ಸರ್ಕಾರಿ ಶಾಲೆ ಉಳಿಸಲು ಎಲ್ ಕೆ ಜಿ ಶುರುಮಾಡಿದರು!

Posted By:

ಇಂದು ಅನೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಲು ಪೂರ್ವ ಪ್ರಾಥಮಿಕ ಶಿಕ್ಷಣ (ಎಲ್-ಕೆಜಿ, ಯುಕೆಜಿ) ಇಲ್ಲದಿರುವುದೇ ಕಾರಣ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂದರೆ ಐದುವರೆ ವರ್ಷ ಪೂರೈಸಿರಬೇಕು, ಅದೂ ಕೂಡ ಒಂದನೇ ತರಗತಿಗೆ ಮಾತ್ರ ಸೇರಿಸಲು ಅವಕಾಶ. ಏಕೆಂದರೆ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಇರುವುದಿಲ್ಲ.

ಮಕ್ಕಳಿಗೆ ಶಾಲೆಗೆ ಸೇರಿಸುವ ಮೊದಲು ಪ್ರಿ-ಕೆಜಿ, ಎಲ್-ಕೆಜಿ, ಯುಕೆಜಿ ಎಂದೆಲ್ಲ ಪೋಷಕರು ಹುಡುಕಾಡುವಾಗಲೆ ಖಾಸಗಿ ಶಾಲೆಗಳು ಪೋಷಕರಿಗೆ ಬಣ್ಣ ಬಣ್ಣದ ಚಿತ್ರವಿರುವ ಗೋಡೆಗಳನ್ನು ತೋರಿಸಿ ತಮ್ಮತ್ತ ಸೆಳೆಯುತ್ತಾರೆ. ಒಮ್ಮೆ ಆ ಕಡೆ ಮುಖ ಮಾಡಿದವರು ಸರ್ಕಾರಿ ಶಾಲೆಗಳತ್ತ ತಿರುಗಿಯು ನೋಡುವುದಿಲ್ಲ.

ಸರ್ಕಾರಿ ಶಾಲೆಯಲ್ಲಿ ಎಲ್ ಕೆ ಜಿ

ಆದರೆ ಇಲ್ಲೊಂದು ಸರ್ಕಾರಿ ಶಾಲೆ ಹಳೆಯ ಸಂಪ್ರದಾಯಕ್ಕೆ ಬ್ರೇಕ್ ಹಾಕಿದೆ. ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಮೂಲಕ ಐದು ವರ್ಷಕ್ಕಿಂತ ಕಿರಿಯ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳುತ್ತಿದೆ. ಅಷ್ಟೇ ಅಲ್ಲ ಈ ಕಾರ್ಯಕ್ರಮಕ್ಕೆ ಸ್ಥಳೀಯರ ಬೆಂಬಲ ಕೂಡ ಜೋರಾಗಿಯೇ ಇದೆ. ಇದರಿಂದಾಗಿ ಶಾಲಾ ದಾಖಲಾತಿಯಲ್ಲಿ ಗಣನೀಯ ಏರಿಕೆ ಕೂಡ ಕಂಡು ಬಂದಿದೆ.

ಉಡುಪಿ ತಾಲ್ಲೂಕಿನ ಕೊಡವೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಕನ್ನಡ ಶಾಲೆಗಳನ್ನು ಉಳಿಸುವ ಹೊಸ ದಾರಿ ತೋರಿಸಿದೆ.

ಈ ಯೋಜನೆಗೆ ಸ್ಥಳೀಯ ಜನರು ಇದಕ್ಕೆ ಪ್ರೋತ್ಸಾಹ ನೀಡಿದ್ದು, ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಮಕ್ಕಳನ್ನು ದಾಖಲಿಸಿದ್ದಾರೆ. ಬರೋಬ್ಬರಿ 90 ಮಕ್ಕಳು ಪೂರ್ವ ಪ್ರಾಥಮಿಕ ತರಗತಿಯಲ್ಲಿ ಕಲಿಯುತ್ತಿದ್ದಾರೆ.

ಕೊಡವೂರಿನ ಸರ್ಕಾರಿ ಶಾಲೆಗೆ 144 ವರ್ಷಗಳ ಇತಿಹಾಸ ಇದೆ. ಪ್ರಸ್ತುತ ಈ ಶಾಲೆಯಲ್ಲಿ 110 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಖಾಸಗಿ ಶಾಲೆಗಳ ಅಬ್ಬರದ ಪರಿಣಾಮ ಎರಡು ವರ್ಷದ ಹಿಂದೆ ಈ ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು. ವಿದ್ಯಾರ್ಥಿಗಳ ಸಂಖ್ಯೆ 69ಕ್ಕೆ ಕುಸಿದು ಶಾಲೆ ಅಳಿವು ಉಳಿವಿನ ಪ್ರಶ್ನೆ ಎದುರಾಗಿತ್ತು. ಶತಮಾನ ಪೂರೈಸಿರುವ ಶಾಲೆ ಉಳಿಸಿಕೊಳ್ಳಲೇಬೇಕು ಎಂಬ ದೃಢ ನಿರ್ಧಾರ ಮಾಡಿದ ಶಾಲೆ ಮುಖ್ಯ ಶಿಕ್ಷಕ ಎ. ಸುಂದರ ಅವರು ಶಿಕ್ಷಕರು ಹಾಗೂ ಸ್ಥಳೀಯರೊಂದಿಗೆ ಚರ್ಚಿಸಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸುವ ನಿರ್ಧಾರ ಕೈಗೊಂಡರು. ಅದರಂತೆ 2016ರಲ್ಲಿ ಎಲ್‌ಕೆಜಿ ಆರಂಭಿಸಲಾಯಿತು.

ಜನರು ಶಾಲೆಯ ಬೆಂಬಲಕ್ಕೆ ನಿಂತ ಕಾರಣ ಮೊದಲ ವರ್ಷವೇ 45 ವಿದ್ಯಾರ್ಥಿಗಳು ದಾಖಲಾದರು. 2017ರಲ್ಲಿಯೂ 45 ವಿದ್ಯಾರ್ಥಿಗಳು ಎಲ್‌ಕೆಜಿಗೆ ದಾಖಲಾಗಿದ್ದಾರೆ. ಈ ಬೆಳವಣಿಗೆ ಮತ್ತು ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮವನ್ನು ಸರ್ಕಾರ ಪರಿಚಯಿಸಿದ ಪರಿಣಾಮ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 110ಕ್ಕೆ ಏರಿಕೆ ಕಂಡಿದೆ.

'ವಿದ್ಯಾರ್ಥಿಗಳನ್ನು ಶಾಲೆಗೆ ಸೆಳೆಯುವ ಮಾರ್ಗದ ಹುಡುಕಾಟದಲ್ಲಿದ್ದಾಗ ಎಲ್‌ಕೆಜಿ ಆರಂಭಿಸುವ ಚಿಂತನೆ ಬಂತು. ತಡ ಮಾಡದೆ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲಾಯಿತು. ಅದಕ್ಕಾಗಿ ಅಗತ್ಯ ಇರುವ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಇಬ್ಬರು ಶಿಕ್ಷಕರು ಹಾಗೂ ಒಬ್ಬರು ಕೆಲಸದವರು ಇದ್ದಾರೆ. ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ' ಎನ್ನುತ್ತಾರೆ ಮುಖ್ಯ ಶಿಕ್ಷಕರು.

ದಾನಿಗಳ ಸಹಾಯದಿಂದ ಖರ್ಚು ವೆಚ್ಚ

ಪೂರ್ವ ಪ್ರಾಥಮಿಕ ಶಾಲೆಯನ್ನು ನಿರ್ವಹಿಸಲು ದಾನಿಗಳ ಸಹಾಯಧನ ಬಳಸಿಕೊಳ್ಳಲಾಗಿದೆ. ಇದರಿಂದ ಶಾಲಾ ವಾಹನ ಖರೀದಿಸಲಾಗಿದ್ದು, ದೂರದಲ್ಲಿ ಮನೆ ಇರುವ ಮಕ್ಕಳಿಗೆ ಅನುಕೂಲವಾಗಿದೆ.

ಖಾಸಗಿ ಶಾಲೆ ಮಾದರಿಯಲ್ಲಿ ಪಾಠ

'ಆರಂಭದ ಎರಡು- ಮೂರು ತಿಂಗಳು ಮೌಖಿಕವಾಗಿ ಪಾಠ ಮಾಡಲಾಗುತ್ತದೆ. ಮೂರು ತಿಂಗಳ ನಂತರ ವಸ್ತುಗಳನ್ನು ತೋರಿಸಿ ಅದರ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆ ನಂತರ ಅವರಿಗೆ ಕನ್ನಡ ಮತ್ತು ಇಂಗ್ಲಿಷ್ ಅಕ್ಷರಗಳನ್ನು ಹೇಳಿಕೊಡಲಾಗುತ್ತದೆ. ಬಹುತೇಕ ಖಾಸಗಿ ಶಾಲೆಗಳ ಮಾದರಿಯಲ್ಲಿಯೇ ತರಬೇತಿ ನೀಡಲಾಗುತ್ತದೆ' ಎನ್ನುತ್ತಾರೆ ಖಾಸಗಿ ಶಾಲೆಯೊಂದರಲ್ಲಿ ಪ್ರಾಂಶುಪಾಲೆಯಾಗಿ ಕೆಲಸ ಮಾಡಿ ನಿವೃತ್ತರಾಗಿ ಈಗ ಪೂರ್ವ ಪ್ರಾಥಮಿಕ ತರಗತಿ ಶಿಕ್ಷಕಿಯಾಗಿರುವ ಹೆನ್ರಿಟ ಡಿಸಿಲ್ವ.

English summary
pre primary classes are introduced in kodavuru government higher primary school to improve the admissions in government school.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia