ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ನೇಮಕಾತಿ ಪ್ರಕ್ರಿಯೆ ಸ್ಥಗಿತ

Posted By:

ಯುಜಿಸಿಯ 12ಬಿ ಮಾನ್ಯತೆಯನ್ನು ಇನ್ನೂ ಪಡೆಯಲಾಗದ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇದೇ 3 ರಿಂದ ನಡೆಯುತ್ತಿದ್ದ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.

ಉನ್ನತ ಶಿಕ್ಷಣ ಇಲಾಖೆಯ ಮೌಖಿಕ ಸೂಚನೆ ಮೇರೆಗೆ, ಅಭ್ಯರ್ಥಿಗಳ ಸಂದರ್ಶನವನ್ನು ರದ್ದುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು ಅದಕ್ಕಾಗಿ ವಿಶೇಷ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

ಆನ್ಲೈನ್ ಪರೀಕ್ಷೆ ಮೂಲಕ ನೇಮಕಾತಿ

ಇಲಾಖೆಯು ಸಂದರ್ಶನ ಪ್ರಕ್ರಿಯೆ ಬದಲಿಗೆ ಆನ್‌ಲೈನ್‌ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರಲು ಉದ್ದೇಶಿಸಿರುವುದರಿಂದ, ನೇಮಕಾತಿ ಪ್ರಕ್ರಿಯೆಯ ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ.

ಯುಜಿಸಿ ನಿಯಮ

ಯು.ಜಿ.ಸಿ ನಿಯಮಾವಳಿ ಪ್ರಕಾರ ಒಮ್ಮೆ ಆರಂಭವಾದ ನೇಮಕಾತಿ ಸಂದರ್ಶನ ಪ್ರಕ್ರಿಯೆಯನ್ನು ರದ್ದುಗೊಳಿಸುವಂತಿಲ್ಲ. ಹೀಗಾಗಿ, ಈಗಾಗಲೇ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕಿದ್ದ ಅಭ್ಯರ್ಥಿಗಳ ಬಗ್ಗೆ ವಿವಿಯು ಯಾವ ಕ್ರಮ ಕೈಗೊಳ್ಳಲಿದೆ ಎನ್ನುವುದು ಮುಂದಿನ ಪ್ರಶ್ನೆಯಾಗಿದೆ. ಸಂದರ್ಶನ ಎದುರಿಸಬೇಕಾಗಿದ್ದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆ ನಡೆಸಲಾಗುತ್ತದೆಯೇ ಎಂಬ ಪ್ರಶ್ನೆಗಳು ಮೂಡಿದ್ದು, ವಿಶ್ವವಿದ್ಯಾಲಯದ ಕಡೆಯಿಂದ ಇನ್ನು ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಬಳ್ಳಾರಿ ವಿವಿ ನೇಮಕಾತಿ ಪ್ರಕ್ರಿಯೆ ಸ್ಥಗಿತ

ನೇಮಕಾತಿ ಅಧಿಸೂಚನೆ

ಕಳೆದ ವರ್ಷ ಜೂನ್-ಜುಲೈ ನಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ 94 ವಿವಿಧ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಸ್ಥಳೀಯ ವೃಂದದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿತ್ತು.

ನೇಮಕಾತಿ ಕೇಂದ್ರೀಕರಣ ಉದ್ದೇಶ

ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ಸಂದರ್ಭದಲ್ಲಿ ಅವ್ಯವಹಾರ ತಡೆಯಲು ಉನ್ನತ ಶಿಕ್ಷಣ ಇಲಾಖೆಯು ನೇಮಕಾತಿ ಪ್ರಕ್ರಿಯೆಯನ್ನು ಕೇಂದ್ರೀಕರಿಸಲು ನಿರ್ಧರಿಸಿರುವುದರಿಂದ, ನೇಮಕಾತಿ ಪ್ರಕ್ರಿಯೆಗೆ ತಡೆ ಒಡ್ಡಿದೆ ಎಂದು ಹೇಳಲಾಗಿದೆ. ಆದರೆ ಇಲ್ಲಿ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಲೋಪವಾಗಿರುವುದರಿಂದ ತಡೆ ಒಡ್ಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ನೇಮಕಾತಿಗೆ ಆನ್ಲೈನ್ ಪರೀಕ್ಷೆ

ಇನ್ನು ಮುಂದೆ ಪ್ರಾಧ್ಯಾಪಕ ಮತ್ತು ಇನ್ನಿತರ ನೇಮಕಾತಿಗೆ ಆನ್ ಲೈನ್ ಪರೀಕ್ಷೆ ಬರುವುದು ಖಚಿತವಾಗಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿಯವರು ಆನ್ ಲೈನ್ ಪರೀಕ್ಷೆ ನೇಮಕಾತಿ ಬಗ್ಗೆ ಪ್ರಸ್ತಾಪಿಸಿದ್ದರು.

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ತುಂಬುವ ದಿಟ್ಟ ನಿರ್ಧಾರವನ್ನು ಸರ್ಕಾರ ಈಗಾಗಲೇ ಕೈಗೊಂಡಿದೆ. ವಿ.ವಿ.ಗಳ ನೇಮಕಾತಿಯಲ್ಲೂ ಪರೀಕ್ಷೆ ಮೂಲಕ ಪಾರದರ್ಶಕತೆ ತಂದರೆ ಅದರಿಂದ ವಿಶ್ವವಿದ್ಯಾಲಯಗಳ ಗುಣಮಟ್ಟ ಕೂಡ ಹೆಚ್ಚಲಿದೆ.

ಉನ್ನತ ಶಿಕ್ಷಣದಲ್ಲಿ ವಿಶ್ವವಿದ್ಯಾಲಯಗಳಲ್ಲಿನ  ಪ್ರಾಧ್ಯಾಪಕ ಹುದ್ದೆಗಳಂತಹ ಉನ್ನತ ಹುದ್ದೆಗಳನ್ನು ಪಡೆಯಲು ಬರೀ ಅರ್ಹತೆ ಇದ್ದರೆ ಸಾಲದು.ಅದರೊಂದಿಗೆ ಹಣ, ಅಧಿಕಾರದ ಬಲವೂ ಇರಬೇಕೆಂಬ ಸ್ಥಿತಿ ಇದೆ. ಪ್ರತಿಭೆಗಿಂತ ಹಣ ಮತ್ತು ಅಧಿಕಾರವುಳ್ಳವರ ಕೃಪಾಕಟಾಕ್ಷವೇ ಮುಖ್ಯ ಎನ್ನುವಂತ ಇಂದಿನ ಸ್ಥಿತಿಯಲ್ಲಿ ಆನ್ ಲೈನ್ ಪರೀಕ್ಷೆ ಬರುವುದು ಸೂಕ್ತ ಎನ್ನುವುದು ಬಹುತೇಕರ ಅಭಿಪ್ರಾಯ ಕೂಡ ಆಗಿದೆ.

ಈಗಿನ ಪರಿಸ್ಥಿತಿಯಲ್ಲಿ  ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಆನ್ ಲೈನ್ ಪರೀಕ್ಷೆ ಬಂದರೂ ಅಚ್ಚರಿಯಿಲ್ಲ.

English summary
vijayanagara srikrishnadevaraya university recruitment for professor, associate professor and assistant professor posts has temporarily stopped.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia