ಎನ್ಇಟಿ ಮತ್ತು ಎಸ್ಎಲ್ಇಟಿ ಪರೀಕ್ಷೆಯಲ್ಲಿ ಬದಲಾವಣೆ ತಂದ ಯುಜಿಸಿ

Posted By:

ಸಹಾಯಕ ಪ್ರಾಧ್ಯಾಪಕರ ಅರ್ಹತೆಗೆ ನಡೆಸಲಾಗುವ  ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಮತ್ತು ರಾಜ್ಯ ಅರ್ಹತಾ ಪರೀಕ್ಷೆಯ (ಎಸ್‌ಎಲ್‌ಇಟಿ) ಫಲಿತಾಂಶ ಘೋಷಣಾ ವಿಧಾನ ಮತ್ತು ಮಾನದಂಡವನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಬದಲಿಸಿದೆ.

ಕೇರಳ ಹೈಕೋರ್ಟ್‌ ತೀರ್ಪನ್ನು ಆಧರಿಸಿ ಯುಜಿಸಿಯು ಎನ್ಇಟಿ ಪರೀಕ್ಷೆಯಲ್ಲಿನ ತೇರ್ಗಡೆಗೆ ಇದ್ದ ಪ್ರಮಾಣವನ್ನು ಶೇ 15ರಿಂದ ಶೇ 6ಕ್ಕೆ ಇಳಿಸಿದೆ. ಅಲ್ಲದೇ ಅಭ್ಯರ್ಥಿಗಳ ಗಳಿಸಬೇಕಿದ್ದ ಕನಿಷ್ಠ ಅಂಕಗಳಲ್ಲೂ ಹಲವು ಬದಲಾವಣೆಗಳನ್ನು ತಂದಿದೆ. ಮುಂಬರುವ ಎನ್‌ಇಟಿ ಮತ್ತು ರಾಜ್ಯಗಳು ನಡೆಸುವ ಎಸ್‌ಎಲ್‌ಇಟಿಗಳಿಗೆ ಈ ನಿಯಮವೇ ಅನ್ವಯವಾಗಲಿದೆ ಎಂದು ತಿಳಿಸಿದೆ.

ಅಭ್ಯರ್ಥಿಗಳ ಆಯ್ಕೆ

ಅತೀ ಹೆಚ್ಚು ಅಂಕ ಪಡೆದವರಲ್ಲಿ ಶೇ 6ರಷ್ಟು ಅಭ್ಯರ್ಥಿಗಳನ್ನು (ಮೀಸಲಾತಿ ಅನ್ವಯ- ಸಾಮಾನ್ಯ ಪ್ರವರ್ಗಕ್ಕೆ ಶೇ 47.50, ಒಬಿಸಿ ಶೇ 27, ಪರಿಶಿಷ್ಟ ಜಾತಿ ಶೇ 15, ಪರಿಶಿಷ್ಟ ಪಂಗಡ ಶೇ 7.5 ಮತ್ತು ಅಂಗವಿಕಲರು ಶೇ 3) ಅರ್ಹರೆಂದು ಘೋಷಿಸಬೇಕು ಎಂದು ಅದು ಮೇ 5ರಂದು ತೆಲಂಗಾಣ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ. ಈ ಹಿಂದೆ ಶೇ.15ರಷ್ಟು ಅಭ್ಯರ್ಥಿಗಳನ್ನು ಆಯ್ಕೆಮಾಡಿಕೊಳ್ಳಲಾಗುತ್ತಿತ್ತು.

ಎನ್ಇಟಿ ಮತ್ತು ಎಸ್ಎಲ್ಇಟಿ ಪರೀಕ್ಷೆಯಲ್ಲಿ ಬದಲಾವಣೆ

ಸರಾಸರಿ ಅಂಕಗಳಲ್ಲಿ ಬದಲಾವಣೆ

  • ಸಾಮಾನ್ಯ ಪ್ರವರ್ಗದ ಅಭ್ಯರ್ಥಿಗಳಿಗೆ ಮೂರು ಪತ್ರಿಕೆಗಳಲ್ಲಿ ಸರಾಸರಿ ಕನಿಷ್ಠ ಶೇ 40 ರಷ್ಟು ಅಂಕ (ಈ ಮೊದಲು ಪತ್ರಿಕೆ-1, ಪತ್ರಿಕೆ-2ಕ್ಕೆ ತಲಾ ಶೇ 40 ಹಾಗೂ ಪತ್ರಿಕೆ-3ಕ್ಕೆ ಶೇ 50ರಷ್ಟು ಅಂಕ ನಿಗದಿಯಾಗಿತ್ತು)
  • ಒಬಿಸಿ, ಪರಿಶಿಷ್ಟ ಅಭ್ಯರ್ಥಿಗಳಿಗೆ ಮೂರು ಪತ್ರಿಕೆಗಳಿಗೆ ಸರಾಸರಿ ಕನಿಷ್ಠ ಶೇ 35ರಷ್ಟು (ಈ ಮೊದಲು ಪತ್ರಿಕೆ-1, ಪತ್ರಿಕೆ-2ಕ್ಕೆ ತಲಾ ಶೇ 35 ಹಾಗೂ ಪತ್ರಿಕೆ-3ಕ್ಕೆ ಶೇ 40 ಅಂಕ ನಿಗದಿಯಾಗಿತ್ತು) ಅಂಕವನ್ನು ಯುಜಿಸಿ ನಿಗದಿಪಡಿಸಿದೆ.

ಕೇರಳ ಹೈಕೋರ್ಟ್‌ ತೀರ್ಪು

ಸಾಮಾನ್ಯ ಪ್ರವರ್ಗದ ಅಭ್ಯರ್ಥಿಗಳು ಮೀಸಲು ಅಭ್ಯರ್ಥಿಗಳಿಗಿಂತ ಹೆಚ್ಚು ಅಂಕ ಗಳಿಸಿದ್ದರೂ ಅವರನ್ನು ಅವಕಾಶ ವಂಚಿತರಾಗುವಂತೆ ಮಾಡಿರುವ ಯುಜಿಸಿಯ ಅರ್ಹತಾ ನಿಯಮಗಳು ಅಸಾಂವಿಧಾನಿಕ ಎಂದು ಕೇರಳ ಹೈಕೋರ್ಟ್‌ 2016ರ ಡಿಸೆಂಬರ್‌ನಲ್ಲಿ ನೀಡಿರುವ ತೀರ್ಪಿನಲ್ಲಿ ಹೇಳಿತ್ತು.

ಮೀಸಲು ಪ್ರವರ್ಗಗಳ ಅಭ್ಯರ್ಥಿಗಳಿಗೆ ಕಡಿಮೆ ಕನಿಷ್ಠ ಅಂಕ ನಿಗದಿ ಮಾಡಿರುವುದು ಸೂಕ್ತವಲ್ಲ. ಇದು ಸಾಮಾನ್ಯ ವರ್ಗದ ಅಭ್ಯರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಲ್ಲದೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕಿನ (ಸರ್ಕಾರಿ ಉದ್ಯೋಗ ಮತ್ತು ನೇಮಕಾತಿ ವಿಷಯದಲ್ಲಿ ಎಲ್ಲ ನಾಗರಿಕರಿಗೂ ಸಮಾನ ಅವಕಾಶ- ಕಲಂ 16(1)) ಉಲ್ಲಂಘನೆ ಯಾಗುತ್ತದೆ ಎಂದು ಕೋರ್ಟ್‌ ವ್ಯಾಖ್ಯಾನಿಸಿತ್ತು.

ಸಾಮಾನ್ಯ ವರ್ಗದ ಪ್ರತಿಭಾವಂತ ಅಭ್ಯರ್ಥಿಗಳ ಹಿತಾಸಕ್ತಿಯನ್ನೂ ಗಮನದಲ್ಲಿರಿಸಿಕೊಂಡು ಮುಂದಿನ ಎನ್‌ಇಟಿ ಅರ್ಹತಾ ನಿಯಮದಲ್ಲಿ ಸೂಕ್ತ ಬದಲಾವಣೆ ತರಲು ಯುಜಿಸಿ ಸ್ವತಂತ್ರವಾಗಿದೆ ಎಂದು ಅದು ತಿಳಿಸಿತ್ತು. ಕೇರಳದ ನಾಯರ್‌ ಸರ್ವಿಸ್‌ ಸೊಸೈಟಿಯು ಎನ್‌ಇಟಿ ಅರ್ಹತಾ ನಿಯಮವನ್ನು ಪ್ರಶ್ನಿಸಿತ್ತು.

ಎನ್‌ಇಟಿ/ಎಸ್‌ಎಲ್‌ಇಟಿ 

ಸರ್ಕಾರಿ, ಅನುದಾನಿತ ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತಾ ಪರೀಕ್ಷೆ ಎನ್‌ಇಟಿ ಅಥವಾ ಎಸ್‌ಎಲ್‌ಇಟಿ ತೇರ್ಗಡೆಯಾಗಿರಬೇಕು. ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮೂಲಕ ವರ್ಷಕ್ಕೆ ಎರಡು ಬಾರಿ ಎನ್‌ಇಟಿ ನಡೆಯುತ್ತದೆ. ಅಲ್ಲದೆ ಕೆಲ ರಾಜ್ಯಗಳು ವರ್ಷ, ಎರಡು ವರ್ಷಕ್ಕೊಮ್ಮೆ ಎಸ್‌ಎಲ್‌ಇಟಿ (ಸ್ಲೆಟ್‌) ನಡೆಸುತ್ತವೆ. ಆರು ತಿಂಗಳಿಗೊಮ್ಮೆ ನಡೆಯುವ ಎನ್‌ಇಟಿಯನ್ನು ದೇಶದಾದ್ಯಂತ ಸರಾಸರಿ 7 ಲಕ್ಷ ಅಭ್ಯರ್ಥಿಗಳು ಬರೆಯುತ್ತಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಸ್ಲೆಟ್‌ ಪರೀಕ್ಷೆಗೂ ಲಕ್ಷಾಂತರ ಅಭ್ಯರ್ಥಿಗಳು ಹಾಜರಾಗುತ್ತಿದ್ದಾರೆ.

English summary
UGC has decreased passing percentage of NET exam from 15 percent to 6 percent and also made changes in minimum pass scoring marks

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia