ಹಿರಿಯ ಪ್ರಾಥಮಿಕ ಶಾಲೆಗಳು 3 ಕಿ.ಮೀ ಒಳಗಿರಬೇಕು: ಸುಪ್ರೀಂ ಕೋರ್ಟ್

Posted By:

5 ರಿಂದ 8 ನೇ ತರಗತಿ ವರೆಗಿನ ಹಿರಿಯ ಪ್ರಾಥಮಿಕ ಶಾಲೆಗಳು ಮೂರು ಕಿ.ಮೀ ವ್ಯಾಪ್ತಿಯೊಳಗೆ ಮಕ್ಕಳಿಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಯಾವ ಮಕ್ಕಳೂ ಮೂರು ಕಿ.ಮೀವರೆಗೆ ನಡೆದುಕೊಂಡು ಶಾಲೆಗೆ ಹೋಗುವಂತೆ ಆಗಬಾರದು. 3 ಕಿ.ಮೀ ಒಳಗೆಯೇ ಹಿರಿಯ ಪ್ರಾಥಮಿಕ ಶಾಲೆ ಇರುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ..

ಕೇರಳದ ಪರಪ್ಪನಂಗಡಿ ಪಟ್ಟಣದಲ್ಲಿನ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿರುವುದನ್ನು ಸಮೀಪದ ಶಾಲೆಯೊಂದು ವಿರೋಧಿಸಿದ ಪ್ರಕರಣದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಮದನ್‌. ಬಿ. ಲೋಕೂರ್‌ ಮತ್ತು ದೀಪಕ್‌ ಗುಪ್ತಾ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಹಿರಿಯ ಪ್ರಾಥಮಿಕ ಶಾಲೆಗಳು 3 ಕಿ.ಮೀ ಒಳಗಿರಬೇಕು

ಪರಪ್ಪನಂಗಡಿ ಪಟ್ಟಣದಲ್ಲಿ ನಾಲ್ಕನೇ ತರಗತಿ ತೇರ್ಗಡೆ ಹೊಂದಿದ ಮಕ್ಕಳು ಮುಂದಿನ ತರಗತಿಗೆ ಹಾಜರಾಗಲು ಮೂರರಿಂದ ನಾಲ್ಕು ಕಿ.ಮೀ ದೂರದವರೆಗೆ ಹೋಗಬೇಕಾಗಿದೆ ಎಂಬುದನ್ನು ಮನಗಂಡ ನ್ಯಾಯಪೀಠ, '10ರಿಂದ 14 ವರ್ಷ ವಯಸ್ಸಿನ ಮಕ್ಕಳು ಶಾಲೆಗೆ ಹೋಗುವುದಕ್ಕಾಗಿ ಮೂರು ಕಿ.ಮೀ ನಡೆಯಬೇಕು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ.

ಸಂವಿಧಾನದ ವಿಧಿ 21ಎ ಪ್ರಕಾರ, 14ನೇ ವರ್ಷದವರೆಗೆ ಶಿಕ್ಷಣ ಪಡೆಯುವುದು ಕಡ್ಡಾಯ ಹಕ್ಕಾಗಿದೆ. ಈ ಹಕ್ಕು ಅರ್ಥಪೂರ್ಣವಾಗಬೇಕಾದರೆ ಯಾವ ಮಕ್ಕಳೂ ಮೂರು ಕಿ.ಮೀವರೆಗೆ ನಡೆದುಕೊಂಡು ಶಾಲೆಗೆ ಹೋಗುವಂತೆ ಆಗಬಾರದು. ಆ ದೂರದ ಒಳಗೆಯೇ ಹಿರಿಯ ಪ್ರಾಥಮಿಕ ಶಾಲೆ ಇರುವಂತೆ ನೋಡಿಕೊಳ್ಳಬೇಕು' ಎಂಬ ಹೇಳಿಕೆ ನೀಡಿದೆ.

ಪ್ರಕರಣದ ವಿವರ

ಪರಪ್ಪನಂಗಡಿ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿಸಿ ಕೇರಳ ಸರ್ಕಾರ 2015ರ ಜೂನ್‌ನಲ್ಲಿ ಆದೇಶ ಹೊರಡಿಸಿತ್ತು. ಆದರೆ, ರಾಜ್ಯ ಸರ್ಕಾರದ ಆದೇಶವನ್ನು ಆ ಪ್ರದೇಶದ ಮತ್ತೊಂದು ಶಾಲೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಆದೇಶ ಹೊರಡಿಸುವುದಕ್ಕೂ ಮೊದಲು ಸರ್ಕಾರ 1959ರ ಕೇರಳ ಶಿಕ್ಷಣ ನಿಯಮಗಳನ್ನು ಪಾಲಿಸಿಲ್ಲ. ಶಾಲೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಆಕ್ಷೇಪಣೆಗಳನ್ನು ಆಹ್ವಾನಿಸಿಲ್ಲ ಎಂದು ಆ ಶಾಲೆ ವಾದಿಸಿತ್ತು. ಹೈಕೋರ್ಟ್‌ನ ಏಕ ಸದಸ್ಯ ನ್ಯಾಯಪೀಠ ಈ ಅರ್ಜಿಯನ್ನು ಮಾನ್ಯ ಮಾಡಿತ್ತಲ್ಲದೇ, ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು. ಆದರೆ, ಆ ವೇಳೆಗಾಗಲೇ ಶಾಲೆಗೆ ಸೇರಿದ್ದ ಮಕ್ಕಳಿಗೆ ಆ ವರ್ಷದ ಮಟ್ಟಿಗೆ ಅಲ್ಲೇ ಶಿಕ್ಷಣ ಪಡೆಯಲು ಅವಕಾಶ ನೀಡಿತ್ತು.

ಈ ಆದೇಶವನ್ನು ಕಿರಿಯ ಪ್ರಾಥಮಿಕ ಶಾಲೆಯು ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತ್ತು. ಆ ಪೀಠ ಕೂಡ ರಾಜ್ಯದ ಆದೇಶವನ್ನು ವಜಾ ಮಾಡಿತ್ತು. ನಂತರ ಶಾಲೆಯು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.‌

ಶಾಲೆಯ ಪರ ವಾದ ಮಂಡಿಸಿದ ವಕೀಲರು, ಶಾಲೆಯನ್ನು ಮೇಲ್ದರ್ಜೆಗೇರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಪ್ರಜ್ಞಾಪೂರ್ವಕ ತೀರ್ಮಾನ ಕೈಗೊಂಡಿತ್ತು. ಅಲ್ಲದೇ, ಕಾಯ್ದೆಯಲ್ಲಿನ ಕೆಲವು ನಿಯಮಗಳಿಗೆ ವಿನಾಯಿತಿಯೂ ನೀಡಿತ್ತು ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಶಾಲೆಯ ವಾದವನ್ನು ಮಾನ್ಯ ಮಾಡಿದ ನ್ಯಾಯಪೀಠ, ಹೈಕೋರ್ಟ್‌ ಆದೇಶಗಳನ್ನು ವಜಾಮಾಡಿ ಶಾಲೆಗಳನ್ನು ಸಮೀಪವೇ ಇರುವಂತೆ ಹೇಳಿದೆ.

English summary
The right of education up to the age of 14 years is now a fundamental right under article 21A of the Constitution and if this right is to be meaningful, then efforts must be made to open upper primary schools in such a manner that no child has to walk 3 kilometres or more only to attend school.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia