ಶಾಲೆ ಇದೆ, ಸೌಕರ್ಯಗಳಿವೆ ಉಪಯೋಗಿಸಲು ವಿದ್ಯಾರ್ಥಿಗಳೇ ಇಲ್ಲ!

Posted By:

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ನೀಡಿರುವ ಸೌಲಭ್ಯಗಳ ಕುರಿತು ನಡೆಸಿದ ಅಧ್ಯಯನದಲ್ಲಿ ಆಶ್ಚರ್ಯಕರ ಸಂಗತಿ ಬೆಳಕಿಗೆ ಬಂದಿದೆ.

ಸರ್ಕಾರಿ ಶಾಲೆಗಳನ್ನು ಮೂಲ ಸೌಕರ್ಯಗಳಿಲ್ಲ ಎಂದು ದೂರುವವರೇ ಹೆಚ್ಚು ಆದರೆ, ರಾಜ್ಯದ ಹಲವು ಸರ್ಕಾರಿ ಶಾಲೆಗಳ ಪರಿಸ್ಥಿತಿಯೆ ಬೇರೆಯಾಗಿದೆ. ಎಲ್ಲಾ ಸೌಲಭ್ಯಗಳಿದ್ದರು ಬಳಸಿಕೊಳ್ಳಲು ವಿದ್ಯಾರ್ಥಿಗಳೇ ಇಲ್ಲದಂತಾಗಿದೆ. ಶೇ 92ರಷ್ಟು ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತದೆ. ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಸಹ ಇದೆ. ಅಗತ್ಯ ಸಂಖ್ಯೆಯ ಶಿಕ್ಷಕರೂ ಇದ್ದಾರೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು ಇದೆ.

ಆರ್‌ಟಿಇ ಕಾರ್ಯಪಡೆ ಗದಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಮಾಪಕಗಳು ಜಾರಿಯಾಗಿರುವ ಕುರಿತು ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬಹಿರಂಗಗೊಂಡಿದೆ.

ಉಪಯೋಗಿಸಲು ವಿದ್ಯಾರ್ಥಿಗಳೇ ಇಲ್ಲ

ಅಧ್ಯಯನದ ಅಂಕಿ ಅಂಶ

ಅಧ್ಯಯನದ ಭಾಗವಾಗಿ ಗದಗ ಜಿಲ್ಲೆಯ ಶಿರಹಟ್ಟಿ, ರೋಣ, ಮುಂಡರಗಿ ಮತ್ತು ನರಗುಂದ ತಾಲ್ಲೂಕುಗಳ 75 ಶಾಲೆಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು, ಶಿಡ್ಲಘಟ್ಟ ತಾಲ್ಲೂಕುಗಳ 75 ಶಾಲೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

144 ಕನ್ನಡ ಮಾಧ್ಯಮ ಶಾಲೆಗಳು, 4 ಇಂಗ್ಲಿಷ್‌ ಮಾಧ್ಯಮ ಶಾಲೆ ಹಾಗೂ 2 ಇತರೆ ಮಾಧ್ಯಮ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇವುಗಳಲ್ಲಿ 19 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು 81 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾಗಿವೆ.

ಅಧ್ಯಯನಕ್ಕೆ ಒಳಪಡಿಸಿದ ಶಾಲೆಗಳಲ್ಲಿ ಒಟ್ಟು 21,307 ಮಕ್ಕಳು ಕಲಿಯುತ್ತಿದ್ದಾರೆ. ಎಲ್ಲಾ ಶಾಲೆಗಳಲ್ಲೂ ಗಂಡು ಮತ್ತು ಹೆಣ್ಣು ಮಕ್ಕಳ ಸಂಖ್ಯೆ ಬಹುತೇಕ ಸಮವಾಗಿದೆ. 29 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 556 ಗಂಡು ಮಕ್ಕಳಿದ್ದರೆ 557 ಹೆಣ್ಣು ಮಕ್ಕಳು ಓದುತ್ತಿದ್ದಾರೆ. ಇನ್ನು ಅಧ್ಯಯನ ನಡೆಸಿದ 121 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10, 156 ವಿದ್ಯಾರ್ಥಿಗಳಿದ್ದರೆ, 10,038 ವಿದ್ಯಾರ್ಥಿನಿಯರಿದ್ದಾರೆ.

ಶೇ 92ರಷ್ಟು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ ಸೌಲಭ್ಯ ದೊರೆಯುತ್ತಿವೆ. ಅಲ್ಲದೆ, ಶೇ 34ರಷ್ಟು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಶೇ 64ರಷ್ಟು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ ಕೊಠಡಿಯಲ್ಲೂ ಮಕ್ಕಳ ವಯಸ್ಸಿನ ಅನುಸಾರ ಪೀಠೋಪಕರಣಗಳ ಲಭ್ಯತೆ ಇದೆ ಎಂದು ತಿಳಿದು ಬಂದಿದೆ.

ಅಧ್ಯಯನ ನಡೆಸಿರುವ ಪಟ್ಟಿಯಲ್ಲಿ 109 ಶಾಲೆಗಳಲ್ಲಿ  ಪ್ರತ್ಯೇಕ ತರಗತಿಗಳಿವೆ ಅದರಲ್ಲಿ 81% ಶಾಲೆಗಳಲ್ಲಿ ನೀರಿನ ಸೌಲಭ್ಯವಿರುವ ಶೌಚಾಲಯ ವ್ಯವಸ್ಥೆ ಇದೆ ಎಂದು ವರದಿಯಾಗಿದೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವಾಸುದೇವ ಶರ್ಮಾ, 'ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯವಿದೆ. ಆದರೆ ವಿದ್ಯಾರ್ಥಿಗಳು ಮಾತ್ರ ಬರುತ್ತಿಲ್ಲ. ಆ ಬಗ್ಗೆ ಪೋಷಕರಿಗೆ ತಿಳಿವಳಿಕೆ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರನ್ನು ನೇಮಿಸಿರುತ್ತಾರೆ. ಖಾಸಗಿ ಶಾಲೆಗಳಿಗಿಂತ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತದೆ ಪೋಷಕರು ಇದನ್ನು ತಿಳಿಯಬೇಕು' ಎಂದು ಹೇಳಿದ್ದಾರೆ.

English summary
Even though having good infrastructure maximum government schools of karnataka facing lack of students

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia