ಗೃಹ ಇಲಾಖೆಯಲ್ಲಿನ 30 ಸಾವಿರ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ನಿರ್ಧಾರ

Posted By:

ಗೃಹ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 30 ಸಾವಿರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಯುವಜನತೆಗೆ ನೌಕರಿ ಭಾಗ್ಯ ಕರುಣಿಸಲು ಮುಂದಾಗಿರುವ ಸರ್ಕಾರ ಇಲಾಖೆಯ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದೆ.

30 ಸಾವಿರ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ನಿರ್ಧಾರ

ಗೃಹ ಇಲಾಖೆಯ ಅಧೀನದಲ್ಲಿ ಬರುವ ಪೊಲೀಸ್, ಕಾರಾಗೃಹ, ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕ ದಳದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ. ಏಳೆಂಟು ವರ್ಷಗಳ ನಂತರ ಪೊಲೀಸ್ ಇಲಾಖೆಯಲ್ಲಿ ಕಳೆದ ವರ್ಷ ಸುಮಾರು 10 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆಯಾದರೂ ಪೂರ್ಣ ಪ್ರಮಾಣದ ನೇಮಕಾತಿ ಸಾಧ್ಯವಾಗಿಲ್ಲ. ಅಗ್ನಿಶಾಮಕ, ಕಾರಾಗೃಹ, ಗೃಹ ರಕ್ಷಕ ದಳದಲ್ಲಿ ನೇಮಕಾತಿಯೇ ನಡೆದಿಲ್ಲ.

ದಿನೇದಿನೇ ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆ, ಮಾದಕ ವಸ್ತು ಮಾರಾಟ, ಆರ್ಥಿಕ ಅಪರಾಧ , ಮಾನವ ಕಳ್ಳಸಾಗಣೆ ಸೇರಿದಂತೆ ರಾಜ್ಯದಲ್ಲಿ ಅಪರಾಧಗಳನ್ನು ನಿಯಂತ್ರಿಸಲು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿ ವೃತ್ತಿಪರತೆ ಕಾಣೆಯಾಗಿರುವುದರಿಂದ ಖಾಲಿ ಹುದ್ದೆ ಭರ್ತಿಗೆ ಸರ್ಕಾರ ಮುಂದಾಗಿದೆ.

ಗೃಹ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ನಾಲ್ಕು ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಕಡತ ಸಿದ್ಧಪಡಿಸುವಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ. ಇದೇ ವಾರ ಸಭೆ ನಡೆಸಿ ಆರ್ಥಿಕ ಇಲಾಖೆಗೆ ಕಡತ ಮಂಡಿಸಿ ಒಪ್ಪಿಗೆ ಪಡೆದು ಸಂಪುಟದ ಅನುಮೋದನೆ ಬಳಿಕ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.

ಫೆಬ್ರವರಿ ಅಥವಾ ಮಾರ್ಚ್​ನಲ್ಲಿ ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಅದಕ್ಕೂ ಮುನ್ನ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವುದು ಸರ್ಕಾರದ ಉದ್ದೇಶ.

ಸಾವಿರಾರು ಹುದ್ದೆಗಳ ಕೊರತೆಯಿಂದಾಗಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವ ಉದ್ದೇಶ ಸಾಕಾರವಾಗುತ್ತಿಲ್ಲ. ಹೀಗಾಗಿಯೇ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿ ಇಲಾಖೆಗಳಿಗೆ ಶಕ್ತಿ ತುಂಬಲು ಸರ್ಕಾರ ನಿರ್ಧರಿಸಿದೆ.

English summary
Karnataka State Government decided to fill nearly 30 thousand posts under ministry of home affairs before the elections.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia