗನವಾಡಿಗಳನ್ನು ಆಯ್ಕೆ ಮಾಡಲಾಗಿದೆ. ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಟಾಟಾ ಫೌಂಡೇಶನ್‌ನಿಂದ ಸುಮಾರು 14,000 ಅಂಗನವಾಡಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ವಿದ್ಯಾರ್ಹತೆ ಆಧರಿಸಿ ವಿವಿಧ ರೀತಿಯ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.