ಯುಪಿಎಸ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ: 1099 ಅಭ್ಯರ್ಥಿಗಳು ಆಯ್ಕೆ

Posted By:

2016ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) ಅಂತಿಮ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದೆ. ಈ ಬಾರಿ 1099 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ.

ಕೋಲಾರದ ಕೆಂಬೋಡಿ ಹಳ್ಳಿಯ ಕೆ.ಆರ್. ನಂದಿನಿ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​ಸಿ) 2016ನೇ ಸಾಲಿನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಈ ಹಿಂದೆ ವಿಜಯಲಕ್ಷ್ಮೀ ಬಿದರಿ ಹೊರತು ಪಡಿಸಿದರೆ ಇದುವರೆಗೂ ಕರ್ನಾಟಕದ ಅಭ್ಯರ್ಥಿಗಳು ಯಾರೂ ಪ್ರಥಮ ಸ್ಥಾನ ಪಡೆದಿರಲಿಲ್ಲ. ಇದೀಗ ನಂದಿನಿ ಮೇರು ಸಾಧನೆ ಮಾಡಿದ 2ನೇ ಕನ್ನಡಿಗರೆನಿಸಿದ್ದಾರೆ.

1099 ಅಭ್ಯರ್ಥಿಗಳ ಆಯ್ಕೆ

ಒಟ್ಟಾರೆ 1,099 ಅಭ್ಯರ್ಥಿಗಳನ್ನು ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಲಾಗಿದ್ದು, 220 ಅಭ್ಯರ್ಥಿಗಳನ್ನು ವೇಟಿಂಗ್ ಲಿಸ್ಟ್ ನಲ್ಲಿ ಇಡಲಾಗಿದೆ. ಪೊಲೀಸ್ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಗ್ರೂಪ್ ಎ ಹಾಗೂ ಬಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 500 ಅಭ್ಯರ್ಥಿಗಳು ಸಾಮಾನ್ಯ ವರ್ಗದವರಾಗಿದ್ದು, 347 ಅಭ್ಯರ್ಥಿಗಳು ಒಬಿಸಿ ವರ್ಗದಡಿ, 163 ಮಂದಿ ಎಸ್​ಸಿ ಹಾಗೂ 89 ಅಭ್ಯರ್ಥಿಗಳನ್ನು ಎಸ್​ಟಿ ವರ್ಗಗಳಿಂದ ಆಯ್ಕೆ ಮಾಡಲಾಗಿದೆ.

ಯುಪಿಎಸ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಯಾವ ಹುದ್ದೆಗೆ ಆಯ್ಕೆ?

ಐಎಎಸ್​ಗೆ (ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್) 180, ಐಎಫ್​ಎಸ್ (ಇಂಡಿಯನ್ ಫಾರಿನ್ ಸರ್ವೀಸ್) 45, ಐಪಿಎಸ್ (ಇಂಡಿಯನ್ ಪೊಲೀಸ್ ಸರ್ವೀಸ್) 150, ಕೇಂದ್ರ ಸರ್ಕಾರದ ಎ ಗ್ರೂಪ್ ಹುದ್ದೆಗೆ 603 ಹಾಗೂ ಬಿ ಗ್ರೂಪ್ ಹುದ್ದೆಗೆ 231 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಪರೀಕ್ಷಾ ವಿವರ

ಐಎಎಸ್‌, ಐಎಫ್‌ಎಸ್, ಐಪಿಎಸ್‌ ಸೇರಿದಂತೆ ಕೇಂದ್ರ ನಾಗರಿಕ ಸೇವಾ ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿ ಪರೀಕ್ಷೆ ನಡೆಸುತ್ತದೆ. 2016ರ ಆಗಸ್ಟ್‌ನಲ್ಲಿ ಪೂರ್ವಭಾವಿ ಪರೀಕ್ಷೆ ನಡೆದಿತ್ತು. 11,35,943 ಅಭ್ಯರ್ಥಿಗಳು ಪರೀಕ್ಷೆ ನೋಂದಾಯಿಸಿದ್ದರು. ಆದರೆ 4,59,659 ಜನರು ಪರೀಕ್ಷೆ ಬರೆದಿದ್ದರು. ಅದರಲ್ಲಿ 15,452 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. 2016ರ ಡಿಸೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಇದರಲ್ಲಿ ಅರ್ಹತೆ ಪಡೆದ 2,961 ಅಭ್ಯರ್ಥಿಗಳಿಗೆ 2017ರ ಮಾರ್ಚ್‌ ಮತ್ತು ಮೇ ತಿಂಗಳಿನಲ್ಲಿ ವ್ಯಕ್ತಿತ್ವ ಪರೀಕ್ಷೆ ನಡೆದಿತ್ತು.

www.upsc.gov.in ವೆಬ್​ಸೈಟ್​ನಲ್ಲಿ ಫಲಿತಾಂಶ ವೀಕ್ಷಿಸಬಹುದು.

English summary
Union Public Service Commission has announced the results for the Civil Services Examination 2016. UPSC says 1099 candidates have cleared the examination, Karnataka's Nandini KR has topped.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia