ಅತಿಥಿ ಉಪನ್ಯಾಸಕರ ನೇಮಕಾತಿ: ಆತಂಕದಲ್ಲಿ ಹಳೆ ಅತಿಥಿ ಉಪನ್ಯಾಸಕರು

Posted By:

2017 -18 ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರುಗಳನ್ನು ಆಯ್ಕೆ ಮಾಡಿಕೊಳ್ಳುವ ವಿಚಾರವಾಗಿ ಕಾಲೇಜು ಶಿಕ್ಷಣ ಇಲಾಖೆ ನೂತನ ಸುತ್ತೋಲೆ ಹೊರಡಿಸಿದೆ.

ಈ ಶೈಕ್ಷಣಿಕ ವರ್ಷದಲ್ಲಿ ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿ, ಉಳಿದ ಹೆಚ್ಚುವರಿ ಬೋಧನ ಕಾರ್ಯಭಾರವನ್ನು ನಿರ್ವಹಿಸಲು ಬೇಕಾದ ಅತಿಥಿ ಉಪನ್ಯಾಸಕರ ನೇಮಕಾತಿಗೆ ತೆಗೆದುಕೊಳ್ಳಬೇಕಾದ ಸೂಚನೆಗಳನ್ನು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯನ್ನು ದಿನಾಂಕ 03-08-2017 ರಿಂದ ನಡೆಯಲಿದ್ದು, ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ ಮಾಡಿಕೊಳ್ಳಲಾಗುವುದು.

ಅತಿಥಿ ಉಪನ್ಯಾಸಕರ ನೇಮಕಾತಿ

ಖಾಯಂ ಉಪನ್ಯಾಸಕರ ನೇಮಕ ಮತ್ತು ಆಯ್ಕೆಯ ನೂತನ ಮಾನದಂಡದಿಂದಾಗಿ ಕಾಲೇಜು ಇಲಾಖೆಯಲ್ಲಿ 10- 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಮೂರು ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಈ ವರ್ಷದಿಂದ ಹೊಸದಾಗಿ ನೇಮಕವಾದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಿದ ನಂತರ ಉಳಿಯುವ ಖಾಲಿ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು ಎಂದೂ ನಿರ್ದೇಶಿಸಲಾಗಿದೆ.

2017-18ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿ ಅನೇಕ ಕಡೆ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿ ಕೊಳ್ಳಲಾಗಿತ್ತು. ಆದರೆ, ನೂತನ ಸುತ್ತೋಲೆಯಲ್ಲಿ, 'ಈಗಾಗಲೇ ನೇಮಕ ಮಾಡಿಕೊಂಡಿರುವ ಉಪನ್ಯಾಸಕರ ಆಯ್ಕೆ ರದ್ದುಪಡಿಸಿ ಹೊಸದಾಗಿ ಪ್ರಕ್ರಿಯೆ ಪ್ರಾರಂಭಿ ಸುವಂತೆ' ಸೂಚಿಸಲಾಗಿದೆ. ಇದರಿಂದಾಗಿ ಅನೇಕ ವರ್ಷಗಳಿಂದ ಇದನ್ನೇ ನಂಬಿಕೊಂಡಿರುವವರ ಜೀವನ ಅತಂತ್ರಕ್ಕೆ ಸಿಲುಕಿದಂತಾಗಿದೆ.

ಮೆರಿಟ್ ಮಾನದಂಡ

ಅತಿಥಿ ಉಪನ್ಯಾಸಕರ ನೇಮಕಾತಿ

ಈ ವರ್ಷದ ಅತಿಥಿ ಉಪನ್ಯಾಸಕರ ನೇಮಕಕ್ಕೆ ಜೂನ್ 23ರಂದು ಸುತ್ತೋಲೆ ಹೊರಡಿಸಲಾಗಿತ್ತು. ಸ್ನಾತಕೋತ್ತರ ಪದವಿಗೆ 40 ಅಂಕ, ಪಿಎಚ್‌.ಡಿ/ ಎನ್‌ಇಟಿ/ ಎಸ್‌ಎಲ್‌ಇಟಿಗೆ 30ಅಂಕ ಮತ್ತು ಹಿಂದಿನ ಹತ್ತು ವರ್ಷಗಳ ಸೇವಾ ಅನುಭವಕ್ಕೆ 30 ಅಂಕ (ವರ್ಷಕ್ಕೆ 3 ಅಂಕ) ಎಂದು ನಿಗದಿ ಮಾಡಲಾಗಿತ್ತು. ಆದರೆ ಕೆಲವು ದಿನಗಳ ಬಳಿಕ ಮತ್ತೊಂದು ಸುತ್ತೋಲೆ ಹೊರಡಿಸಿ ಎಂ.ಫಿಲ್‌ಗೆ 10 ಅಂಕ ನಿಗದಿ ಮಾಡಲಾಯಿತು. ಆದರೆ ಈಗ ಎಂಫಿಲ್ ಗೆ ಕೇವಲ 08 ಅಂಕ ನಿಗದಿ ಪಡಿಸಲಾಗಿದೆ. ಅಲ್ಲದೆ ಗರಿಷ್ಠ ಐದು ವರ್ಷಗಳ ಸೇವಾ ಅನುಭವವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸೂಚಿಸಲಾಗಿದೆ.

ಜುಲೈ 18ರಂದು ಹೊರಡಿಸಿದ ಸುತ್ತೋಲೆಯಲ್ಲಿ 'ಅತಿಥಿ ಉಪನ್ಯಾಸಕರ ನೇಮಕಕ್ಕೆ ಮೂರು ದಿನ ತಡೆ ನೀಡಲಾಗಿದೆ' ಎಂದು ಹೇಳಲಾಗಿತ್ತು. ಆ ವೇಳೆಗಾಗಲೇ ಅರ್ಹತೆ ಆಧಾರದ ಮೇಲೆ ಅನೇಕ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕ ಪೂರ್ಣಗೊಂಡಿತ್ತು.

'2013ಕ್ಕಿಂತ ಹಿಂದಿನ ಅತಿಥಿ ಉಪನ್ಯಾಸಕರನ್ನೇ ಮುಂದುವರಿಸಿಕೊಂಡು ಬರಲಾಗುತ್ತಿದೆ. ಆದರೆ, ಈ ಬಾರಿ ನಿರ್ಧಾರ ಬದಲಿಸಿರುವುದರಿಂದ ಸ್ನಾತಕೋತ್ತರ ಪದವಿ ಪಡೆದು 15 ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ಕಾರ್ಯನಿರ್ವಹಿಸುತ್ತಿರುವ 3,860 ಅಭ್ಯರ್ಥಿಗಳು ಬೀದಿ ಪಾಲಾಗಿದ್ದಾರೆ' ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಶ್ರೀನಿವಾಸಚಾರಿ ಹೇಳಿದ್ದಾರೆ.

English summary
Department of collegiate education passed new resolutions to take guest lecturers. More than 3 thousand guest lecturers facing the job cut this year.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia