
ರಾಜ್ಯದೆಲ್ಲೆಡೆ ಕೊರೊನಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಇನ್ನೂ ತೆರೆಯಲಾಗಿಲ್ಲ, ಈ ಕುರಿತು ಸೋಮವಾರ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುವುದಾಗಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದರು. ಇಂದು ಮಹತ್ತರ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಸದ್ಯಕ್ಕೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಶಾಲೆಗಳು ಆರಂಭವಾಗದ ಕಾರಣದಿಂದಾಗಿ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಬಾಲ ಕಾರ್ಮಿಕ ಪದ್ಥತಿಗೆ ಒಳಗಾಗುತ್ತಿದ್ದಾರೆ ಹಾಗೆಯೇ ಅವರು ಓದಿದೆಲ್ಲವನ್ನೂ ಮರೆಯುತ್ತಿದ್ದಾರೆ ಹಾಗಾಗಿ ಶಾಲೆ ಆರಂಭಿಸಿ ಎಂದು ಎಲ್ಲೆಡೆ ಕೇಳಿಬರುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಡಾ. ದೇವಿಶೆಟ್ಟಿ ಸಮಿತಿ ಕೂಡ ಈ ಕುರಿತು ವರದಿಯನ್ನು ನೀಡಿದೆ. ರಾಜ್ಯದಲ್ಲಿ ಮತ್ತೆ 'ವಿದ್ಯಾಗಮ 2' ಯೋಜನೆ ಜಾರಿ ಮಾಡುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಿದರು.
ಶಾಲೆ ಆರಂಭದ ಕುರಿತು ಇನ್ನೆರಡು ದಿನದಲ್ಲಿ ವಿಸ್ತೃತ ಚರ್ಚೆ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಟಾಸ್ಕ್ ಫೋರ್ಸ್ ರಚಿಸುತ್ತೇವೆ ಅದರಲ್ಲಿ ವಿಷಯ ಪರಿಣಿತರು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು. ಮಕ್ಕಳ ತಜ್ಞರು ಇರಲಿದ್ದಾರೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಜುಲೈ 1ರಿಂದು ಚಂದನವಾಹಿನಿಯಲ್ಲಿ ಪಾಠಗಳನ್ನು ಆರಂಭ ಮಾಡುತ್ತಿದ್ದೇವೆ. ಕನ್ನಡ, ಆಂಗ್ಲ ಮಾಧ್ಯಮದಲ್ಲಿ ಪಾಠಗಳು ನಡೆಯಲಿವೆ. ದೀಕ್ಷಾ ಪೋರ್ಟಲ್‌ನಲ್ಲಿ ಎಲ್ಲಾ ಪಾಠಗಳ ವಿಡಿಯೋಗಳು ಲಭ್ಯವಿದೆ. ಚಿಕ್ಕ ಮಕ್ಕಳಿಗಾಗಿ ಮಕ್ಕಳ ವಾಹಿನಿ ಆರಂಭಿಸಿದ್ದೇವೆ. ಈ ಬಗ್ಗೆ ಯೂಟ್ಯೂಬ್‌ನಲ್ಲಿ ವಿಡಿಯೋಗಳು ಲಭ್ಯವಿವೆ ಎಂದು ಮಾಹಿತಿ ನೀಡಿದ್ದಾರೆ.
ಮೊದಲ ಒಂದು ತಿಂಗಳು 'ಸೇತು ಬಂಧ' ಕೋರ್ಸ್ ಆರಂಭವಾಗಲಿದೆ. ಕಳೆದ ವರ್ಷ ವಿದ್ಯಾರ್ಥಿಗಳು ಪಾಠಗಳನ್ನು ಸರಿಯಾಗಿ ಕಲಿತಿಲ್ಲ ಹೀಗಾಗಿ ಬ್ರಿಡ್ಜ್ ಕೋರ್ಸ್ ಆರಂಭ ಮಾಡುತ್ತಿದ್ದೇವೆ. ವಾರ್ಷಿಕ ಪರೀಕ್ಷೆ ಬಿಟ್ಟು, ನಿರಂತರ ಮೌಲ್ಯಾಂಕ ಬಗ್ಗೆ ಚರ್ಚೆ ನಡೆದಿದೆ. CBSE ಮಾದರಿಯಲ್ಲಿ ನಿರಂತರ ಮೌಲ್ಯಾಂಕ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.