ಪಿಯುಸಿ ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯಿತಿ: 448.75 ಲಕ್ಷ ರೂ. ಬಿಡುಗಡೆ

Posted By:

2017-18 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಸರ್ಕಾರೇತರ ಶುಲ್ಕವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಪಿಯು ವಿದ್ಯಾರ್ಥಿನಿಯರಿಗೆ ನೀಡಿರುವ ಸರಕಾರೇತರ ಶುಲ್ಕ ವಿನಾಯಿತಿ ಮೊತ್ತ 448.75 ಲಕ್ಷ ರೂ.ಗಳನ್ನೂ ಬಿಡುಗಡೆ ಮಾಡಲಾಗಿದ್ದು, ವಿದ್ಯಾರ್ಥಿನಿಯರ ಪೂರ್ಣ ಅಂಕಿಅಂಶಗಳ ಮಾಹಿತಿಯನ್ನು ಇಲಾಖೆಯ ಗಣಕಶಾಖೆಯಿಂದ ಪಡೆಯಲಾಗಿದೆ.

ಪಿಯುಸಿ ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯಿತಿ

ಎಸ್.ಸಿ, ಎಸ್.ಟಿ ಹಾಗು ಪ್ರವರ್ಗ-1ರ ವಿದ್ಯಾರ್ಥಿನಿಯರನ್ನು ಹೊರತು ಪಡಿಸಿ ಸಾಮಾನ್ಯ ವಿದ್ಯಾರ್ಥಿನಿಯರಿಗೆ ತಲಾ 456 ರೂ.ಸರಕಾರೇತರ ಶುಲ್ಕ ದಿಂದ ವಿನಾಯಿತಿ ನೀಡಲಾಗಿದೆ. ಈ ಮೊತ್ತವನ್ನು ಸರಕಾರ ಸಂಬಂಧಪಟ್ಟ ಪದವಿ ಪೂರ್ವ ಕಾಲೇಜುಗಳಿಗೆ ಮರುಪಾವತಿ ಮಾಡಲಿದೆ.

ವಿದ್ಯಾರ್ಥಿನಿಯರಿಗೆ ಕ್ರೀಡಾ ಶುಲ್ಕ 84 ರೂ. ವಾಚನಾಲಯ ಶುಲ್ಕ 120 ರೂ. ಶಿಕ್ಷಕರ ಕಲ್ಯಾಣ ನಿಧಿ ಶುಲ್ಕ 25 ರೂ. ವಿದ್ಯಾರ್ಥಿ ಕಲ್ಯಾಣ ನಿಧಿ ಶುಲ್ಕ 25 ರೂ. ಕಾಲೇಜಿನ ಪರೀಕ್ಷಾ ಶುಲ್ಕ 168 ರೂ. ವಿಶೇಷ ಕ್ರೀಡಾ ಶುಲ್ಕ 34 ರೂ. ಸೇರಿ ಒಟ್ಟು 456 ರೂ. ವಿನಾಯಿತಿ ದೊರೆಯಲಿದೆ.

2017-18 ಸಾಲಿನಲ್ಲಿ ರಾಜ್ಯದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 1,15,779 ವಿದ್ಯಾರ್ಥಿನಿಯರ ಪೈಕಿ 98,412 ಸಾಮಾನ್ಯ ವಿದ್ಯಾರ್ಥಿನಿಯರಿಗೆ ತಲಾ 456 ರೂ.ಗಳಂತೆ ಹಣ ಬಿಡುಗಡೆ ಮಾಡಲಾಗಿದೆ. ಪ್ರಥಮ ಪಿಯುಸಿಯಲ್ಲಿ 61545 ಮತ್ತು ದ್ವಿತೀಯ ಪಿಯುಸಿಯಲ್ಲಿ 54234 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯಾ ಜಿಲ್ಲಾ ಉಪ ನಿರ್ದೇಶಕರಿಗೆ ಸಂಬಂಧಪಟ್ಟ ಕಾಲೇಜುಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಸೂಚಿಸಲಾಗಿದೆ. ಅಲ್ಲದೆ, ಸಾಮಾನ್ಯ ವಿದ್ಯಾರ್ಥಿನಿಯರಿಂದ ಯಾವುದೇ ಸರಕಾರೇತರ ಶುಲ್ಕ ವಸೂಲಿ ಮಾಡಿಲ್ಲ ಎಂದು ಪ್ರಾಂಶುಪಾಲರಿಂದ ದೃಢೀಕರಣ ಪತ್ರ ಪಡೆದು ಬಿಲ್ಲಿನ ಮೇಲು ಸಹಿ ಪಡೆಯುವಂತೆಯೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

English summary
The State Government has released the non-governmental fees for girl students who are studying in the first and second PUC classes in the State Government Colleges in the 2017-18 academic year.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia