ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಇಂದಿನಿಂದ ಮೌಲ್ಯಾಂಕನ ಪರೀಕ್ಷೆ

Posted By:

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುವ ಮಕ್ಕಳ ಕಲಿಕಾ ಮಟ್ಟ ಅಳೆಯಲು ನಡೆಸಲಾಗುತ್ತಿರುವ ಮೌಲ್ಯಾಂಕನ ಪರೀಕ್ಷೆ ಇಂದಿನಿಂದ ಆರಂಭವಾಗಿದೆ.

ಎಲ್ಲಾ ಮಾಧ್ಯಮದ 4 ರಿಂದ 9ನೇ ತರಗತಿಗಳ ವಿದ್ಯಾರ್ಥಿಗಳ ಅರ್ಹತೆ ಮತ್ತು ಸಾಧನಾ ಮಟ್ಟವನ್ನು ಪರಿಶೀಲಿಸುವ ಸಲುವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಪರೀಕ್ಷೆ ನಡೆಸುತ್ತಿದೆ.

ಇಂದಿನಿಂದ ಮೌಲ್ಯಾಂಕನ ಪರೀಕ್ಷೆ

ಇದೇ ಮೊದಲ ಬಾರಿಗೆ ನಡೆಯುತ್ತಿರುವ ಪರೀಕ್ಷೆಗೆ ಕರ್ನಾಟಕ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿಯು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಒಟ್ಟು 36 ಲಕ್ಷದ 96ಸಾವಿರದ 791 ವಿದ್ಯಾರ್ಥಿಗಳು ಭಾಗಿಯಾಗುತ್ತಿದ್ದಾರೆ.

ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಆಂಗೀಕರಣ ಪರಿಷತ್ತಿನ ಸಹಯೋಗದೊಂದಿಗೆ ನಡೆಯುತ್ತಿರುವ ಈ ಪರೀಕ್ಷೆಯಲ್ಲಿ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ನಾಲ್ಕು ವಿಷಯಗಳ ಹಾಗೂ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಆರು ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ.

ಪರೀಕ್ಷಾ ವಿಧಾನ

  • ಪ್ರತಿ ವಿಷಯವೂ 24 ಪ್ರಶ್ನೆಗಳನ್ನು ಒಳಗೊಂಡಿದ್ದು, 30 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.
  • ಪ್ರತಿ ವಿಷಯದಲ್ಲೂ ಎರಡು ರೀತಿಯ ಬಹು ಆಯ್ಕೆ ಪ್ರಶ್ನೆಗಳನ್ನು ನೀಡಲಾಗಿರುತ್ತದೆ. 1 ರಿಂದ 18 ನೇ ಪ್ರಶ್ನೆಯವರೆಗೆ ಒಟ್ಟು 18 ಪ್ರಶ್ನೆಗಳು ಸಾಮಾನ್ಯ ರೂಪದ ಬಹು ಆಯ್ಕೆ ಪ್ರಶ್ನೆಗಳಾಗಿದ್ದು, ಪ್ರತಿ ಪ್ರಶ್ನೆಗೂ 1 ಅಂಕ ನೀಡಲಾಗಿರುತ್ತದೆ. 19 ರಿಂದ 24 ನೇ ಪ್ರಶ್ನೆಯವರೆಗೆ ಒಟ್ಟು 6 ಪ್ರಶ್ನೆಗಳು ವಿವರಣಾತ್ಮಕ ಬಹುಆಯ್ಕೆ ಪ್ರಶ್ನೆಗಳಾಗಿದ್ದು, ಪ್ರತಿ ವಿವರಣಾತ್ಮಕ ಪ್ರಶ್ನೆಗೂ 2 ಅಂಕ ನಿಗದಿಗೊಳಿಸಲಾಗಿರುತ್ತದೆ.
  • 4 ಹಾಗೂ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನೊಳಗೊಂಡ ಬುಕ್‌ಲೆಟ್‌ಗೆ ಹಾಗೂ ಕೋರ್‌ ವಿಷಯಗಳನ್ನೊಳಗೊಂಡ ಬುಕ್‌ಲೆಟ್‌ಗೆ ಉತ್ತರಿಸಲು ತಲಾ 2 ತಾಸು ಸಮಯ ನೀಡಲಾಗುತ್ತದೆ.
  • 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳನ್ನೊಳಗೊಂಡ ಬುಕ್‌ಲೆಟ್‌ಗೆ ಹಾಗೂ ಕೋರ್‌ ವಿಷಯಗಳನ್ನೊಳಗೊಂಡ ಬುಕ್‌ಲೆಟ್‌ಗೆ ಉತ್ತರಿಸಲು 150 ನಿಮಿಷ ಸಮಯ ನೀಡಲಾಗುತ್ತದೆ.

ಪರೀಕ್ಷೆಯ ಉದ್ದೇಶ

ವಿದ್ಯಾರ್ಥಿಗಳು ತಮ್ಮ ಅರ್ಹತಾ ಮಟ್ಟ ತಿಳಿದುಕೊಳ್ಳುವಂತೆ ಮಾಡುವುದು. ಪಾಲಕರಿಗೆ ವಿದ್ಯಾರ್ಥಿಗಳ ಸಾಧನಾ ಮಟ್ಟವನ್ನು ತಿಳಿಸುವ ಮೂಲಕ ಪಾಲಕರಲ್ಲಿ ಅಭಿಪ್ರೇರಣೆ (ಮೋಟಿವೇಷನ್‌) ಉಂಟು ಮಾಡುವುದು, ಶಿಕ್ಷಕರು ತಮ್ಮ ಕಲಿಕಾ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಪ್ರೇರೇಪಿಸುವುದು ಮತ್ತು ಅನುಪಾಲನೆಯ ರೂಪುರೇಷೆಗಳನ್ನು ರಚಿಸಲು ಇಲಾಖೆಗೆ ಸಹಕಾರ ನೀಡುವುದು ಇದರ ಉದ್ದೇಶವಾಗಿದೆ.

English summary
Department of public instructions validation test for 4th to 9th starts from today. This test is conducting to analyze the ability of students who are studying in government and aided schools.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia