ಯುಜಿಸಿ ಎಚ್ಚರಿಕೆ: ದೇಶದಲ್ಲಿವೆ 23 ನಕಲಿ ಶಿಕ್ಷಣ ಸಂಸ್ಥೆಗಳು

Posted By:

ದೇಶಾದ್ಯಂತ ಇರುವ ನಕಲಿ ಕಾಲೇಜುಗಳನ್ನು ಗುರುತಿಸಿ ಯುಜಿಸಿ ಪಟ್ಟಿ ಮಾಡಿದೆ. ವಿಶ್ವವಿದ್ಯಾಲಯಗಳ ಅನುದಾನ ಆಯೋಗ(ಯುಜಿಸಿ) ಹಾಗೂ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಅಧಿಕೃತ ವೆಬ್‌ಸೈಟ್‌ಗಳಲ್ಲಿ ನಕಲಿ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಪ್ರಕಟಿಸಿದೆ.

ಪರವಾನಗಿ ಪಡೆಯದೆ ಇಂಜಿನಿಯರಿಂಗ್‌ ಸೇರಿದಂತೆ ಇತರೆ ತಾಂತ್ರಿಕ ಶಿಕ್ಷಣ ನೀಡುತ್ತಿರುವ 279 ನಕಲಿ ಸಂಸ್ಥೆಗಳನ್ನು ಗುರುತಿಸಲಾಗಿದೆ. ಈ ಮೂಲಕ ತಾಂತ್ರಿಕ ಶಿಕ್ಷಣ ಮತ್ತು ದೂರ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ಇನ್ನು ಮುಂದೆ ಎಚ್ಚರದಿಂದ ಪ್ರವೇಶಾತಿ ಪಡೆಯಬೇಕಾಗಿ ಸೂಚಿಸಿದೆ.

ಯುಜಿಸಿ ಗುರುತಿಸಿರುವ ಶಿಕ್ಷಣ ಸಂಸ್ಥೆಗಳು ಪದವಿ ಪ್ರಧಾನ ಮಾಡುವ ಯಾವುದೇ ಅರ್ಹತೆಯನ್ನು ಹೊಂದಿರುವುದಿಲ್ಲ. ಇಂಥ ಸಂಸ್ಥೆಗಳು ನೀಡುವ ಪ್ರಮಾಣ ಪತ್ರಗಳಿಗೆ ಯಾವುದೇ ಮೌಲ್ಯ ಕೂಡ ಇರುವುದಿಲ್ಲ ಅಷ್ಟೇ ಅಲ್ಲದೇ ಸರ್ಕಾರದಿಂದ ಇದಕ್ಕೆ ಯಾವುದೇ ಮಾನ್ಯತೆಯು ಇರುವುದಿಲ್ಲ.

ಸೇರುವ ಮುನ್ನ ಎಚ್ಚರ

ಸದ್ಯ ಬಿಡುಗಡೆಯಾಗಿರುವ ಪಟ್ಟಿಯ ಮಾಹಿತಿಯಂತೆ ದೇಶಾದ್ಯಂತ ಒಟ್ಟು 23 ನಕಲಿ ವಿಶ್ವವಿದ್ಯಾಲಯಗಳಿದ್ದು ರಾಜಧಾನಿ ನವದೆಹಲಿಯೊಂದರಲ್ಲೇ 7 ನಕಲಿ ವಿವಿಗಳಿವೆ. ಇಂಜಿನಿಯರಿಂಗ್ ಸೇರಿದಂತೆ ಇತರೆ ತಾಂತ್ರಿಕ ಕೋರ್ಸ್‌ಗಳನ್ನು ನೀಡುತ್ತಿರುವ 279 ನಕಲಿ ಸಂಸ್ಥೆಗಳ ಪೈಕಿ 66 ಕಾಲೇಜುಗಳು ದೆಹಲಿಯಲ್ಲಿವೆ. ಅಲ್ಲದೇ ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದಲ್ಲೂ ಅತಿ ಹೆಚ್ಚು ನಕಲಿ ಶಿಕ್ಷಣ ಸಂಸ್ಥೆಗಳು ಪತ್ತೆಯಾಗಿವೆ.

ಸೂಕ್ತ ಕ್ರಮ

ದೇಶಾದ್ಯಂತ ಇರುವ ನಕಲಿ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಈಗಾಗಲೇ ನಿಗದಿತ ರಾಜ್ಯಗಳಿಗೆ ಕಳುಹಿಸಲಾಗಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ. ನಕಲಿ ವಿವಿಗಳ ಪಟ್ಟಿ ಇದೇ ಮೊದಲೇನಲ್ಲ, ಈ ಹಿಂದೆ ಕೂಡ ನಕಲಿ ವಿಶ್ವವಿದ್ಯಾಲಯಗಳ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.

ವಿದ್ಯಾರ್ಥಿಗಳಿಗೆ ಎಚ್ಚರ

ಯುಜಿಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿರುವ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯದಂತೆ ಎಚ್ಚರ ವಹಿಸುವಂತೆ ತಿಳಿಸುವ ಸಾರ್ವಜನಿಕ ಪ್ರಕಟಣೆಯನ್ನೂ ನೀಡಲಾಗಿದೆ ಎಂದು ವರದಿಯಾಗಿದೆ. ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಯಾಸ ನೀಡುವ ಜಾಹೀರಾತುಗಳಿಗೆ ಮರುಳಾಗದಂತೆ ಹಾಗೂ ವಿಶೇಷ ಕೋರ್ಸುಗಳ ಹೆಸರಿನಲ್ಲಿ ಆಕರ್ಷಿಸುವ ಶಿಕ್ಷಣ ಸಂಸ್ಥೆಗಳ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಎಚ್ಚರ ವಹಿಸಬೇಕಾಗಿ ಹೇಳಲಾಗಿದೆ.

ಯುಜಿಸಿ

1956 ರಲ್ಲಿ ಯುಜಿಸಿ ಆ್ಯಕ್ಟ್ ಮೂಲಕ ಸ್ಥಾಪನೆಗೊಂಡ ವಿಶ್ವವಿದ್ಯಾಲಯಗಳ ಅನುದಾನ ಆಯೋಗ(ಯುಜಿಸಿ) ಮಾನವ ಸಚಿವಾಲಯ ಸಂಪನ್ಮೂಲ ಅಭಿವೃದ್ಧಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಶಿಕ್ಷಣದಲ್ಲಿ ಗುಣಮಟ್ಟ, ಸಮನ್ವಯ, ನಿರ್ಣಯ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಇದು ಹೊಂದಿದೆ. ಭಾರತದಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವುದು ಮತ್ತು ಹಣಕಾಸಿನ ವ್ಯವಸ್ಥೆ ಮಾಡುವುದು ಇದರ ಪ್ರಮುಖ ಕಾರ್ಯವಾಗಿದೆ. ದೆಹಲಿಯಲ್ಲಿ ಪ್ರಧಾನ ಕಛೇರಿ ಹೊಂದಿದ್ದು, ಪುಣೆ, ಭೋಪಾಲ್, ಕೋಲ್ಕತಾ, ಹೈದರಾಬಾದ್, ಗೌಹಾತಿ ಮತ್ತು ಬೆಂಗಳೂರು ಸೇರಿದಂತೆ ದೇಶದಲ್ಲಿ ಆರು ಪ್ರಾದೇಶಿಕ ಕೇಂದ್ರಗಳನ್ನು ಯುಜಿಸಿ ಹೊಂದಿದೆ.

ಯುಜಿಸಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ ಗಮನಿಸಿ www.ugc.ac.in

English summary
The University Grants Commission and the All India Council for Technical Education on Monday released on its website a list of 23 fake universities and 279 fake technical institutes across India.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia