ವಿದ್ಯಾರ್ಥಿಗಳೇ ಗಣೇಶನಿಗೆ ಗರಿಕೆ ಏಕೆ ಅರ್ಪಿಸುತ್ತಾರೆ ಗೊತ್ತಾ?

Posted By:

ಗಣಪತಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ದೇವರು, ವಿದ್ಯಾರ್ಥಿಗಳಿಗೆ ಗಣೇಶನ ಹಬ್ಬ ಬಂತೆಂದರೆ ಎಲ್ಲಿಲ್ಲದ ಖುಷಿ, ಮನೆಗಳಲ್ಲಿ, ರಸ್ತೆಗಳಲ್ಲಿ ಗಣೇಶನ ಕೂರಿಸಿ ಸಂಭ್ರಮಿಸುತ್ತಾರೆ. ಇನ್ನು ಕೆಲವರು ವಿದ್ಯಾ ಗಣಪತಿ ಪೂಜೆ ಮಾಡಿದರೆ, ಓದಿನಲ್ಲಿ ಹೆಚ್ಚಿನ ಲಾಭವಾಗಲಿದೆ ಎನ್ನುವ ಕಾರಣವೂ ಇದೆ.

ಗಣಪತಿ ಪೂಜೆ ಎಂದರೆ ನಮಗೆ ಥಟ್ಟನೇ ನೆನಪಾಗುವುದು ಗರಿಕೆ ಹುಲ್ಲು, ಪ್ರತಿ ವರ್ಷ ಗಣಪತಿ ಹಬ್ಬ ಬಂದಾಗಲೆಲ್ಲ ಗರಿಕೆಗೆ ಬಲು ಬೇಡಿಕೆ. ಆದರೆ ಈ ಗರಿಕೆಗೂ ಗಣಪತಿಗೂ ಏನು ಸಂಬಂಧ ಅನ್ನುವುದನ್ನು ನಾವು ಯೋಚಿಸುವುದೇ ಇಲ್ಲ. ಆದರೆ ಗಣಪತಿ ಹಬ್ಬದಂದು ಗರಿಕೆ ಬಳಸಲು ಅನೇಕ ಕಾರಣಗಳಿವೆ.

 ಗಣೇಶನಿಗೆ ಗರಿಕೆ ಏಕೆ?

ನಮಗೆಲ್ಲ ತಿಳಿದಿರುವ ಹಾಗೆ ಗರಿಕೆ ಹುಲ್ಲಿನಲ್ಲಿ ಅನೇಕ ಆಯುರ್ವೇದದ ಗುಣಗಳಿವೆ. ಗರಿಕೆ ಹುಲ್ಲಿನಿಂದ ಅನೇಕ ರೋಗಗಳನ್ನು ಗುಣ ಪಡಿಸಬಹುದು. ಆಯುರ್ವೇದದ ಪ್ರಕಾರ ಗರಿಕೆಯ ರಸವು ದೇಹದ ಉಷ್ಣತೆಯನ್ನು ಕಡಿಮೆಮಾಡುತ್ತದೆ.

ಗರಿಕೆಯು ಬುದ್ಧಿಯ ಮೇಲೆ ಪ್ರಭಾವ ಬೀರುತ್ತದೆ. ಕೆಟ್ಟ ಕನಸುಗಳನ್ನು ದೂರ ಮಾಡುತ್ತದೆ. ಪಿತ್ಥ ನಿವಾರಣೆಗೆ ಗರಿಕೆ ಕಷಾಯವನ್ನು ಉಪಯೋಗಿಸುತ್ತಾರೆ.

ಗಣೇಶನ ಪೂಜೆಗೆ ಗರಿಕೆ ಶ್ರೇಷ್ಠ

ಗರಿಕೆಯನ್ನು ದೂರ್ವೆ ಎಂದೂ ಕರೆಯುತ್ತಾರೆ. ಧಾರ್ಮಿಕ ಮಹತ್ವದ ಜತೆಗೆ ಕೆಲವು ಕಾಯಿಲೆಗಳ ಚಿಕಿತ್ಸೆಯಲ್ಲೂ ಗರಿಕೆ ತನ್ನದೇ ಪಾತ್ರ ವಹಿಸುತ್ತದೆ. ಆದ್ದರಿಂದ ಈ ಗರಿಕೆ ಆಯುರ್ವೇದದಲ್ಲಿ ಪ್ರಧಾನವಾಗಿದೆ.

ಗರಿಕೆ ಹುಲ್ಲು ಔಷಧಿಗಳಲ್ಲಿ ಅತಿ ಮಹತ್ವ ಪಡೆದಿದ್ದು, ದನಕರು, ಆಡು, ಕುರಿ, ಕುದುರೆ, ಮೊಲ, ಜಿಂಕೆಗಳಿಗೆ ಬಹು ಪ್ರಿಯವಾದ ಹಾಗೂ ರುಚಿಕರವಾದ ಆಹಾರ. ಅತ್ಯಂತ ಆರೋಗ್ಯಕರ, ಶಕ್ತಿದಾಯಕ ಮೇವೂ ಹೌದು.

ಗರಿಕೆಯಲ್ಲಿ ಬಿಳಿ, ನೀಲಿ(ಕರಿ), ಪುರುಷ, ಸ್ತ್ರೀ ಪ್ರಕಾರಗಳಿವೆ. ಇವುಗಳಲ್ಲಿ ಕರಿ ಗರಿಕೆ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಗರಿಕೆಯು ರಕ್ತಪಿತ್ತ, ರಕ್ತದೋಷ, ರಕ್ತಹೀನತೆಗೆ ದಿವ್ಯ ಔಷಧಿ. ಅಲ್ಲದೆ ದೇಹದ ಯಾವುದೇ ಭಾಗದಲ್ಲಿಯ ರಕ್ತ ಸೋರುವಿಕೆಯನ್ನು ನಿಲ್ಲಿಸುವ ಅದ್ಭುತ ಗುಣ ಇದಕ್ಕಿದೆ. ಚರ್ಮವ್ಯಾಧಿ, ಮೂಲವ್ಯಾಧಿ, ದುಷ್ಟವ್ರಣ, ಪಾಂಡು, ಕ್ಷಯ ರೋಗ ನಿವಾಕರ ಹಾಗೂ ಶಕ್ತಿವರ್ಧಕ ಆಗಿದೆ. ಗರಿಕೆಯಲ್ಲಿ ಹತ್ತಕ್ಕಿಂತ ಹೆಚ್ಚು ಆಹಾರ ಸತ್ವ ಇದೆಯೆಂದು ಇತ್ತೀಚೆಗಿನ ಸಂಶೋಧನೆಯಿಂದ ತಿಳಿದು ಬಂದಿದೆ.

ವಿಶೇಷವಾಗಿ ಸ್ತ್ರೀಯರಿಗೆ ಅತ್ಯಂತ ಉಪಯುಕ್ತ ಔಷಧಿ. ಪದರ ರೋಗ, ಮುಟ್ಟಿನ ಹೊಟ್ಟೆನೋವು, ಅಕಾಲಿಕ ಋತುಸ್ರಾವ ಇತ್ಯಾದಿ ಹಲವು ಸ್ತ್ರೀ ರೋಗಗಳನ್ನು ಚಮತ್ಕಾರಿಕ ರೀತಿಯಲ್ಲಿ ಗುಣ ಪಡಿಸುತ್ತದೆಯಲ್ಲದೇ ದೇಹದಲ್ಲಿ ಕ್ಷಾರದ ಕೊರತೆಯನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ.

ನಾಗರ ಹಾವಿನ ಕಡಿತರ ವಿಷ ನಿವಾರಣೆಗಾಗಿಯೂ ಇದನ್ನು ಬಳಸಲಾಗುತ್ತದೆ. ಅಲ್ಲದೆ ಗರಿಕೆ ರಸ ಮತ್ತು ಜೇನು ತುಪ್ಪ ಒಂದೊಂದು ಚಮಚ ಬೆರೆಸಿ ನಿತ್ಯ ಮುಂಜಾನೆ ಹಸಿದ ಹೊಟ್ಟೆಯಲ್ಲಿ ಕುಡಿಯುವುದರಿಂದ ರಕ್ತಹೀನತೆ, ಪಾಂಡು, ಸ್ತ್ರೀಯರ ಮುಟ್ಟುನೋವು, ಸ್ರಾವ ನಿವಾರಣೆಯಾಗುವುದು.

ಪೌರಾಣಿಕ ಕಾರಣ

ಗಣಪತಿಯು ತನ್ನನ್ನು ಮದುವೆಯಾಗಬೇಕೆಂದು ಓರ್ವ ಅಪ್ಸರೆಯು ಧ್ಯಾನಮಗ್ನನಾಗಿದ್ದ ಗಣಪತಿಯ ಧ್ಯಾನಭಂಗ ಮಾಡಿದಳು. ಗಣಪತಿಯು ವಿವಾಹಕ್ಕೆ ನಿರಾಕರಿಸಿದ್ದರಿಂದ ಅಪ್ಸರೆಯು ಗಣಪತಿಗೆ ಶಾಪ ಕೊಟ್ಟಳು. ಇದರಿಂದ ಗಣಪತಿಯ ತಲೆಗೆ ದಾಹವಾಗತೊಡಗಿತು. ಈ ದಾಹವನ್ನು ಕಡಿಮೆ ಮಾಡಿಕೊಳ್ಳಲು ಗಣಪತಿಯು ತಲೆಯ ಮೇಲೆ ಗರಿಕೆಯನ್ನು ಧರಿಸಿದನು. ಈ ಕಾರಣಕ್ಕಾಗಿ ಗಣಪತಿಗೆ ಗರಿಕೆ ಅರ್ಪಿಸುತ್ತಾರೆ.

ಗರಿಕೆ ಹೇಗಿರಬೆಕು ಮತ್ತು ಎಷ್ಟಿರಬೇಕು?

ಗಣಪತಿಗೆ ಎಳೆಯ ಗರಿಕೆಗಳನ್ನು ಅರ್ಪಿಸಬೇಕು. ಎಳೆಯ ಗರಿಕೆಗೆ 'ಬಾಲತೃಣಮ್' ಎನ್ನುತ್ತಾರೆ. ಎಳೆಯ ಗರಿಕೆಗಳನ್ನು ಪೂಜೆಯಲ್ಲಿ ಇಡುವುದರಿಂದ ಅವುಗಳ ಸುಗಂಧವು ಹೆಚ್ಚು ಸಮಯ ಉಳಿಯುತ್ತದೆ. ಅವು ಹೆಚ್ಚು ಸಮಯ ತಾಜಾ ಆಗಿರಬೇಕೆಂದು ಅವುಗಳನ್ನು ನೀರಿನಲ್ಲಿ ಅದ್ದಿ ಅರ್ಪಿಸುತ್ತಾರೆ. ಇವುಗಳಿಂದ ಗಣಪತಿಯ ಪವಿತ್ರಕಗಳು ಹೆಚ್ಚು ಕಾಲ ಮೂರ್ತಿಯಲ್ಲಿ ಉಳಿಯುತ್ತವೆ.

ಬೆಸ ಸಂಖ್ಯೆಗಳು ಶಕ್ತಿಗೆ ಸಂಬಂಧಿಸಿರುತ್ತವೆ ಹಾಗಾಗಿ ಕನಿಷ್ಠ 3 ಅಥವಾ 5, 7, 21 ಅರ್ಪಿಸುತ್ತಾರೆ. ಬೆಸ ಸಂಖ್ಯೆಗಳಿಂದ ಮೂರ್ತಿಯಲ್ಲಿ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ಬರುತ್ತದೆ. ಗಣಪತಿಗೆ ವಿಶೇಷವಾಗಿ 21 ಗರಿಕೆಗಳನ್ನು ಅರ್ಪಿಸುತ್ತಾರೆ.

English summary
Durva is that which brings the distant pure spiritual particles (pavitraks) of Shri Ganesha closer. Durva are used in auspicious events and ritualistic worship of Deities, especially in the worship of Shri Ganesh.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia