ನೋಟ್ ಬುಕ್, ಯೂನಿಫಾರ್ಮ್ ಎಲ್ಲಿ ಬೇಕಾದರು ಖರೀದಿಸಬಹುದು: ಶಿಕ್ಷಣ ಇಲಾಖೆ ಸ್ಪಷ್ಟನೆ

Posted By:

ಪುಸ್ತಕ ಮತ್ತು ಸಮವಸ್ತ್ರದ ಹೆಸರಿನಲ್ಲಿ ಹೆಚ್ಚು ಶುಲ್ಕ ಪಡೆಯುತ್ತಿದ್ದ  ಖಾಸಗಿ ಶಾಲೆಗಳ ಬಗ್ಗೆ ಪೋಷಕರು ಬೇಸತ್ತಿದ್ದರು, ಇದಕ್ಕೆಲ್ಲ ಯಾವಾಗ ಕಡಿವಾಣ ಬೀಳುತ್ತದೆ ಎಂದು ಚಿಂತಿಸುತ್ತಿದ್ದ ಪೋಷಕರಿಗೆ ಶಿಕ್ಷಣ ಇಲಾಖೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. 

ಪಠ್ಯಪುಸ್ತಕ, ನೋಟ್ ಪುಸ್ತಕ, ಸಮವಸ್ತ್ರ ಇತ್ಯಾದಿಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲು ಪೋಷಕರು ಸ್ವತಂತ್ರರಾಗಿರುತ್ತಾರೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ರಾಜ್ಯದ ಯಾವುದೇ ಖಾಸಗಿ ಶಾಲೆಗಳು ಇನ್ನು ಮುಂದೆ ಪಠ್ಯಪುಸ್ತಕ, ನೋಟ್ ಬುಕ್, ಸಮವಸ್ತ್ರ ಹಾಗೂ ಇತರೆ ಲೇಖನ ಸಾಮಗ್ರಿಗಳನ್ನು ಮಾರುವಂತಿಲ್ಲ. ನಿರ್ದಿಷ್ಟ ಮಾರಾಟಗಾರರಿಂದ ಖರೀದಿಸುವಂತೆಯೂ ಹೇಳುವಂತಿಲ್ಲ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ಸ್ಪಷ್ಟ ಸುತ್ತೋಲೆ ಹೊರಡಿಸಿದೆ.

ಆರ್ ಟಿ ಇ ಮಕ್ಕಳಿಗೆ ಉಚಿತ ಪುಸ್ತಕ

ಆದರೆ, ಕರ್ನಾಟಕ ಪಠ್ಯಪುಸ್ತಕ ಸಂಘ ಪ್ರಕಟಿಸುವ ಪಠ್ಯಪುಸ್ತಕಗಳ ಸರಬರಾಜಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತೆ ಸೌಜನ್ಯ ತಿಳಿಸಿದ್ದಾರೆ. ಜೊತೆಗೆ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳು ಪಠ್ಯಪುಸ್ತಕಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಖರೀದಿಸಿ ಅವುಗಳ ಮುಖಬೆಲೆಗೆ ಒದಗಿಸಬಹುದು ಎಂದು ತಿಳಿಸಿದೆ.

ಆರ್ ಟಿ ಇ ಮಕ್ಕಳಿಗೆ ಉಚಿತ ಪುಸ್ತಕ

ಆರ್ ಟಿ ಇ ಕೋಟಾದಡಿ ದಾಖಲಾದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸಂಘವು 2017-18ನೇ ಸಾಲಿನಿಂದ ಉಚಿತವಾಗಿ ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡಲಿದೆ. ಇದಕ್ಕಾಗಿ ಶಾಲೆಗಳು ಇಂತಹ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಸಂಗ್ರಹಿಸುವಂತಿಲ್ಲ ಎಂದು ಆಯುಕ್ತರು ಸುತ್ತೋಲೆಯಲ್ಲಿ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಕೆಲ ಖಾಸಗಿ ಶಾಲೆಗಳು ಪುಸ್ತಕ ಹಾಗೂ ಸಮವಸ್ತ್ರದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ದುಬಾರಿ ಹಣ ಸಂಗ್ರಹಿಸುತ್ತಿದ್ದವು. ಕೆಲವು ಶಾಲೆಗಳು ವಾರ್ಷಿಕ ಶುಲ್ಕದ ಜತೆ ಸೇರಿಸಿ ಪುಸ್ತಕ, ಸಮವಸ್ತ್ರದ ಹಣ ವಸೂಲಿ ಮಾಡುತ್ತಿದ್ದವು. ಇದು ಪೋಷಕರಿಗೆ ಹೊರೆಯಾಗಿತ್ತು. ಶಾಲಾ ಆಡಳಿತ ಮಂಡಳಿಗಳ ಈ ಕ್ರಮದ ಕುರಿತು ಅಸಮಾಧಾನ ಇದ್ದರೂ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ವಿರೋಧಿಸಲಾಗದೆ ಪೋಷಕರು, ಕೇಳಿದಷ್ಟು ಹಣ ಕೊಟ್ಟು ಪುಸ್ತಕ ಹಾಗೂ ಸಮವಸ್ತ್ರ ಖರೀದಿಸುತ್ತಿದ್ದರು.

ಐಸಿಎಸ್ಇ/ ಸಿಬಿಎಸ್ಇ ಶಾಲೆಗಳಿಗೂ ಅನ್ವಯ

ಕರ್ನಾಟಕ ಶಿಕ್ಷಣ ಕಾಯಿದೆ-1983 ಸೆಕ್ಷನ್ 1 (3)ರ ಅಡಿ ಇರುವ (3 ಎ) ಷರತ್ತಿನ ವ್ಯಾಪ್ತಿಗೊಳಪಟ್ಟು ಐಸಿಎಸ್ಇ ಸಿಬಿಎಸ್ಇ ಪಠ್ಯಕ್ರಮ ಅನುಸರಿಸುತ್ತಿರುವ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಗೂ ಶಿಕ್ಷಣ ಕಾಯಿದೆಯ ಸೆಕ್ಷನ್ 5ಎ, 48, 112-ಎ ಮತ್ತು 124-ಎ ನಿಬಂಧನೆಗಳು ಅನ್ವಯವಾಗುತ್ತವೆ. ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ತಪ್ಪಿದಲ್ಲಿ ಕರ್ನಾಟಕ ಶಿಕ್ಷಣ ಹಕ್ಕು ಕಾಯಿದೆಯಡಿ ಸಂಬಂಧಪಟ್ಟ ಶಾಲೆಗಳ ಮಾನ್ಯತೆ ಹಿಂತೆಗೆದುಕೊಳ್ಳುವುದರ ಜತೆಗೆ, ದಂಡ ಕೂಡ ವಿಧಿಸಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

ಮೇ 10 ರೊಳಗೆ ಪ್ರವೇಶ ಪಡೆಯಲು ಸೂಚನೆ

ಈಗಾಗಲೇ ಸೀಟು ಹಂಚಿಕೆಯಾಗಿರುವ ಮಕ್ಕಳ ಪಾಲಕರಿಗೆ ಏ.30ರವರೆಗೆ ದಿನಕ್ಕೆ ನಾಲ್ಕು ಬಾರಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಎಸ್​ಎಂಎಸ್ ಮೂಲಕ ಮಾಹಿತಿ ಕಳುಹಿಸಲಾಗಿದೆ. ಇಲಾಖೆ ವೆಬ್​ಸೈಟ್​ನಲ್ಲಿ ಅರ್ಜಿ ಸಂಖ್ಯೆ ನಮೂದಿಸಿ ಸೀಟು ಹಂಚಿಕೆಯಾದ ಪ್ರತಿಯ ಪ್ರಿಂಟ್ ಪಡೆದು ಆಧಾರ್ ಕಾರ್ಡನ್ನೂ ಜತೆಯಲ್ಲಿಟ್ಟುಕೊಂಡು ಶಾಲೆಗೆ ಮೇ 10ರೊಳಗೆ ತೆರಳಿ ಮಗುವನ್ನು ದಾಖಲು ಮಾಡಬೇಕು ಎಂದು ಇಲಾಖೆ ತಿಳಿಸಿದೆ.

English summary
In a major move, the education department has issued a circular that no school can sell textbooks, uniforms, shoes, books, belts or any other accessories on campus.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia