ಎಸ್ ಎಸ್ ಎಲ್ ಸಿ ಪರೀಕ್ಷೆ: ಶಿಕ್ಷಕರಿಗೆ ತಲೆ ನೋವಾಗಿರುವ ಮಕ್ಕಳ ನೋಂದಣಿ ಕಾರ್ಯ

Posted By:

2018 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಮಾಹಿತಿಯನ್ನು ಸ್ಟೂಡೆಂಟ್ ಅಚೀವ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಂ (ಎಸ್ಎಟಿಎಸ್) ಮೂಲಕ ಆನ್ಲೈನ್ ನಲ್ಲಿ ಅಪ್ಲೋಡ್ ಮಾಡುವ ಕಾರ್ಯ ಆರಂಭದಲ್ಲೇ ಎಡವಿದೆ.

ಸಮಯ ಉಳಿತಾಯದ ಉದ್ದೇಶದಿಂದ ಮತ್ತು ನಿಖರ ಮಾಹಿತಿಗಾಗಿ ರೂಪಿಸಿದ ಈ ವ್ಯವಸ್ಥೆಯು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿರುವುದೇ ಈಗ ಸಮಸ್ಯೆ ಆಗಿದೆ.

ಎಸ್ಎಟಿಎಸ್ ನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಮಾಹಿತಿ

ಎಸ್ಎಟಿಎಸ್ ನಿಂದ ಸುಸ್ತಾದ ಶಿಕ್ಷಕರು

ತಾಂತ್ರಿಕ ಸಮಸ್ಯೆಯಿಂದಾಗಿ ಮಾಹಿತಿಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗದೆ ಶಿಕ್ಷಕರು ಹೈರಾಣಾಗಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶಾಲೆ ಸಿಬ್ಬಂದಿ ಅಹೋರಾತ್ರಿ ನಿದ್ದೆಗೆಟ್ಟು ಮಾಹಿತಿಗಳನ್ನು ವೆಬ್​ಸೈಟ್​ಗೆ ಅಪ್​ಲೋಡ್ ಮಾಡುತ್ತಿದ್ದು, ಸುಸೂತ್ರವಾಗಿ ನಡೆಯದೆ ಇಲಾಖೆ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಈ ಹಿಂದೆ ಮಾನ್ಯುಯಲ್ ಆಗಿ ಮಾಹಿತಿ ನೀಡಬೇಕಿತ್ತು, ಅದಕ್ಕಾಗಿ ವಿದ್ಯಾರ್ಥಿಗಳ ನೋಂದಣಿಗಾಗಿ ಮಂಡಳಿಯು ಶಾಲೆಗಳಿಗೆ ಪ್ರತಿ ಬಾರಿ ಒಎಂಆರ್ ಶೀಟ್​ಗಳನ್ನು ಅಕ್ಟೋಬರ್​ನಲ್ಲೇ ಕಳಿಸುತ್ತಿತ್ತು. ಶಾಲೆಯ ಸಿಬ್ಬಂದಿ ಮತ್ತು ಶಿಕ್ಷಕರು ತಕ್ಷಣವೇ ಆ ಶೀಟ್​ಗಳನ್ನು ಭರ್ತಿ ಮಾಡಿ ವಿದ್ಯಾರ್ಥಿ- ಪಾಲಕರ ಸಹಿಯೊಂದಿಗೆ ಮಂಡಳಿಗೆ ನವೆಂಬರ್ ಆರಂಭದಲ್ಲೇ ವಾಪಸ್ ಕಳಿಸುತ್ತಿದ್ದರು. ನಂತರ ಮಂಡಳಿಯು ನವೆಂಬರ್​ನಲ್ಲಿ ಕರಡು ನಾಮಿನಲ್ ರೋಲ್ ಸಿದ್ಧಪಡಿಸಿ ಶಾಲೆಗೆ ಕಳುಹಿಸಿ ಸೂಕ್ತ ತಿದ್ದುಪಡಿಗೆ ಅವಕಾಶ ನೀಡುತ್ತಿತ್ತು. ಆದರೆ ಈ ಬಾರಿ ಸ್ಟೂಡೆಂಟ್ ಟ್ರ್ಯಾಕಿಂಗ್ ವ್ಯವಸ್ಥೆಗಾಗಿ ರೂಪಿಸಲಾದ ಶಿಕ್ಷಣ ಇಲಾಖೆ ವೆಬ್​ಸೈಟ್​ನಿಂದಲೇ ಮಾಹಿತಿ ಪಡೆಯಲು ಮಂಡಳಿ ಮುಂದಾಗಿದೆ.

ವೆಬ್​ಸೈಟ್​ನಲ್ಲಿ ದಾಖಲಾದ ಮಾಹಿತಿಗೆ ಹೆಚ್ಚುವರಿ ಮಾಹಿತಿಯನ್ನು ವೆಬ್​ಸೈಟ್ ಮೂಲಕವೇ ದಾಖಲಿಸಿ ಅದರ ಆಧಾರದಲ್ಲಿ ನಾಮಿನಲ್ ರೋಲ್ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಈ ರೀತಿ ಪ್ರತಿ ವಿದ್ಯಾರ್ಥಿಯ ಹೆಚ್ಚುವರಿ ಮಾಹಿತಿ ಅಪ್​ಲೋಡ್ ಮಾಡಲು ಶಾಲೆ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ.

ಶಿಕ್ಷಕರು, ಮುಖ್ಯೋಪಾಧ್ಯಾಯರ ಗ್ರೂಪ್​ಗಳಲ್ಲಷ್ಟೆ ಹೇಗೆೆ ದಾಖಲೀಕರಣ ಮಾಡಬೇಕೆಂದು ಮಾಹಿತಿ ಹರಿದಾಡುತ್ತಿದ್ದು, ಯಾವುದೇ ಅಧಿಕೃತ ಜ್ಞಾಪನಾ ಪತ್ರ ಬಂದಿಲ್ಲ. ಇದರ ಆಧಾರ ಮೇಲೆ ಶಾಲೆಗಳಲ್ಲಿ ಮಾಹಿತಿಗಳನ್ನು ಅಪ್​ಲೋಡ್ ಮಾಡುವ ಕೆಲಸ ನಡೆಯುತ್ತಿದೆ. ಈ ಮಧ್ಯೆಯೇ ವೆಬ್​ಸೈಟ್​ನಲ್ಲಿ ದಿನಕ್ಕೊಂದು ಬದಲಾವಣೆ ಮಾಡುತ್ತಿದ್ದು, ಅದು ಶಾಲೆ ಮುಖ್ಯಸ್ಥರನ್ನು ಗೊಂದಲ ಹೆಚ್ಚಿಸಿದೆ.

ಯಾವ ಮಾಹಿತಿ ದಾಖಲೀಕರಣ?: ಅಭ್ಯರ್ಥಿಯ ವಿಳಾಸ, ಪಾಲಕರ ಮೊಬೈಲ್ ಸಂಖ್ಯೆ, ವಿದ್ಯಾರ್ಥಿಯ ಫೋಟೋ ಹಾಗೂ ಸಹಿಯನ್ನು ಅಪ್​ಲೋಡ್ ಮಾಡಬೇಕಾಗುತ್ತದೆ. ಮಾಹಿತಿ ಅಪ್​ಲೋಡ್ ಮಾಡಿದ ನಂತರ ಒಂದು ನಂಬರ್ ಜನರೇಟ್ ಆಗುತ್ತದೆ. ಆ ನಂಬರ್ ಬಳಸಿದರೆ ಒಂದು ಕರಡು ಡ್ರಾಫ್ಟ್ ಪಿಡಿಎಫ್ ರೂಪದಲ್ಲಿ ಸಿದ್ಧವಾಗುತ್ತದೆ. ಅದನ್ನು ಪ್ರಿಂಟ್ ಮಾಡಿಕೊಳ್ಳುವುದು ಶಾಲೆಗಳ ಕೆಲಸ.

ರಾತ್ರಿ ಹನ್ನೆರಡರವರೆಗೂ ಕೆಲಸ

ಮಾಹಿತಿ ಅಪ್ಲೋಡ್ ಮಾಡಲು ಬೆಳಗಿನ ಸಮಯದಲ್ಲಿ ವೆಬ್ಸೈಟ್ ಸಹಕರಿಸದೆ ಇರುವುದು ಶಿಕ್ಷಕರ ತಲೆನೋವಿಗೆ ಕಾರಣವಾಗಿದೆ.
ಸರ್ವರ್ ಬ್ಯುಸಿ ಬರುವುದರಿಂದ ರಾತ್ರಿವರೆಗೆ ಕಾಯುವುದು ಅನಿವಾರ್ಯ. ವೆಬ್​ಸೈಟ್​ನಲ್ಲಿ ಮಾಹಿತಿ ದಾಖಲಿಸುತ್ತಿದ್ದಂತೆ ಲಾಗ್​ಔಟ್ ಆಗಿಬಿಡುತ್ತಿದೆ. ಇಲ್ಲವಾದರೆ ಅರ್ಧತಾಸು ಬಫರ್ ಆಗುತ್ತಲೇ ಇರುತ್ತದೆ. ಈ ಕಾರಣಕ್ಕಾಗಿ ಶಾಲೆ ಸಿಬ್ಬಂದಿ ತಡರಾತ್ರಿ ವರೆಗೆ ಕಾದು 12 ಗಂಟೆ ನಂತರ ದಾಖಲೀಕರಣ ಮಾಡುತ್ತಿದ್ದಾರೆ.

ಬಹುತೇಕ ಶಾಲೆಗಳಲ್ಲಿ ಡಿಜಿಟಲ್ ಮೂಲಸೌಕರ್ಯವಿಲ್ಲದ ಹಿನ್ನೆಲೆಯಲ್ಲಿ ಸ್ನೇಹಿತರ ಮನೆ ಹಾಗೂ ಸೈಬರ್ ಕೇಂದ್ರಗಳಲ್ಲಿ ನಿದ್ದೆ ಕೆಡುವ ಪರಿಸ್ಥಿತಿ ನಿರ್ವಣವಾಗಿದೆ. ಸುಮಾರು 8.50 ಲಕ್ಷ ವಿದ್ಯಾರ್ಥಿಗಳ ನೋಂದಣಿಯಾಗಬೇಕಿದ್ದು, ಇನ್ನು ಅರ್ಧದಷ್ಟು ವಿದ್ಯಾರ್ಥಿಗಳ ನೋಂದಣಿಯಾಗಿಲ್ಲ.

ಈ ಮಧ್ಯೆ ಕೆಲ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದು, ಹಣ ಕೀಳುವ ದಂಧೆ ಮಾಡಿಕೊಂಡಿದ್ದಾರೆ. ನಾವು ವಿದ್ಯಾರ್ಥಿಗಳ ಮಾಹಿತಿ ದಾಖಲಿಸುತ್ತೇವೆ ಎಂದು ಶಾಲೆ ಸಿಬ್ಬಂದಿಯಿಂದ ಹಣ ಪಡೆಯುತ್ತಿರುವುದು ಸಹ ಬೆಳಕಿಗೆ ಬಂದಿದೆ.

English summary
Glitches in the server of the Students Achievement Tracking System (SATS) while students details were being uploaded for the SSLC examinations had schools, and associations in a tizzy.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia