2018 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಮಾಹಿತಿಯನ್ನು ಸ್ಟೂಡೆಂಟ್ ಅಚೀವ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಂ (ಎಸ್ಎಟಿಎಸ್) ಮೂಲಕ ಆನ್ಲೈನ್ ನಲ್ಲಿ ಪಡೆಯಲು ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ.
ಹಣವಿಲ್ಲದೆ ಸೊರಗಿದ 2 ರೂ. ಪ್ರೋತ್ಸಾಹ ಧನ ಯೋಜನೆ
ಮಾನ್ಯುಯಲ್ ಕೆಲಸ ಕಡಿಮೆ ಮಾಡುವ ಉದ್ದೇಶದಿಂದ ಎಸ್ಎಟಿಎಸ್ ನಿಂದ ಮಾಹಿತಿ ಪಡೆಯಲಾಗುತ್ತಿದೆ. ಇದರಲ್ಲೇ ಶೇ.75 ಮಾಹಿತಿ ಲಭ್ಯವಿರುವುದರಿಂದ ಉಳಿದ ಮಾಹಿತಿಯನ್ನು ಮಾತ್ರ ಶಾಲಾ ಆಡಳಿತ ಮಂಡಳಿ ಭರ್ತಿ ಮಾಡಬೇಕಿದೆ ಎಂದು ರಾಜ್ಯ ಪ್ರೌಢಶಿಕ್ಷಣ ಮಂಡಳಿ ನಿರ್ದೇಶಕಿ ವಿ ಸುಮಂಗಲ ಹೇಳಿದ್ದಾರೆ.
ಈವರೆಗೂ ಒಎಂಆರ್ ಮೂಲಕ ಯಾವುದೇ ತಪ್ಪು ಆಗದಂತೆ ಭರ್ತಿ ಮಾಡಿ ಮಂಡಳಿಗೆ ಕಳುಹಿಸಬೇಕಾಗಿತ್ತು. ಇದರಿಂದ ಮಂಡಳಿ ಮತ್ತೊಮ್ಮೆ ಪರಿಶೀಲಿಸಿ ಡೇಟಾ ಸಂಗ್ರಹಿಸಿ ಅನಂತರ ಪ್ರವೇಶಪತ್ರ ಮತ್ತು ಒಎಂಆರ್ ಮುದ್ರಣಕ್ಕೆ ಮುಂದಾಗುತ್ತಿತ್ತು. ಇದರಿಂದ ಹೆಚ್ಚು ಸಮಯ, ವೆಚ್ಚ ಕೂಡ ಹೆಚ್ಚಾಗುತಿತ್ತು.
ಎಸ್ಎಟಿಎಸ್ ನಿಂದ ಮಾಹಿತಿ ಪಡೆಯುವುದರಿಂದ ಸಮಯದ ಉಳಿತಾಯದ ಜೊತೆಗೆ ಶಾಲಾ ಸಿಬ್ಬಂದಿ ಮತ್ತು ಮಂಡಳಿಯ ವೆಚ್ಚ ಕೂಡ ತಗ್ಗಲಿದೆ.
ಎಸ್ಎಟಿಎಸ್ ನಲ್ಲಿ ವಿದ್ಯಾರ್ಥಿಗಳ ಮಾಹಿತಿಯಿದ್ದು, ಲಾಗಿನ್ ಮಾಡಲು ಶಾಲಾ ಮುಖ್ಯೋಪಾಧ್ಯಾಯರಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದ್ದೆ. ಆ ಮೂಲಕ ಅವರು ವಿದ್ಯಾರ್ಥಿ, ಪಾಲಕರ ಹೆಸರು, ಜಾತಿ, ಮಾಧ್ಯಮ ಸೇರಿ 22 ಅಂಶ ಪರಿಶೀಲಿಸಬೇಕು.
ಒಂದು ವೇಳೆ ಮಾಹಿತಿ ತುಂಬುವಾಗ ಏನಾದರು ತಪ್ಪುಗಳಾದಲ್ಲಿ ತಿದ್ದಲು ಕೂಡ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳ ಪೂರ್ಣ ಮಾಹಿತಿ ಅಪ್ಡೇಟ್ ಮಾಡಿ ಪರಿಶೀಲನೆ ನಡೆಸಿದ ನಂತರ ಮಂಡಳಿಗೆ ಆನ್ಲೈನ್ ಮೂಲಕ ಕಳುಹಿಸಬೇಕು. ಈ ಮಾಹಿತಿ ಆಧಾರದ ಮೇಲೆ ವಿದ್ಯಾರ್ಥಿಗಳ ಒಎಂಆರ್ ಮತ್ತು ಪ್ರವೇಶಪತ್ರ ಮುದ್ರಣ ಮಾಡಲಾಗುತ್ತದೆ.
ಒಎಂಆರ್ ಮತ್ತು ಪ್ರವೇಶಪತ್ ಮಾಡುವ ಮೊದಲು ಮತ್ತೊಮ್ಮೆ ಪರಿಶೀಲನೆಗೆ ಕಳುಹಿಸಲಾಗುತ್ತದೆ. ಪರಿಶೀಲನೆ ಬಳಿಕ ಒಎಂಆರ್ ಮತ್ತು ಪ್ರವೇಶಪತ್ರಗಳನ್ನು ಮುದ್ರಿಸಲಾಗುತ್ತದೆ.
ಆನ್ಲೈನ್ ಹೊರತಾಗಿ ಶಾಲೆಯವರು ವಿದ್ಯಾರ್ಥಿಗಳ ಸಹಿ ಹಾಗು ಫೋಟೋ ವನ್ನು ಮಂಡಳಿಗೆ ಕಳುಹಿಸಿಕೊಡಬೇಕಾಗುತ್ತದೆ.
ಸ್ಟೂಡೆಂಟ್ ಅಚೀವ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಂ (ಎಸ್ಎಟಿಎಸ್) ಮೂಲಕ ವಿದ್ಯಾರ್ಥಿಗಳ ಮಾಹಿತಿ ಪಡೆಯುವ ನಿರ್ಧಾರದಿಂದ ಶಾಲಾ ಆಡಳಿತ ಮಂಡಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.