ದ್ವಿತೀಯ ಪಿಯುಸಿ ಪರೀಕ್ಷೆಯಿಂದ ಹೊರಗುಳಿದ 4204 ವಿದ್ಯಾರ್ಥಿಗಳು

Posted By:

ಮಾಡಿದುಣ್ಣೋ ಮಾರಾಯ ಎಂಬಂತೆ ಕಾಲೇಜಿಗೆ ಸರಿಯಾಗಿ ಹಾಜರಾಗದೇ ಕಾಲ ಕಳೆದ ವಿದ್ಯಾರ್ಥಿಗಳು ಈಗ ಒಂದು ವರ್ಷ ಹಿಂದುಳಿಯಬೇಕಾದ ಪರಿಸ್ಥಿತಿ ತಂದುಕೊಂಡಿದ್ದಾರೆ.

ಕನಿಷ್ಠ ಹಾಜರಾತಿಯನ್ನೂ ಕಾಪಾಡಿಕೊಳ್ಳದ ರಾಜ್ಯದ 4204 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಅರ್ಹತೆ ಕಳೆದುಕೊಂಡಿದ್ದಾರೆ. ಇಂದಿನಿಂದ ಆರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡ ವಿದ್ಯಾರ್ಥಿಗಳು ಮರು ಪರೀಕ್ಷೆಗೂ ಹಾಜರಾಗುವಂತಿಲ್ಲ.

ಪರೀಕ್ಷೆಯಿಂದ ಹೊರಗುಳಿದ  4204 ವಿದ್ಯಾರ್ಥಿಗಳು

ಕಡಿಮೆ ಹಾಜರಾತಿ

ಕರ್ನಾಟಕ ಶಿಕ್ಷಣ ಕಾಯ್ದೆ 2006, ಸೆಕ್ಷನ್ 21ರ ಪ್ರಕಾರ ಪ್ರತಿ ವಿಷಯದಲ್ಲೂ ಕನಿಷ್ಠ ಶೇ.75 ಹಾಜರಾತಿ ಹೊಂದಿದ ವಿದ್ಯಾರ್ಥಿಗಳಿಗೆ ಮಾತ್ರವೇ ಪ್ರವೇಶ ಪತ್ರ ನೀಡಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುತ್ತದೆ. ಪ್ರವೇಶ ಪತ್ರ ಪಡೆಯದ ಕಾರಣ ಇವರು ಮರು ಪರೀಕ್ಷೆಗೂ ಹಾಜರಾಗುವಂತಿಲ್ಲ.

ಕಡ್ಡಾಯ ಹಾಜರಾತಿ ಬಗ್ಗೆ ಪದವಿ ಪೂರ್ವ ಇಲಾಖೆ ಕಾಲೇಜುಗಳಿಗೆ ಮಾಹಿತಿ ನೀಡಿದ್ದು, ಎಲ್ಲ ಕಾಲೇಜುಗಳು ಸೆಪ್ಟೆಂಬರ್​ನಿಂದ ಜನವರಿವರೆಗೂ ನಾಲ್ಕು ಬಾರಿ ಹಂತ ಹಂತವಾಗಿ ಕನಿಷ್ಠ ಹಾಜರಾತಿ ಕೊರತೆ ಬಗ್ಗೆ ನೋಟಿಸ್ ಬೋರ್ಡ್ ನಲ್ಲಿ ಹಾಕುತ್ತಿದ್ದವು. ಹಾಗಾಗಿಯೂ  ವಿದ್ಯಾರ್ಥಿಗಳು ಉದಾಸೀನತೆ ತೋರಿ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡಿದ್ದಾರೆ. 

2016ನೇ ಸಾಲಿನಲ್ಲಿ 1 ,500 ಹಾಗೂ 2015ನೇ ಸಾಲಿನಲ್ಲಿ 2050 ವಿದ್ಯಾರ್ಥಿಗಳು ಕನಿಷ್ಠ ಹಾಜರಾತಿ ಇಲ್ಲದೆ ಪರೀಕ್ಷೆಯಿಂದ ಹೊರಗುಳಿದಿದ್ದರು. ಇದೇ ಮೊದಲ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅವಕಾಶ ಕಳೆದುಕೊಂಡಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ

ಈ ಹಿಂದೆ ಕನಿಷ್ಠ ಹಾಜರಾತಿ ಇರದಿದ್ದರೆ ವೈದ್ಯಕೀಯ ಪ್ರಮಾಣ ಪತ್ರ ನೀಡಬಹುದಿತ್ತು. ಕನಿಷ್ಠ ಶೇ.5 ಹಾಜರಾತಿ ನೀಡುವ ಅಧಿಕಾರ ಪ್ರಾಂಶುಪಾಲರಿಗೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಇತ್ತು. ಆದರೆ, ಈ ಪದ್ಧತಿಯು ಅತಿಯಾಗಿ ದುರ್ಬಳಕೆಯಾಗುತ್ತಿತ್ತು. ಇದನ್ನು ಗಮನಿಸಿದ ಸುಪ್ರೀಂಕೋರ್ಟ್ ಕನಿಷ್ಠ ಶೇ.75 ಹಾಜರಾತಿ ಇದ್ದವರಿಗೆ ಮಾತ್ರ ಪರೀಕ್ಷೆ ಬರೆಯಲು ಅನುಮತಿ ನೀಡಬೇಕು ಎಂದು ಆದೇಶ ಹೊರಡಿಸಿತು.

ಪ್ರವೇಶ ಪತ್ರ ಮುದ್ರಣ ಸ್ಥಗಿತ

ಮೊದಲಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಕನಿಷ್ಠ ಹಾಜರಾತಿ ಹೊಂದಿರದ ವಿದ್ಯಾರ್ಥಿಗಳ ಪ್ರವೇಶ ಪತ್ರ ಮುದ್ರಿಸಿ ಕಾಲೇಜುಗಳಿಗೆ ಕಳುಹಿಸಿ ಆನಂತರ ಮಾಹಿತಿ ಪಡೆದು ಅನುಮತಿ ನೀಡುತ್ತಿತ್ತು. ಆದರೆ, ಇದರಿಂದ ಅವ್ಯವಹಾರಗಳು ಹೆಚ್ಚಾಗಿವೆ ಎಂಬ ದೂರಿನ ಮೇರೆಗೆ 2013 ರಿಂದ ಈ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ.

English summary
Over 4000 Students Barred from Writing Karnataka II PUC Exams
Please Wait while comments are loading...