ಪಿಯುಸಿ ಅಂಕಪಟ್ಟಿಯಲ್ಲಿನ ದೋಷ ತಪ್ಪಿಸಲು ಶಿಕ್ಷಣ ಇಲಾಖೆ ಕ್ರಮ

Posted By:

ಪ್ರತಿ ಬಾರಿ ಅಂಕಪಟ್ಟಿಯಲ್ಲಿನ ದೋಷಕ್ಕಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಣ ಇಲಾಖೆಯನ್ನು ದೂಷಿಸುವಂತಾಗಿತ್ತು. ಆದರೆ ಇನ್ನು ಮುಂದೆ ಈ ಪರಿಸ್ಥಿತಿ ಬರುವುದಿಲ್ಲ ಏಕೆಂದರೆ ಈ ತಪ್ಪುಗಳಿಗೆ ಪರಿಹಾರವನ್ನು ಹುಡುಕಿಕೊಂಡಿದೆ ಶಿಕ್ಷಣ ಇಲಾಖೆ.

ಪಿಯುಸಿ ಅಂಕಪಟ್ಟಿಗಳಲ್ಲಿನ ದೋಷ ನಿವಾರಣೆಗಾಗಿ ಶಿಕ್ಷಣ ಇಲಾಖೆ ಹೊಸ ಯೋಜನೆಗೆ ಮುಂದಾಗಿದೆ. ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿನ ಮಾಹಿತಿಯನ್ನಾಧರಿಸಿ ಪಿಯುಸಿ ಅಂಕಪಟ್ಟಿ ಸಿದ್ಧಗೊಳಿಸಲು ಚಿಂತನೆ ನಡೆಸಿದೆ.

ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾರ್ಥಿಗಳು ನೀಡಿರುವ ಡೇಟಾವನ್ನು ಪಿಯುಸಿಗೆ ಲಿಂಕ್ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪ್ರವೇಶ ಪತ್ರ, ಅಂಕಪಟ್ಟಿಗಳನ್ನು ದೋಷರಹಿತವಾಗಿ ನೀಡಲು ಇಲಾಖೆ ಹೊಸ ಯೋಜನೆ ಕೈಗೆತ್ತಿಕೊಂಡಿದೆ. ಒಂದು ವೇಳೆ ಎಸ್ಸೆಸ್ಸೆಲ್ಸಿಯಲ್ಲಿರುವ ದತ್ತಾಂಶವೇ ತಪ್ಪಾಗಿದ್ದರೆ, ವಿದ್ಯಾರ್ಥಿಗಳು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶವಿದೆ.

ಅಂಕಪಟ್ಟಿ ದೋಷಕ್ಕೆ ಸೂಕ್ತ ಕ್ರಮ

ದೋಷರಹಿತ ಪ್ರವೇಶಪತ್ರ ಮತ್ತು ಅಂಕಪಟ್ಟಿ ನೀಡುವ ಉದ್ದೇಶದಿಂದ ಆನ್​ಲೈನ್ ದಾಖಲೆ ಕ್ರೋಡೀಕರಣ ಮಾಡುತ್ತಿದ್ದೇವೆ. ಇನ್ನೆರಡು ದಿನದಲ್ಲಿ ಲಿಂಕ್ ಅನ್ನು ಪಿಯುಸಿ ವೆಬ್​ಸೈಟ್​ನಲ್ಲಿ ಹಾಕಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ ತಿಳಿಸಿದ್ದಾರೆ.

ಪ್ರತಿವರ್ಷ 5.5 ಲಕ್ಷ ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ಪ್ರವೇಶ ಪಡೆಯುತ್ತಾರೆ. 2017ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರವೇಶ ಪತ್ರ, ಅಂಕಪಟ್ಟಿಗಳಲ್ಲಿ ವಿದ್ಯಾರ್ಥಿಗಳ ಹೆಸರು, ಮಾಧ್ಯಮ, ಜನ್ಮದಿನಾಂಕ ದೋಷಪೂರಿತವಾಗಿ ಮುದ್ರಣಗೊಂಡಿವೆ ಎಂದು ವಿದ್ಯಾರ್ಥಿಗಳು ಮತ್ತು ಪಾಲಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಮೇಲೆ ದೂರಿದ್ದರು.

ಅಂಕಪಟ್ಟಿ ಮುದ್ರಣಗೊಂಡ ನಂತರ ತಪ್ಪುಗಳನ್ನು ಸರಿಪಡಿಸಿ ಮರುಮುದ್ರಣ ಮಾಡುವುದು ಪಿಯು ಇಲಾಖೆಗೆ ದೊಡ್ಡ ತಲೆನೋವಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ನೀಡಿರುವ ಡೇಟಾವನ್ನೇ ಪದವಿ ಪೂರ್ವ ಶಿಕ್ಷಣ ಇಲಾಖೆ ಪಡೆದುಕೊಂಡಿದೆ.

ಈ ಯೋಜನೆ ಹೇಗೆ ಕಾರ್ಯ ನಿರ್ವಹಿಸಿಲಿದೆ

2017ನೇ ಸಾಲಿನಲ್ಲಿ ವಿವಿಧ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ದಾಖಲೆಗಳನ್ನು ಪ್ರವೇಶಾನುಮೋದನೆಗೆ ಪದವಿಪೂರ್ವ ಶಿಕ್ಷಣ ಇಲಾಖೆಗೆ ಕಳುಹಿಸಲಾಗುತ್ತದೆ. ಇಲಾಖೆಯು ದಾಖಲೆಗಳನ್ನು ಪರಿಶೀಲಿಸಿದ ನಂತರ ಅಂಗೀಕರಿಸುವುದು ಅಥವಾ ನಿರಾಕರಿಸುವುದನ್ನು ನಿರ್ಧರಿಸಲಿದೆ. ಪ್ರವೇಶಾನುಮೋದನೆ ಸಂದರ್ಭದಲ್ಲೇ ಸರಿಪಡಿಸುವುದರಿಂದ ಮುಂದಾಗುವ ತಪ್ಪುಗಳನ್ನು ತಡೆಯಬಹುದಾಗಿದೆ.

ವಿದ್ಯಾರ್ಥಿಗಳೇ ಸರಿಪಡಿಸಬಹುದು

ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಂದರ್ಭ ನೀಡಲಾಗಿರುವ ಮೊಬೈಲ್ ಸಂಖ್ಯೆಗೆ ಯೂಸರ್ ಐಡಿ ಮತ್ತು ಒಟಿಪಿ ಕಳುಹಿಸಲಾಗುತ್ತದೆ. ಇದನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡುವ ಲಿಂಕ್ ಕ್ಲಿಕ್ ಮಾಡಿ ತಮ್ಮ ಅರ್ಜಿಗಳಲ್ಲಿ ಇರುವ ಹೆಸರು, ಪಾಲಕರ ಹೆಸರು, ವಿಳಾಸ, ಜನ್ಮದಿನಾಂಕ ಎಲ್ಲವನ್ನೂ ಒಮ್ಮೆ ಪರಿಶೀಲಿಸಿಕೊಳ್ಳಬಹುದು. ಆನಂತರವೂ ತಪ್ಪಿದ್ದಲ್ಲಿ ಅಗತ್ಯ ದಾಖಲೆ ನೀಡಿ ಕಾಲೇಜಿನ ಪ್ರಾಂಶುಪಾಲರ ಮೂಲಕ ಸರಿಪಡಿಸಿ, ಆನಂತರ ಪಿಯು ಇಲಾಖೆಗೆ ಆಪ್​ಲೋಡ್ ಮಾಡಬಹುದು.

English summary
The Department of Education has decided to link the data provided by the students in SSLC to the PUC to avoid errors in marks cards.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia