ಪಿಯುಸಿ: ಪ್ರತಿ ಭಾನುವಾರ ವಿದ್ಯಾರ್ಥಿಗಳಿಗೆ ವಿಶೇಷ ಇಂಗ್ಲಿಷ್ ತರಗತಿ

Posted By:

ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ಭಾನುವಾರದಂದು ವಿಶೇಷ ಇಂಗ್ಲಿಷ್ ತರಗತಿಗಳನ್ನು ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಇಂಗ್ಲಿಷ್‌ ವ್ಯಾಕರಣ ಕಲಿಕೆ ಮತ್ತು ಸಂವಹನ ಕೌಶಲ ಉತ್ತಮಪಡಿಸಲು ಹಾಗೂ ಉನ್ನತ ಶಿಕ್ಷಣದ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ರಾಜ್ಯದ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕು ಎಂಬುದು ಈ ಯೋಜನೆಯ ಹಿಂದಿನ ಉದ್ದೇಶವಾಗಿದೆ.

ಇದೇ ತಿಂಗಳಿನಿಂದ ತರಗತಿಗಳು ಆರಂಭವಾಗಲಿದ್ದು 2018ರ ಜನವರಿಯವರೆಗೆ ಪ್ರತಿ ಭಾನುವಾರಗಳಂದು ತರಗತಿಗಳು ನಡೆಯಲಿವೆ. ಪ್ರಥಮ ಮತ್ತು ದ್ವಿತೀಯ ಪಿ.ಯು ವಿದ್ಯಾರ್ಥಿಗಳು ಹಾಜರಾಗಬೇಕು ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ.

ಪಿಯು ವಿದ್ಯಾರ್ಥಿಗಳಿಗೆ ವಿಶೇಷ ಇಂಗ್ಲಿಷ್ ತರಗತಿ

ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇಂಗ್ಲಿಷ್‌ ಕಲಿಸಲಾಗುವುದು. ವಿಶೇಷ ತರಗತಿಗೆ ಇಲಾಖೆಯೇ ವೇಳಾಪಟ್ಟಿ ಸಿದ್ಧಪಡಿಸುತ್ತದೆ. ಪ್ರತಿ ತರಬೇತಿ ಕೇಂದ್ರಕ್ಕೆ ಮೂವರು ಹಿರಿಯ ಉಪನ್ಯಾಸಕರನ್ನು ಸಂಯೋಜಕರನ್ನಾಗಿ ನಿಯೋಜಿಸುವ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಉಪ ನಿರ್ದೇಶಕರಿಗೆ (ಡಿ.ಡಿ ಪಿ.ಯು) ವಹಿಸಲಾಗಿದೆ.

90 ನಿಮಿಷಗಳ ತರಗತಿ

ಎರಡು ತರಗತಿ: ಪ್ರತಿ ಭಾನುವಾರ ತಲಾ 90 ನಿಮಿಷಗಳ ಎರಡು ತರಗತಿ ನಡೆಯಲಿವೆ. ಅದರಲ್ಲಿ ಒಂದು ಇಂಗ್ಲಿಷ್‌ ವ್ಯಾಕರಣ, ಮತ್ತೊಂದು ಅವಧಿಯಲ್ಲಿ ಸ್ಪೋಕನ್‌ ಇಂಗ್ಲಿಷ್‌ ಕಲಿಸಲಾಗುತ್ತದೆ.

ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಮಾಡಲಾಗುತ್ತಿದೆ. ಅಕಸ್ಮಾತ್‌ ವಿದ್ಯಾರ್ಥಿಗಳು ಗೈರು ಹಾಜರಾದರೆ ಆ ಕಾಲೇಜಿನ ಪ್ರಾಂಶುಪಾಲರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕಿರು ಪರೀಕ್ಷೆ

ವಿಶೇಷ ತರಗತಿಗಳ ಮೊದಲ ಮತ್ತು ಕೊನೆಯ ಭಾನುವಾರದಂದು ಕಿರು ಪರೀಕ್ಷೆ (25 ಅಥವಾ 50 ಅಂಕಗಳಿಗೆ) ನಡೆಸಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ಅಳೆಯಲಾಗುತ್ತದೆ.

ಕನ್ನಡ ಮಾಧ್ಯಮದ ಹಿನ್ನಲೆಯಿಂದ ಬಂದವರಿಗೆ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಈ ತರಗತಿಗಳಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
Karnataka Pre university board is organizing special English classes for first PU and second PU students on every Sunday.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia