ರಾಜ್ಯ ಸರ್ಕಾರದ ಎವಿಜಿಸಿ ನೀತಿಯಿಂದ 15000 ಉದ್ಯೋಗ

Posted By:

ಡಿಜಿಟಲ್ ಮಾಧ್ಯಮ ಮತ್ತು ಅನಿಮೇಷನ್ ಕ್ಷೇತ್ರದಲ್ಲಿನ ಬೆಳವಣಿಗೆಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಅನಿಮೇಷನ್‌, ವಿಷುವಲ್‌ ಎಫೆಕ್ಟ್ಸ್‌, ಕಾಮಿಕ್ಸ್‌ ಅಂಡ್‌ ಗೇಮಿಂಗ್‌ (ಎವಿಜಿಸಿ) ನೀತಿ 2017' ನ್ನು ಪ್ರಕಟಿಸಿದೆ.

ಎವಿಜಿಸಿ ನೀತಿಯಿಂದಾಗಿ ರಾಜ್ಯದಲ್ಲಿ ಅನೇಕ ಉದ್ಯಮಗಳು ಮತ್ತು ಉದ್ಯೋಗಗಳು ಸೃಷ್ಟಿಯಾಗಲಿದ್ದು, ಇದಕ್ಕಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ತರಬೇತಿ ಸಂಸ್ಥೆಗಳನ್ನು ಸಹ ಸ್ಥಾಪಿಸಲಾಗುವುದು. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಈ ನೀತಿ ಸಹಕಾರಿಯಾಗಲಿದೆ ಎಂದು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಎವಿಜಿಸಿ ಕಂಪನಿಗಳಿಗೆ ಅಧಿಕ ಲಾಭ

ಈ ನೂತನ ನೀತಿಯಿಂದಾಗಿ ರಾಜ್ಯದ 100 ಎವಿಜಿಸಿ ಕಂಪೆನಿಗಳ ಅಭಿವೃದ್ಧಿ ಕಾರಣವಾಗಲಿದೆ. ಎವಿಜಿಸಿಗಳು ಜಾಗತಿಕವಾಗಿ ಪೈಪೋಟಿ ನೀಡುವುದರಿಂದ ಐಟಿ ಸಾಫ್ಟ್‌ವೇರ್‌ನಂತೆ, ಎವಿಜಿಸಿ ಉತ್ಪನ್ನಗಳನ್ನು ರಫ್ತು ಮಾಡುವುದು, ಸೇವೆ ಒದಗಿಸುವುದರಿಂದ ಬರುವ ಆದಾಯದಲ್ಲಿ ಶೇ75ರಷ್ಟು ಪಾಲನ್ನು ಕಂಪೆನಿಗಳೇ ಇಟ್ಟುಕೊಳ್ಳಬಹುದು ಎಂದು ವಾಗ್ದಾನ ನೀಡುವುದರ ಜೊತೆಗೆ 15,000 ಹೊಸ ಉದ್ಯೋಗಗಳು ಸೃಷ್ಟಿ ಆಗಲಿವೆ ಎಂದು ಅವರು ಹೇಳಿದ್ದಾರೆ.

ಉದ್ಯೋಗ ಸೃಷ್ಟಿಸಲಿರುವ ಎವಿಜಿಸಿ ನೀತಿ

ಎವಿಜಿಸಿ ಕಾರ್ಯ ವೈಖರಿ

ಜಾಗತಿಕವಾಗಿ ವಿಶಿಷ್ಟ ಮತ್ತು ಸೃಜನಶೀಲ ಅನಿಮೇಷನ್‌, ಗೇಮ್‌ಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಸರ್ಕಾರ ಅನುದಾನ ನೀಡಲಿದೆ. ಅನಿಮೇಷನ್‌ ಫಿಲಂ, ಎಪಿಸೋಡ್‌ಗಳು, ವಿಎಫ್‌ಎಕ್ಸ್ (ಚಲನಚಿತ್ರಗಳ ವಿಷುವಲ್‌ ಎಫೆಕ್ಟ್ಸ್‌) ಪ್ರಾಜೆಕ್ಟ್‌ಗಳು ಮತ್ತು ಗೇಮಿಂಗ್‌ಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ.

ರಾಜ್ಯದಲ್ಲಿ ಎವಿಜಿಸಿ ಫಿನಿಷಿಂಗ್‌ ಸ್ಕೂಲ್‌ ಸ್ಥಾಪಿಸಲಾಗುತ್ತಿದ್ದು, ಇದರಿಂದ ಈ ಉದ್ಯಮದತ್ತ ಪ್ರತಿಭಾವಂತರನ್ನು ಸೆಳೆಯಬಹುದು. ರಾಜ್ಯದಲ್ಲಿರುವ 50 ಕ್ಕೂ ಹೆಚ್ಚು ಲಲಿತ ಕಲಾ ಶಾಲೆಗಳಿಗೂ ಡಿಜಿಟಲ್‌ ಕಲಾ ಕೇಂದ್ರ ಕಾರ್ಯಕ್ರಮ ವಿಸ್ತರಿಸಲಾಗುವುದು.

ಹೊಸದಾಗಿ ಎವಿಜಿಸಿ ಉದ್ಯಮ ಶುರುಮಾಡುವವರಿಗಾಗಿ ಸುಮಾರು 20 ಕೋಟಿ ರೂಗಳ ಎವಿಜಿಸಿ ಉದ್ಯಮ ನಿಧಿ ಸ್ಥಾಪನೆ ಕೂಡ ಮಾಡಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರು ಡಿಜಿಟಲ್ ಮೀಡಿಯಾ ಬಳಕೆಯಲ್ಲಿ ಈಗಾಗಲೇ ಸಾಕಷ್ಟು ಮುಂದೆ ಸಾಗಿದೆ. ಭಾರತದ ಚಿತ್ರಗಳು ಸೇರಿದಂತೆ ಹಲವು ಹಾಲಿವುಡ್‌ ಸಿನಿಮಾಗಳಿಗೆ ವಿಷುವಲ್‌ ಎಫೆಕ್ಟ್ಸ್‌ ಬೆಂಗಳೂರಿನಲ್ಲೇ ನಡೆಯುತ್ತಿರುವುದು ವಿಶೇಷ, ಇದರ ಜೊತೆಗೆ ಡಿಜಿಟಲ್ ಮೀಡಿಯಾ ಸಿಟಿ ಸ್ಥಾಪನೆಯಾದರೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಹೇಳಿದರು.

ಡಿಜಿಟಲ್ ಮೀಡಿಯಾ ಸಿಟಿ

ಡಿಜಿಟಲ್‌ ಪೋಸ್ಟ್‌ ಪ್ರೊಡಕ್ಷನ್‌ ಲ್ಯಾಬ್‌ ದು. ಎವಿಜಿಸಿ ಇನ್‌ಕ್ಯುಬೇಟರ್‌, ಅನಿಮೇಷನ್‌ ಮತ್ತು ಗೇಮ್‌ ಅಭಿವೃದ್ಧಿ ನವೋದ್ಯಮಗಳು ಒಟ್ಟಿಗೆ ಕೆಲಸ ಮಾಡುವುದಕ್ಕೆ ಡಿಜಿಟಲ್ ಮೀಡಿಯಾ ಸಿಟಿ ಸ್ಥಾಪಿಸಲಾಗುತ್ತಿದ್ದು, ಇಲ್ಲಿನ ಸೌಲಭ್ಯಗಳನ್ನು 'ಪಾವತಿಸಿ ಬಳಸಿ' ರೂಪದಲ್ಲಿ ಬಾಡಿಗೆ ನೀಡಿ ಬಳಸಿಕೊಳ್ಳುವ ಅವಕಾಶ ಕಲ್ಪಿಸಬಹುದು ಬಹುದಾಗಿದೆ.

ಡಿಜಿಟಲ್ ಮೀಡಿಯಾ ಸಿಟಿ ಸ್ಥಾಪಿಸುವ ಮೂಲಕ ಹೊರದೇಶದವರನ್ನು ಸೆಳೆಯಬಹುದು. ಇತರ ದೇಶಗಳ ಕಾಮಿಕ್ಸ್‌, ಫಿಲಂ, ಗೇಮಿಂಗ್‌, ವಿಷುವಲ್‌ ಎಫೆಕ್ಟ್ಸ್‌ ನಿರ್ಮಾಣ ಸಂಸ್ಥೆಗಳನ್ನು ಸೆಳೆಯಬಹುದು. ಅವರು ಇಲ್ಲಿಗೆ ಬಂದು ತಮ್ಮ ಕೇಂದ್ರಗಳನ್ನು ಸ್ಥಾಪಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

English summary
State Government new policy on The Animation, Visual effects, Gaming and Comic sector (AVGC)to develop digital market in Karnataka.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia