ಮಕ್ಕಳ ಹೆಗಲ ಮೇಲಿದ್ದ ಭಾರ ಇಳಿಸಿದ ಶಿಕ್ಷಣ ಇಲಾಖೆ

Posted By:

ಇನ್ನು ಮುಂದೆ ಶಾಲಾ ಮಕ್ಕಳು ಹೆಚ್ಚು ಭಾರದ ಪುಸ್ತಕಗಳನ್ನು ಹೊತ್ತು ಶಾಲೆಗೆ ಹೋಗುವ ಸ್ಥಿತಿ ಇರುವುದಿಲ್ಲ. ಮಕ್ಕಳ ಅನುಕೂಲಕ್ಕಾಗಿಯೇ ಶಿಕ್ಷಣ ಇಲಾಖೆ ಹೊಸದೊಂದು ತೀರ್ಮಾನ ಕೈಗೊಂಡಿದೆ.

ಮಕ್ಕಳು ನಿತ್ಯ ಭಾರದ ಬ್ಯಾಗ್ ಹೊತ್ತು ಶಾಲೆಗೆ ಹೋಗುವುದಕ್ಕೆ ಪೋಷಕರು ಮತ್ತು ಸಾರ್ವಜನಿಕರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಅಲ್ಲದೇ ಅಷ್ಟೂ ಪುಸ್ತಕಗಳನ್ನು ಹೊತ್ತು ಸಾಗುವುದು ಮಕ್ಕಳಿಗೂ ಕಷ್ಟವಾಗಿತ್ತು. ಈಗ ಈ ಸಮಸ್ಯೆ ಬಗೆಹರಿಸಲು ಹೊಸದೊಂದು ಯೋಜನೆಗೆ ಶಿಕ್ಷಣ ಇಲಾಖೆ ಮುಂದಾಗಿದೆ.

1 ರಿಂದ 10 ನೇ ತರಗತಿ ಪಠ್ಯ ಪುಸ್ತಕಗಳನ್ನು ಎರಡು ಕಂತುಗಳಲ್ಲಿ ಮುದ್ರಿಸಿ ಮಕ್ಕಳ ಹೊರೆ ಕಡಿಮೆ ಮಾಡಲು ಇಲಾಖೆಯು ತೀರ್ಮಾನಿಸಿದೆ. ಮೊದಲ ಕಂತಿನ ಪಠ್ಯ ಪುಸ್ತಕಗಳ ಮುದ್ರಣ ಪೂರ್ಣಗೊಂಡಿದ್ದು ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ತಿಳಿಸಿದ್ದಾರೆ.

ಶಿಕ್ಷಣ ಇಲಾಖೆ ಮಾಸ್ಟರ್ ಪ್ಲಾನ್

ಸಾಮಾನ್ಯವಾಗಿ ಪಠ್ಯ ಪುಸ್ತಕಗಳಲ್ಲಿ 10, 12, 14 ಪಾಠಗಳು ಇರುತ್ತವೆ. ಅವುಗಳನ್ನು ಎರಡು ಭಾಗವಾಗಿ ಮುದ್ರಿಸಲಾಗುವುದು. ಮೊದಲನೆ ಭಾಗದ ಪುಸ್ತಕ ದಸರಾವರೆಗೂ, ಎರಡನೇ ಭಾಗದ ಪುಸ್ತಕ ದಸರಾ ಬಳಿಕ ನೀಡಲಾಗುವುದು. ದಸರಾವರೆಗಿನ ಪಠ್ಯಗಳನ್ನು ನಿಗದಿ ಅವಧಿಯೊಳಗೇ ಪೂರ್ಣಗೊಳಿಸಬೇಕಾಗುತ್ತದೆ. ಮಕ್ಕಳು ಪುಸ್ತಕಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬಹುದು ಮತ್ತು ಪುಸ್ತಕಗಳು ಹಾಳಾಗದಂತೆ,  ಕಿತ್ತು ಹೋಗದಂತೆ ಇಟ್ಟುಕೊಳ್ಳಬಹುದು ಎಂದು ಹೇಳಿದ್ದಾರೆ.

ಈ ಯೋಜನೆಯನ್ನು ಪ್ರಸಕ್ತ ವರ್ಷದಿಂದಲೇ ಜಾರಿಗೊಳಿಸಲಿದ್ದು, 8ನೇ ತರಗತಿಯವರೆಗೂ ಜೂನ್ ನಲ್ಲೇ ಮೊದಲ ಅರ್ಧ ಭಾಗದ ವಿಷಯದ ಪುಸ್ತಕಗಳನ್ನು ವಿತರಿಸಲಾಗುವುದು. ಉಳಿದ ವಿಷಯದ ಪುಸ್ತಕಗಳನ್ನು ಸೆಪ್ಟೆಂಬರ್- ಅಕ್ಟೋಬರ್ ನಲ್ಲಿ ವಿತರಿಸಲು ತೀರ್ಮಾನಿಸಲಾಗಿದೆ. ಒಂದು ವರ್ಷದ ಮೊದಲಾರ್ಧದ ಪಠ್ಯದ ಪುಸ್ತಕ ಹಾಗೂ ದ್ವಿತಿಯಾರ್ಧದ ಪುಸ್ತಕಗಳನ್ನಾಗಿ ವಿಂಗಡಿಸಲಾಗಿದೆ.

ಹೊರೆ ಇಳಿಕೆ

ಎರಡು ಸೆಮಿಸ್ಟರ್‌ಗೆ ಪ್ರತ್ಯೇಕ ಪಠ್ಯ ಪುಸ್ತಕವನ್ನು ಮುದ್ರಿಸಿ ಕೊಡುವುದರಿಂದ ಶಾಲೆಗೆ ಹೋಗುವ ಮಕ್ಕಳ ಚೀಲದ ತೂಕ 1 ರಿಂದ 1.5 ಕೆ.ಜಿಯಷ್ಟು ಕಡಿಮೆ ಆಗಲಿದೆ. ಗಣಿತ, ಸಮಾಜ ಮತ್ತು ವಿಜ್ಞಾನದ ಪುಸ್ತಕಗಳ ಪುಟ ಸಂಖ್ಯೆ 200 ರಿಂದ 350 ಪುಟಗಳಷ್ಟು ಇರುತ್ತವೆ. ಅದು ಅರ್ಧದಷ್ಟು ಕಡಿಮೆ ಆಗುತ್ತದೆ.

ಈ ಪುಸ್ತಕಗಳಲ್ಲಿ  ಬದಲಾವಣೆ ಇಲ್ಲ

9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಅಳವಡಿಕೆಗೊಂಡಿರುವ ಸಿಬಿಎಸ್ ಸಿ ಪಠ್ಯದಲ್ಲಿ ಪುಸ್ತಕಗಳ ವಿಭಜನೆಯನ್ನು ಮಾಡಲಾಗುತ್ತಿಲ್ಲ.

ಕಾಗದದ ಕೊರತೆ

ಕಾಗದದ ಕೊರತೆಯ ನಡುವೆಯು ಇಂತಹ ತೀರ್ಮಾನ ತೆಗೆದುಕೊಂಡಿರುವುದು ಅಚ್ಚರಿಯುಂಟು ಮಾಡುತ್ತದೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು 'ಪಠ್ಯ ಪುಸ್ತಕಗಳ ಮುದ್ರಣ ಕಾಗದದ ಕೊರತೆ ಇರುವುದು ನಿಜ. 19 ಸಾವಿರ ಮೆಟ್ರಿಕ್‌ ಟನ್‌ ಕಾಗದವು ಪಠ್ಯ ಪುಸ್ತಕಗಳ ಮುದ್ರಣಕ್ಕೆ ಅಗತ್ಯವಿದ್ದು, ನಮ್ಮಲ್ಲಿ 11 ಸಾವಿರ ಮೆಟ್ರಿಕ್‌ ಟನ್‌ ಕಾಗದ ಲಭ್ಯತೆ ಇದೆ. ಕಾಗದದ ಬೆಲೆಯೂ ಇದ್ದಕ್ಕಿದ್ದಂತೆ ಏರಿಕೆ ಆಗಿದೆ' ಎಂದು ಹೇಳಿದ್ದಾರೆ.

ಮುದ್ರಣದ ಕೊರತೆ

ಸದ್ಯ ಪಠ್ಯ ಪುಸ್ತಕಗಳ ಕಾಗದಕ್ಕೆ ಒಂದು ಟನ್‌ಗೆ ₹50,000 ಇದ್ದದ್ದು ₹67,000ಕ್ಕೆ ಏರಿಕೆ ಆಗಿದೆ. ಕಾಗದ ತಯಾರಿಸಲು ಅಗತ್ಯವಿರುವ ಪಲ್ಪ್‌ ಕೊರತೆ ಇದೆ.

English summary
department of education has decided to reduce the school bags weight by printing the books twice in a year

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia