ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆ.21 ರಂದು ಖಾಸಗಿ ಶಾಲಾ ಕಾಲೇಜು ಬಂದ್

Posted By:

ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಈಡೇರಿಕೆಗೆ ಒತ್ತಾಯಿಸಿ ಆ.21ರಿಂದ ರಾಜ್ಯದ ಎಲ್ಲ ಅನುದಾನಿತ, ಅನುದಾನ ರಹಿತ ಶಾಲಾ, ಕಾಲೇಜುಗಳನ್ನು ಬಂದ್ ಮಾಡಲು ಖಾಸಗಿ ಶಿಕ್ಷಣ ಸಂಸ್ಥೆಗಳು ನಿರ್ಧರಿಸಿವೆ.

ಬೆಳಗಾವಿಯ ಡಾ.ಬಿ.ಎಸ್.ಜೀರಗೆ ಸಭಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅನುದಾನಿತ, ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿರುವ ಬೋಧಕ-ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿ ಬಂದ್ ಗೆ ಕರೆ ನೀಡಲಾಗಿದೆ. ಅಲ್ಲದೆ, ಶಿಕ್ಷಕರ ದಿನವಾದ ಸೆ.5ರಂದು ಕರಾಳ ದಿನವಾಗಿ ಆಚರಣೆ ಮಾಡಲು ಒಕ್ಕೂಟ ಒಮ್ಮತದ ನಿರ್ಧಾರ ಕೈಗೊಂಡಿದೆ.

ಆ.21 ರಂದು ಖಾಸಗಿ ಶಾಲಾ ಕಾಲೇಜು ಬಂದ್

ಸಭೆಯಲ್ಲಿ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಸಮಾನ ವೇತನ ಕೊಡಬೇಕು. 1995ರ ನಂತರ ಆರಂಭವಾದ ಶಾಲಾ, ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಬೇಕಾಬಿಟ್ಟಿಯಾಗಿ ಖಾಸಗಿ ಶಾಲೆಗಳ ಆರಂಭಕ್ಕೆ ಪರವಾನಗಿ ನೀಡಬಾರದು ಎನ್ನುವುದು ಸೇರಿದಂತೆ ಸುಮಾರು 21 ಬೇಡಿಕೆಗಳ ಈಡೇರಿಕೆಗೆ ಸರಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಯಿತು.

ಒಕ್ಕೂಟದ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಮಾತನಾಡಿ ''ರಾಜ್ಯ ಸರಕಾರ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಮಧ್ಯೆ ತಾರತಮ್ಯ ಮಾಡುತ್ತಿದೆ. ಮಂಡ್ಯ ಮತ್ತು ಮೈಸೂರುಗಳಲ್ಲಿ ಕೆಲ ಸಚಿವರು ನಡೆಸುವ ಅನುದಾತ ಶಾಲೆಗಳಿಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರ ಒಪ್ಪಿಗೆ ಕೊಟ್ಟಿದೆ. ಆದರೆ, ಉಳಿದ ಶಿಕ್ಷಣ ಸಂಸ್ಥೆಗಳ ಮೇಲೆ ನಿರ್ಬಂಧ ಹೇರುತ್ತಿದೆ'', ಎಂದು ಆರೋಪ ಮಾಡಿದರು.

''ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಮಠಗಳು, ಸಾಮಾಜಿಕ ಸಂಸ್ಥೆಗಳು ಸರಕಾರದ ಅನುದಾನ ಇಲ್ಲದೆ ಶಾಲೆಗಳನ್ನು ನಡೆಸಿಕೊಂಡು ಬಂದಿವೆ. ಆದರೆ, ರಾಜ್ಯ ಸರಕಾರ ಸಲ್ಲದ ನಿಯಮಗಳನ್ನು ಹೇರಿ ಆ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವ ಹುನ್ನಾರ ನಡೆಸಿದೆ. ಹಾಗಾಗಿ ಅನಿವಾರ್ಯವಾಗಿ ಶಾಲಾ, ಕಾಲೇಜುಗಳನ್ನು ಬಂದ್ ಮಾಡಿ ಮುಷ್ಕರ ನಡೆಸಬೇಕಿದೆ'', ಎಂದರು.

ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಹೋರಾಟ

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ಹೋರಾಟ ನಡೆಸಲು ಸಭೆ ನಿರ್ಧರಿಸಿದೆ. ಈ ಕುರಿತು ಮಾತನಾಡಿದ ಬಸವರಾಜ ಹೊರಟ್ಟಿ ''ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ಸಾಕಷ್ಟು ಬಾರಿ ಸರಕಾರದ ಗಮನಕ್ಕೆ ತರಲಾಗಿದೆ. ಆದರೆ, ರಾಜ್ಯ ಸರಕಾರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಒಕ್ಕೂಟದ ಯಾವ ಸದಸ್ಯರನ್ನೂ ಕರೆದಿಲ್ಲ. ಸರಕಾರಕ್ಕೆ ಬಿಸಿ ಮುಟ್ಟಿಸಲು ಮುಷ್ಕರ ಅನಿವಾರ್ಯ. ಈ ಹೋರಾಟಕ್ಕೆ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳು ಕೈಜೋಡಿಸಬೇಕು'', ಎಂದು ಮನವಿ ಮಾಡಿದರು.

''ಅನುದಾನಿತ ಶಾಲೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅವಕಾಶ ಕೊಡದೇ ಇರುವುದರಿಂದ ಅದರ ಹೊರೆ ಆಡಳಿತ ಮಂಡಳಿಗಳ ಮೇಲೆ ಬೀಳುತ್ತಿದೆ. ಅಲ್ಲದೆ, ರಾಜ್ಯ ಸರಕಾರ ಖಾಸಗಿ ಶಾಲಾ, ಕಾಲೇಜುಗಳನ್ನು ಆರಂಭಿಸಲು ಬೇಕಾಬಿಟ್ಟಿಯಾಗಿ ಪರವಾನಗಿ ನೀಡುತ್ತಿದೆ. ಇದರಿಂದ ಹಾಲಿ ಶಿಕ್ಷಣ ಸಂಸ್ಥೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಇಂಥ ಅವೈಜ್ಞಾನಿಕ ನಿರ್ಧಾರಗಳನ್ನು ಕೈಬಿಡಬೇಕು'', ಎಂದು ಒತ್ತಾಯಿಸಿದರು.

English summary
The federation of private college managements and employees in Karnataka has given a call for an indefinite bandh of all private colleges - aided and unaided - across the State from August 21.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia