
ಈ ವರ್ಷ ಇಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕೆ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕವನ್ನು ಹೆಚ್ಚಳ ಮಾಡದಂತೆ ನಿರ್ದೇಶನ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಶೇ.15 ರಿಂದ 20ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದವು. ಆದರೆ ಈ ವರ್ಷ ಕೋವಿಡ್ ಸಾಂಕ್ರಾಮಿಕದಿಂದಾಗಿ ಜನರ ಪರಿಸ್ಥಿತಿ ಹದಗೆಟ್ಟಿದೆ. ಅನೇಕ ಸಾವು ನೋವುಗಳು ಸಂಭವಿಸಿವೆ, ಇಂತಹ ಸಂದರ್ಭದಲ್ಲಿ ಶುಲ್ಕ ಹೆಚ್ಚಳ ಮಾಡುವ ನಿರ್ಧಾರ ಸರಿಯಲ್ಲ. ಹಾಗಾಗಿ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರವೇಶ ಒದಗಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವ್ಯವಸ್ಥಿತವಾದ ಕೌನ್ಸೆಲಿಂಗ್ ನಡೆಸಲಾಗುವುದು. ಆದರೆ ಇದಕ್ಕೂ ಮುನ್ನ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾದ ನೀಟ್ ಪರೀಕ್ಷೆಯ ಕೌನ್ಸೆಲಿಂಗ್ ಗಮನಿಸಿ ಸಿಇಟಿ ಕೌನ್ಸೆಲಿಂಗ್ ಏರ್ಪಡಿಸುತ್ತೇವೆ. ಕಾರಣ ಸಿಇಟಿ ಕೌನ್ಸೆಲಿಂಗ್ ನಲ್ಲಿ ಎಂಜಿನಿಯರಿಂಗ್ ಸೀಟು ಪಡೆದ ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ಸಿಕ್ಕರೆ ಇಂಜಿನಿಯರಿಂಗ್ ರದ್ದು ಮಾಡಿ ಮೆಡಿಕಲ್ ಗೆ ತೆರಳುತ್ತಾರೆ. ಈ ಗೊಂದಲ ತಪ್ಪಿಸಲು ಅಗತ್ಯ ಮುಂಜಾಗ್ರತೆ ಕೈಗೊಳ್ಳಲಾಗುವುದು ಎಂದು ಹೇಳಿದರು.