ಶಾಲಾ ಪ್ರವೇಶಕ್ಕೆ ಮುಂದಿನ ವರ್ಷದಿಂದ ಏಕರೂಪ ವಯೋಮಿತಿ

Posted By:

ಮಕ್ಕಳನ್ನು ಶಾಲೆಗೆ ಸೇರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಏಕರೂಪ ವಯೋಮಿತಿಯನ್ನು ಅಳವಡಿಸಿಕೊಳ್ಳವ ಬಗ್ಗೆ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಆದರೆ ಅದು ಈ ವರ್ಷದಿಂದ ಅನ್ವಯವಾಗುವುದಿಲ್ಲ ಎಂದು ತಿಳಿಸಲಾಗಿದೆ.

ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಗುವಿಗೆ 5 ವರ್ಷ, 10 ತಿಂಗಳು ಪೂರ್ಣಗೊಂಡಿರಬೇಕು ಎಂಬ ನಿಯಮ ಈ ವರ್ಷ ಅನ್ವಯ ಆಗುವುದಿಲ್ಲ.3 ವರ್ಷ 10 ತಿಂಗಳು ಪೂರ್ಣಗೊಂಡ ಮಗುವಿಗೆ ಪೂರ್ವ ಪ್ರಾಥಮಿಕ (ಎಲ್‌ಕೆಜಿ) ಮತ್ತು 5 ವರ್ಷ 10 ತಿಂಗಳು ಆದ ಮಗುವಿಗೆ ಒಂದನೇ ತರಗತಿಗೆ ಪ್ರವೇಶ ನೀಡಬೇಕು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು.

ಈ ನಿಯಮ 2017-18ನೇ ಸಾಲಿನಿಂದ ಜಾರಿಗೆ ಬರುತ್ತದೆ. ಆದರೆ, ಈಗಾಗಲೇ ಪೂರ್ವ ಪ್ರಾಥಮಿಕ ತರಗತಿಗಳಿಗೆ (ಎಲ್‌ಕೆಜಿ, ಯುಕೆಜಿ) ದಾಖಲಾತಿ ಪಡೆದ ಮಕ್ಕಳಿಗೆ ಇದು ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಐದು ವರ್ಷ ಹತ್ತು ತಿಂಗಳು ಪೂರೈಸದ ಕೆಲವು ಮಕ್ಕಳಿಗೆ ಒಂದನೇ ತರಗತಿ ಪ್ರವೇಶ ನೀಡಲು ಖಾಸಗಿ ಶಾಲೆಗಳು ನಿರಾಕರಿಸುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಆದರೆ ಈಗಾಗಲೇ ಎಲ್‌ಕೆಜಿ, ಯುಕೆಜಿ ಪೂರ್ಣಗೊಳಿಸಿದ ಮಕ್ಕಳಿಗೆ 1ನೇ ತರಗತಿಗೆ ಪ್ರವೇಶ ನಿರಾಕರಿಸಬಾರದು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ  ಕೆ.ಆನಂದ್‌ ತಿಳಿಸಿದ್ದಾರೆ.

ಶಾಲಾ ಪ್ರವೇಶಕ್ಕೆ ಏಕರೂಪ ವಯೋಮಿತಿ

ಏಕರೂಪ ವಯೋಮಿತಿ ಆದೇಶ

ಈ ಜ್ಞಾಪನ ಸರ್ಕಾರಿ ಶಾಲೆಗಳಿಗೆ, ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಅನುಧಾನ ರಹಿತ ಅನುದಾನ ಸಹಿತ ಶಾಲೆಗಳಿಗೆ ಅನ್ವಯಿಸುತ್ತದೆ.

ಶಾಲೆಯಿಂದ ಹೊರಗುಳಿದ 6 ರಿಂದ 14 ವರ್ಷದೊಳಗಿನ ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯಲು ಶಾಲೆಗಳಿಗೆ ಬಂದಲ್ಲಿ ದಾಖಲಾತಿಯನ್ನು ನಿರಾಕರಿಸುವಂತಿಲ್ಲ. 6 ರಿಂದ 14 ವಯೋಮಾನದ ಯಾವುದೇ ಮಗು ಪ್ರವೇಶ ಕೋರಿ ಬಂದಲ್ಲಿ ಮಗುವಿನ ವಯೋಮಾನಕ್ಕನುಗುಣವಾಗಿ ತರಗತಿಯನ್ನು ಸ್ಥಾನಿಕರಿಸಿ ಪ್ರವೇಶ ನೀಡುವುದು.

ಉದಾಹರಣೆಗೆ: ಶಾಲೆಯಿಂದ ಹೊರಗುಳಿದ 9 ನೇ ವರ್ಷದ ಮಗು ದಾಖಲಾತಿ ಬಯಸಿ ಬಂದಲ್ಲಿ ಆ ಮಗುವನ್ನು ವಯೋಮಾನಕ್ಕನುಗುಣವಾಗಿ ಶಾಲೆಯ ಮುಖ್ಯಸ್ಥರು 4 ನೇ ತರಗತಿಗೆ ದಾಖಲು ಮಾಡಿಕೊಳ್ಳತಕ್ಕದ್ದು. ಹೀಗೆ 14 ವರ್ಷದವರೆವಿಗೂ ವಯೋಮಾನಕ್ಕನುಗುಣವಾಗಿ ತರಗತಿಗಳನ್ನು ಸ್ಥಾನಿಕರಿಸಿ ಮಕ್ಕಳಿಗೆ ಪ್ರವೇಶ ನೀಡುವುದು.

ಈ ಮಕ್ಕಳು ಹಿಂದಿನ ತರಗತಿಗಳ ಕಲಿಕಾಂಶ/ ಸಾಮರ್ಥ್ಯಗಳನ್ನು ಇತರೆ ರೆಗ್ಯುಲರ್ ಮಕ್ಕಳಂತೆ ಸಮಾನಾಂತರವಾಗಿ ಪ್ರಗತಿ ಸಾಧಿಸಲು ಅನುವಾಗುವಂತೆ ಈ ಮಕ್ಕಳಿಗೆ ವಿಶೇಷ ಕಲಿಕಾ ಚಟುವಟಿಕೆಗಳನ್ನು ಹಾಗೂ ಬೋಧನಾ ಕಾರ್ಯಗಳನ್ನು ಮುಖ್ಯಶಿಕ್ಷಕರು ಆಯೋಜಿಸುವುದು.

  ಈ ಜ್ಞಾಪನ 2017-18 ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುತ್ತದೆ. ಹಿಂದಿನ ಸಾಲಿನಲ್ಲಿ ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗುವುದಿಲ್ಲ.

  ಮಗುವಿನ ಜನ್ಮ ದಿನಾಂಕ ಪ್ರಮಾಣ ಪಾತ್ರ ಇಲ್ಲ ಎಂಬ ಕಾರಣದಿಂದ ಯಾವುದೇ ಮಗುವನ್ನು ಶಾಲಾ ದಾಖಲಾತಿಗೆ ನಿರಾಕರಿಸುವಂತಿಲ್ಲ. ಹುಟ್ಟಿದ ದಿನಾಂಕ ಬಗ್ಗೆ ಅಧಿಕೃತ ದಾಖಲೆ ಇಲ್ಲದಿದ್ದಲ್ಲಿ ಪೋಷಕರಿಂದ ಸ್ವಯಂ ಘೋಷಣಾ ಲಿಖಿತ ಹೇಳಿಕೆಯನ್ನು ಪಡೆದು ದಾಖಲಾತಿ ಮಾಡಿಕೊಳ್ಳಲು ಸೂಚಿಸಿದೆ.

  ಪೂರ್ವ ಪ್ರಾಥಮಿಕ (ಎಲ್.ಕೆ.ಜಿ)ಗೆ ಹಾಗು ಪ್ರಾಥಮಿಕ ಒಂದನೇ ತರಗತಿಗೆ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಮೇಲೆ ತಿಳಿಸಿರುವ ಎಲ್ಲಾ ಸೂಚನೆಯನ್ನು ಪಾಲಿಸಬೇಕು. ಯಾವುದೇ ಲೋಪದೋಷ ಕಂಡುಬಂದಲ್ಲಿ ಸಂಬಂಧಪಟ್ಟ ಮುಖ್ಯಶಿಕ್ಷಕರನ್ನು ನೇರವಾಗಿ ಜವಾಬ್ದಾರರನ್ನಾಗಿ ಮಾಡಿ ಸೂಕ್ತ ಕ್ರಮ ಜರುಗಿಸಲಾಗುವುದು.

  English summary
  All schools in the state will have a uniform admission age for their pre-primary sections from academic year 2017-18

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia